Advertisement

ಇಂದು ಯುವ ಕೋವಿಡ್‌ ಲಸಿಕಾ ಮೇಳ : 15 ರಿಂದ 18 ವರ್ಷದೊಳಗಿನ ಮಕ್ಕಳು ಲಸಿಕೆ ವ್ಯಾಪ್ತಿಗೆ

01:42 PM Jan 05, 2022 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ 15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಅವರು ಓದುತ್ತಿರುವ ಶಾಲಾ ಕಾಲೇಜುಗಳಲ್ಲಿಯೇ ಜ.5ರಂದು ಕೊರೊನಾ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದೆ.
ಕೊರೊನಾ ಲಸಿಕೆ ಪಡೆಯದೇ ಬಾಕಿ ಉಳಿಯಲಿರುವ ವಿವಿಧ ಶಾಲಾ ಕಾಲೇಜುಗಳ 15 ವರ್ಷಕ್ಕೂ ಮೇಲ್ಪಟ್ಟ ಮಕ್ಕಳೆಲ್ಲರನ್ನು ಜ.5ರಂದೇ ಕೋವಿಡ್‌ ಲಸಿಕೆ ವ್ಯಾಪ್ತಿಗೆ ಒಳಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್‌.ಲತಾ, ಸಂಬಂಧ ಪಟ್ಟ ಇಲಾಖೆ ಅ ಧಿಕಾರಿಗಳಿಗೆ ಸೋಮವಾರ ಮತ್ತು ಮಂಗಳವಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಯುವ ಜನತೆ ಲಸಿಕೆ ವ್ಯಾಪ್ತಿಗೆ ಒಳಪಡಿಸಿ: ಡೀಸಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ “ಯುವ ಕೋವಿಡ್‌ ಲಸಿಕಾ ಮೇಳ’ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಅವರು ಯುವ ಜನತೆಯನ್ನು ಲಸಿಕೆ ವ್ಯಾಪ್ತಿಗೆ ಒಳಪಡಿಸಿ ಕೋವಿಡ್‌ನಿಂದ ಸಂಪೂರ್ಣ ರಕ್ಷಣೆಗೆ ತರಲು ಜಿಲ್ಲೆಯಲ್ಲಿ ಲಸಿಕಾ ಮೇಳ ಹಮ್ಮಿಕೊಳ್ಳುವಂತೆ ನಿರ್ದೇಶಿಸಿದ್ದಾರೆ. ಅದರಂತೆ ಜಿಲ್ಲಾದ್ಯಂತ ವಿವಿಧ ಶಾಲಾ ಕಾಲೇಜುಗಳಲ್ಲಿ 70ಕ್ಕೂ ಹೆಚ್ಚು ಸತ್ರಗಳೊಂದಿಗೆ ಜ.5ರಂದು ಕೋವಿಡ್‌ ಯುವ ಲಸಿಕಾ ಮೇಳ
ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಇಂದು ಲಸಿಕಾ ಮೇಳ: ಜ.3ರಿಂದ 15 ರಿಂದ 18 ವರ್ಷದ ಒಳಗಿನ ಲಸಿಕೆ ಪಡೆಯಲು ಅರ್ಹರಿರುವ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ನೀಡುವ ಕಾರ್ಯ ಭರದಿಂದ ನಡೆಸಲಾಗುತ್ತಿದೆ. ಜಿಲ್ಲಾದ್ಯಂತ ಈ ವಯೋಮಾನದ 65,648 ಮಕ್ಕಳಿದ್ದು, ಈ ಪೈಕಿ ಜ.3ರಂದು ಜಿಲ್ಲಾದ್ಯಂತ 7 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಮಂಗಳವಾರ ಕೂಡ ಈ ಸಂಖ್ಯೆ ದ್ವಿಗುಣ ಆಗಿದೆ. ಇನ್ನುಳಿದ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬುಧವಾರದ ಯುವ ಲಸಿಕಾ ಮೇಳದಲ್ಲಿ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯತೆಯೊಂದಿಗೆ ಯೋಜನೆ ರೂಪಿಸಿಕೊಂಡು ಆರೋಗ್ಯಾಧಿಕಾರಿಗಳ ಮಟ್ಟದಲ್ಲಿ ಜಿಲ್ಲಾದ್ಯಂತ ತಂಡ ರಚಿಸಿಕೊಂಡು ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜುಗಳ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಯಾರು ವಂಚಿತರಾಗಬಾರದು : ಶಾಲಾ ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳೆಲ್ಲರಿಗೂ ಜ.5 ರಂದು ಲಸಿಕೆ ನೀಡಲಾಗುವುದು. ಇನ್ನುಳಿದಂತೆ ಗೈರು ಹಾಜರಾಗುವ, ಶಾಲೆಯಿಂದ ಹೊರಗುಳಿದಿರುವ 15 ವರ್ಷಕ್ಕೂ ಮೆಲ್ಪಟ್ಟ ಮಕ್ಕಳಿಗೂ ಒಂದೆರಡು ದಿನಗಳಲ್ಲಿ ಲಸಿಕೆ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Advertisement

ಹೆಚ್ಚಿನ ನಿಗಾವಹಿಸಿ: ಜಿಲ್ಲೆಯಲ್ಲಿ 15 ವರ್ಷಕ್ಕೂ ಮೆಲ್ಪಟ್ಟ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು, ಈ ನಿಟ್ಟಿನಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು, ಶಾಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಮುಖ್ಯಸ್ಥರು, ಬಿಇಒಗಳು ಹೆಚ್ಚಿನ ನಿಗಾ ವಹಿಸಬೇಕು ಎಂದರು.

ತ್ವರಿತವಾಗಿ ಎರಡೂ ಡೋಸ್‌ ಮುಗಿಸಿ: 15 ವರ್ಷಕ್ಕೂ ಮೇಲ್ಪಟ್ಟ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಗೈರು ಹಾಜರಾಗದಂತೆ ವಿದ್ಯಾರ್ಥಿಗಳ ಪೋಷಕರು ನಿಗಾ ವಹಿಸಿ ಮಕ್ಕಳಲ್ಲಿ ಧೈರ್ಯ ತುಂಬಿ ಶಾಲೆಗಳಿಗೆ ಕಳುಹಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಪೋಷಕರಲ್ಲಿ ಮನವಿ ಮಾಡಿದರು.

ಲಸಿಕಾ ಮೇಳ ಯಶಸ್ವಿಗೊಳಿಸಿ: ಜಿಲ್ಲೆಯಲ್ಲಿ ಈವರೆಗೆ 18 ವರ್ಷಕ್ಕೂ ಮೇಲ್ಪಟ್ಟ ಜನರಿಗೆ ಲಸಿಕೆ ಹಾಕಲು ಆಯೋಜಿಸಿದ್ದ ಮೆಗಾ ಲಸಿಕಾ ಮೇಳ, ಉತ್ಸವ ಹಾಗೂ ಅಭಿಯಾನಗಳಲ್ಲಿ ಜಿಲ್ಲೆಯ ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ. ರಾಜ್ಯ ಮಟ್ಟದ ಪಟ್ಟಿಯಲ್ಲಿ ಹಲವು ಬಾರಿ ಪ್ರಥಮ ಸ್ಥಾನವನ್ನು ಚಿಕ್ಕಬಳ್ಳಾಪುರ ಜಿಲ್ಲೆಗಳಿಸಿತ್ತು. ಅದೇ ರೀತಿ 15 ವರ್ಷಕ್ಕೂ ಮೇಲ್ಪಟ್ಟ ಎಲ್ಲರೂ ಕೋವಿಡ್‌ ಲಸಿಕೆ ಪಡೆಯುವ ಮೂಲಕ ಜ.5ರ ಲಸಿಕಾಮೇಳ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಡಿಎಚ್‌ಒ ಇಂದಿರಾ ಆರ್‌.ಕಬಾಡೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯ ರಾಮರೆಡ್ಡಿ, ಬಿಇಒ, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next