ಶಿಡ್ಲಘಟ್ಟ: (ಚಿಕ್ಕಬಳ್ಳಾಪುರ) ಬಯಲು ಪ್ರದೇಶದಲ್ಲಿ ಹುಲ್ಲು ಮೇಯಿಸುವಾಗ ಇದ್ದಕಿದ್ದಂತೆ 6ಕ್ಕೂ ಹೆಚ್ಚು ಕುರಿಗಳ ಹೊಟ್ಟೆ ಸಿಡಿದುಕೊಂಡು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿಯ ಯಣ್ಣೂರು ಗ್ರಾಮದಲ್ಲಿ ಬುಧವಾರ ನಡೆದಿದೆ.
ದಿಡೀರ್ ಅಂತ ಹುಲ್ಲು ಮೇಯುತ್ತಿದ್ದ ಆರು ಕುರಿಗಳು ಸಾವನ್ನಪ್ಪಿವೆ. ಯಣ್ಣೂರು ಗ್ರಾಮದ ರೈತ ಎಂ ನಾರಾಯಣಸ್ವಾಮಿ ಅವರಿಗೆ ಸೇರಿದ ಈ ಕುರಿಗಳು ದಿಡೀರ್ ಹೊಟ್ಟೆ ಹೊಡೆದುಕೊಂಡು ಮೃತಪಟ್ಟಿರುವುದು ರೈತನನ್ನು ಅಘಾತಕ್ಕೀಡು ಮಾಡಿದೆ.
ಸುಮಾರು 50ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸಲು ಹೊರಗಡೆ ಹೋದಾಗ ಇತ್ತೀಚೆ ಬಿದ್ದ ಮಳೆಯಿಂದ ಚಿಗುರು ಬಂದಿರುವ ಹುಲ್ಲನ್ನು ಮೇಯುತ್ತಿರುವ ವೇಳೆ ಈ ಘಟನೆ ನಡೆದಿದೆ. ವಿಷಯ ತಿಳಿದ ಕೂಡಲೇ ಸ್ಥಳೀಯರು ಪಶು ಇಲಾಖೆಯವರಿಗೆ ಮಾಹಿತಿ ನೀಡಿದರು. ನಂತರ ಸ್ಥಳೀಯ ಪಶು ವೈದ್ಯರು ಸ್ಥಳಕ್ಕೆ ದಾವಿಸಿ ಪ್ರಕರಣವನ್ನು ದಾಖಲಿಸಿಕೊಂಡರು. ಇನ್ನು ಉಳಿದ ಕುರಿಗಳಿಗೆ ತೊಂದರೆಯಾಗದಂತೆ ಚಿಕಿತ್ಸೆ ನೀಡಲಾಯಿತು. ಘಟನೆಯಿಂದ ರೈತ ನಾರಾಯಣಸ್ವಾಮಿಗೆ ಸುಮಾರು 60 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ಕೋರಿದರು.
ಹೆಚ್ಚು ಮೇವು ತಿಂದಿದ್ದರಿಂದ ಸಾವು:
ರೈತ ನಾರಾಯಣಸ್ವಾಮಿ ಅವರು ಸಾಕಿದ 50 ಕುರಿಗಳಲ್ಲಿ ಮೃತಪಟ್ಟ ಆರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇತ್ತೀಚೆಗೆ ಬಿದ್ದ ಮಳೆಯಿಂದ ಎಳೆಯಾಗಿ ಬೆಳೆದಿದ್ದ ರಾಗಿ ಪೈರು ತಿಂದು, ಹೊಟ್ಟೆ ತುಂಬಿದರು ಸಹ ಹೆಚ್ಚು ಮೇವನ್ನು ತಿಂದು 6 ಕುರಿಗಳು ಬಲಿಯಾಗಿವೆ. ಬಲಿಯಾದಂತಹ ಕುರಿಗಳಿಗೆ ಸರ್ಕಾರದಿಂದ ಅನುಗ್ರಹ ಯೋಜನೆಯಲ್ಲಿ ಒಂದು ಕುರಿಗೆ 5 ಸಾವಿರ ರೂಪಾಯಿ ಪರಿಹಾರ ಇದೆ ಅದನ್ನ ಫಲಾನುಭವಿಗೆ ಇಲಾಖೆಯಿಂದ ಕೊಡಿಸಲು ಪ್ರಯತ್ನಿಸುತ್ತೇವೆಂದು ತಾಲೂಕಿನ ಪಶು ವೈದ್ಯಾಧಿಕಾರಿ ಡಾ.ರಮೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: Mehbooba Mufti: ನೀತಿ ಸಂಹಿತೆ ಉಲ್ಲಂಘನೆ ಆರೋಪ… ಮೆಹಬೂಬಾ ಮುಫ್ತಿ ವಿರುದ್ಧ ಕೇಸು