Advertisement

ಚಿಕ್ಕಆದಾಪುರ ಸರಕಾರಿ ಶಾಲೆ ಕಟ್ಟಡ ಶಿಥಿಲ

12:22 PM Jun 17, 2022 | Team Udayavani |

ಇಳಕಲ್ಲ: ತಾಲೂಕಿನ ಚಿಕ್ಕಆದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದೆ. ಆರ್‌ಸಿಸಿ ಮೇಲ್ಛಾವಣಿ ಎಲ್ಲೆಂದರಲ್ಲಿ ಉದುರಿಬೀಳುತ್ತಿದೆ. ಮಕ್ಕಳು ಭಯದ ವಾತಾವರಣದಲ್ಲಿ ಪಾಠ ಆಲಿಸುವಂತಾಗಿದೆ.

Advertisement

ಚಿಕ್ಕಆದಾಪುರದಲ್ಲಿ 1938ರಲ್ಲಿ ಆರಂಭಗೊಂಡ ಪ್ರಾಥಮಿಕ ಶಾಲೆ 1ರಿಂದ 7ನೇ ತರಗತಿ ಹೊಂದಿದ್ದು, ಒಟ್ಟು 125ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದು, ಮೂವರು ಶಿಕ್ಷಕರು ಹಾಗೂ ಓರ್ವ ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯ ಶಿಕ್ಷಕರು ಸೇರಿ ಏಳು ಕೊಠಡಿಗಳಿದ್ದು, ಶಿಥಿಲಾವಸ್ಥೆಯಲ್ಲಿವೆ.

ಇದೇ ಕಟ್ಟಡದಲ್ಲಿ 2006-07ರಲ್ಲಿ ಪ್ರೌಢಶಾಲೆ ಆರಂಭಗೊಂಡಿದೆ. ಕೆಂಪು ಹಂಚು ಹೊಂದಿರುವ ಮೇಲ್ಛಾವಣಿ ಶಿಥಿಲಗೊಂಡಿರುವ ಶಾಲಾ ಕಟ್ಟಡದಲ್ಲಿ ಬೆಳಗ್ಗೆ 7ರಿಂದ 12ಗಂಟೆಯವರೆಗೆ ಪ್ರಾಥಮಿಕ ಶಾಲೆ, 12ಗಂಟೆಯಿಂದ ಸಂಜೆ 5ಗಂಟೆಯವರೆಗೆ ಪ್ರೌಢಶಾಲೆ ನಡೆಯುತ್ತಿದೆ. ಶಾಲೆಯ ಯಾವ ಕೊಠಡಿಯೂ ಸುರಕ್ಷಿತವಾಗಿಲ್ಲ. ಕೆಲವರ್ಗಗಳು ಶಾಲಾ ಆವರಣದಲ್ಲೇ ನಡೆಯುತ್ತಿವೆ. ಮಳೆಗಾಲ ಆರಂಭವಾಗುವುದರಿಂದ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದವರು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಗ್ರಾಮಸ್ಥರಿಗೆ ಇಂತಹ ಶಿಥಿಲಾವಸ್ಥೆಯಲ್ಲಿ ಇರುವ ಶಾಲೆಯಲ್ಲಿ ತಮ್ಮ ಮಕ್ಕಳೇ ಕಲಿಯುತ್ತಿದ್ದರೂ ಗ್ರಾಮಸ್ಥರು ಮಾತ್ರ ನಿರ್ಲಿಪ್ತರಾಗಿರುವುದು ವಿಷಾದಕರ ಸಂಗತಿ.

ಅಡುಗೆ ಕೊಠಡಿ ಸೇರಿದಂತೆ 10 ಕೊಠಡಿಗಳಿದ್ದು, ಆರು ಕೊಠಡಿಗಳು ದುರಸ್ತಿಯಲ್ಲಿವೆ. ಶಿಕ್ಷಣ ಪ್ರೇಮಿ ಶಿವನಗೌಡ ಮನೆತನದವರು ಪ್ರೌಢಶಾಲೆಗೆ 5 ಎಕರೆ ಭೂಮಿಯನ್ನು ಸರಕಾರಕ್ಕೆ ದಾನ ನೀಡಿದ್ದರಿಂದ 2006-07ರಲ್ಲೇ ಸುಮಾರು 23ಲಕ್ಷ ವೆಚ್ಚದಲ್ಲಿ ಪ್ರೌಢಶಾಲೆ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಯಿತು.

ಆದರೆ, ಸಮರ್ಪಕವಾಗಿ ಅನುದಾನ ಬಿಡುಗಡೆಯಾಗದ್ದರಿಂದ ಮತ್ತು ಕಟ್ಟಡ ಸಾಮಗ್ರಿಗಳಲ್ಲಿ ಬೆಲೆಯ ವ್ಯತ್ಯಾಸದಿಂದ ಕಟ್ಟಡ ಕಾಮಗಾರಿ ಕುಂಟುತ್ತ ಸಾಗಿದ್ದು, ಇದುವರೆಗೂ ಪೂರ್ಣಗೊಂಡಿಲ್ಲ ಈ ಕಾರಣದಿಂದ ಪ್ರೌಢಶಾಲೆಯು ಪ್ರಾಥಮಿಕ ಶಾಲೆಯ ಕಟ್ಟಡದಲ್ಲೆ ಉಳಿಯುವಂತಾಗಿದೆ.

Advertisement

ನಮ್ಮ ಶಾಲೆಯ ಸಮಸ್ಯೆಯನ್ನು ವಿಧಾನಸಭೆಯಲ್ಲೇ ಶಾಸಕ ದೊಡ್ಡನಗೌಡ ಜಿ. ಪಾಟೀಲ ಧ್ವನಿ ಎತ್ತಿದ್ದಾರೆ. ಈಗ ಸ್ವತಃ ಡಿಡಿಪಿಐ ಅವರೇ ಆಸಕ್ತಿ ತೋರಿಸಿದ್ದು, ಗುತ್ತಿಗೆದಾರರಿಗೆ ಉಳಿದ ಸುಮಾರು 5 ಲಕ್ಷ ಹಣವನ್ನು ಹೊಂದಿಸಿ ಕೊಡುವುದಾಗಿ ತಿಳಿಸಿದ್ದಾರೆ. ಒಂದೆರಡು ವಾರದಲ್ಲಿ ಸಮಸ್ಯೆ ಬಗೆಹರಿಯುವ ಭರವಸೆ ಇದೆ. ಈಗಿರುವ ಶಾಲೆಯ ಮೂರು ಕೊಠಡಿ ಕೆಡವಿ ಹೊಸ ಕಟ್ಟಡ ಕಟ್ಟಲು ಆದೇಶಿಸಲಾಗಿದೆ. –ವಿ.ವಾಯ್‌ ಪಾಟೀಲ, ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಲಾಲತ್ತಗಿ, ಪ್ರಾಥಮಿಕ ಶಾಲಾ ಮುಖ್ಯಗುರುಗಳು

ಶಾಲೆಯ ಕಟ್ಟಡ ಕಾಮಗಾರಿ ಸಂಪೂರ್ಣವಾಗಿದೆ. ಕೇವಲ ಬಾಗಿಲು, ಕಿಟಕಿ ಜೋಡಣೆ ಮತ್ತು ಬಣ್ಣ ಹಚ್ಚುವ ಕೆಲಸ ಮಾತ್ರ ಇದ್ದು, ಡಿಡಿಪಿಐ ಅವರು ಉಳಿದ ಬಾಕಿ ಹಣ ನೀಡುವ ಭರವಸೆ ನೀಡಿದ್ದಾರೆ. ಎರಡು ವಾರದಲ್ಲಿ ಕಟ್ಟಡವನ್ನು ಶಿಕ್ಷಣ ಇಲಾಖೆಗೆ ಒಪ್ಪಿಸುತ್ತೇನೆ. -ಶಿವನಗೌಡ ಪಾಟೀಲ ಗುತ್ತಿಗೆದಾರ

Advertisement

Udayavani is now on Telegram. Click here to join our channel and stay updated with the latest news.

Next