Advertisement

Chikballapur; ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕ್ಷೇತ್ರ ಕಳೆದ ಬಾರಿ ಬಿಜೆಪಿ ವಶ

11:42 PM Mar 23, 2024 | Team Udayavani |

ಚಿಕ್ಕಬಳ್ಳಾಪುರ: ಆಂಧ್ರದ ಗಡಿಗೆ ಹೊಂದಿಕೊಂಡಿರುವ ಅಪ್ಪಟ ರಾಯಲ ಸೀಮೆಯ ಸಂಸ್ಕೃತಿ, ಸ್ವಭಾವ ಹೊಂದಿರುವ ಜತೆಗೆ ಐತಿಹಾಸಿಕ ವಿಶ್ವವಿಖ್ಯಾತ ನಂದಿಬೆಟ್ಟ, ಈಗ ಸದ್ಗುರು ಅವರ ಈಶಾ ಕೇಂದ್ರದೊಂದಿಗೆ ಜಾಗತಿಕವಾಗಿ ಗುರುತಿಸಿಕೊಂಡಿರುವ ಹೆಗ್ಗಳಿಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕಿದೆ.

Advertisement

ರಾಜಕೀಯವಾಗಿ ಪ್ರಬಲ ಅಹಿಂದ ನಾಯಕ ಆರ್‌.ಎಲ್‌.ಜಾಲಪ್ಪ 4 ಬಾರಿ ಸಂಸದರಾಗಿದ್ದ ಹಾಗೂ ಮಾಜಿ ಸಿಎಂ ವೀರಪ್ಪ ಮೊಯ್ಲಿಗೆ ರಾಜಕೀಯ ಪುನರ್‌ ಜನ್ಮ ಕೊಟ್ಟ ಕ್ಷೇತ್ರವಿದು.

1977ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಕ್ಷೇತ್ರದಲ್ಲಿ ಈವರೆಗೆ ಒಟ್ಟು 12 ಚುನಾವಣೆಗಳು ನಡೆದಿದ್ದು, ಆ ಪೈಕಿ ಕಾಂಗ್ರೆಸ್‌ 10ರಲ್ಲಿ ಗೆದ್ದಿದ್ದು, ಜನತಾ ದಳ ಹಾಗೂ ಬಿಜೆಪಿ ಒಮ್ಮೆ ಗೆಲುವಿನ ನಗೆ ಬೀರಿದೆ.

ದಶಕಗಳ ರಾಜಕೀಯ ಹಿನ್ನೋಟವನ್ನು ಗಮನಿಸಿದರೆ ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. 2014ರಲ್ಲಿ ಮೊಯ್ಲಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿತ್ತು. 2019ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಕಾಂಗ್ರೆಸ್‌ ಕೋಟೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡದ್ದು ರಾಜಕೀಯ ಇತಿಹಾಸ. ಆರೆಸ್ಸೆಸ್‌ ಹಾಗೂ ಬಿಜೆಪಿಗೆ ನೆಲೆಯೇ ಇಲ್ಲದ ಚಿಕ್ಕಬಳ್ಳಾಪುರದಲ್ಲಿ 2009ರಿಂದ ಮಾತ್ರವೇ ಬಿಜೆಪಿ ಕಾಂಗ್ರೆಸ್‌ಗೆ ಪ್ರಬಲ ಎದುರಾಳಿಯಾಗಿ ಸ್ಪರ್ಧೆ ಒಡ್ಡುತ್ತಾ ಬರುತ್ತಿದೆ. ಅಲ್ಲಿಯವರೆಗೆ ಕ್ಷೇತ್ರದಲ್ಲಿ ಜನತಾ ದಳ ಮತ್ತು ಕಾಂಗ್ರೆಸ್‌ ಸಾಂಪ್ರದಾಯಿಕ ರಾಜಕೀಯ ಎದುರಾಳಿಗಳು ಆಗಿದ್ದವು.

ಅಹಿಂದ ವರ್ಗಕ್ಕೆ ಮಣೆ
ಕ್ಷೇತ್ರದಲ್ಲಿ ರಾಜಕೀಯವಾಗಿ ಒಕ್ಕಲಿಗರು, ಬಲಿಜಿಗರು ಪ್ರಾಬಲ್ಯ ಹೊಂದಿದ್ದಾರೆ. ಆದರೆ ಇಲ್ಲಿ ಬಹುತೇಕರು ಅಹಿಂದ ವರ್ಗದ ಅಲ್ಪಸಂಖ್ಯಾಕರೇ ಸಂಸದರಾಗಿ ಆಯ್ಕೆಗೊಂಡಿದ್ದಾರೆ. ಮೊದಲ ಹಾಗೂ ಕಳೆದ ಚುನಾವಣೆಯಲ್ಲಿ ಎಂ.ವಿ. ಕೃಷ್ಣಪ್ಪ ಮತ್ತು ಬಿ.ಎನ್‌. ಬಚ್ಚೇಗೌಡರಂಥ ಒಕ್ಕಲಿಗರು ಗೆದ್ದಿದ್ದು ಬಿಟ್ಟರೆ, ಉಳಿದಂತೆ ವಿ.ಕೃಷ್ಣರಾವ್‌, ಪ್ರಸನ್ನಕುಮಾರ್‌, ಆರ್‌.ಎಲ್‌.ಜಾಲಪ್ಪ, ವೀರಪ್ಪ ಮೊಲಿ ಹಲವು ಬಾರಿ ಸಂಸದರಾಗಿದ್ದಾರೆ. ವಿಶೇಷ ಅಂದರೆ ಕ್ಷೇತ್ರದಲ್ಲಿ ವಿ.ಕೃಷ್ಣ ರಾವ್‌ (1984ರಿಂದ 1991) ಹಾಗೂ ಜಾಲಪ್ಪ 1996ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಬಳಿಕ 1998ರಿಂದ 2004ರ ವರೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. 2009, 2014ರಲ್ಲಿ ಮೊಯ್ಲಿ ಸತತ ಗೆಲುವು ಪಡೆದರು. ಆದರೆ 2019ರಲ್ಲಿ 3ನೇ ಬಾರಿಗೆ ಗೆಲುವು ಪಡೆಯಲಾಗಲಿಲ್ಲ.

Advertisement

ಪಕ್ಷಗಳ ಬಲಾಬಲ
ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ಬಾಗೇಪಲ್ಲಿ, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ಶಾಸಕರು ಮತ್ತು ಯಲಹಂಕ ಹಾಗೂ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಗೌರಿಬಿದನೂರಿನಲ್ಲಿ ಪಕ್ಷೇತರ ಶಾಸಕರು ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ. ಕಳೆದ ಚುನಾವಣೆಯಲ್ಲಿ ಯಲಹಂಕದಲ್ಲಿ ಮಾತ್ರ ಶಾಸಕರನ್ನು ಹೊಂದಿ ಬಿಜೆಪಿ ಇಡೀ ಲೋಕಸಭಾ ಕ್ಷೇತ್ರವನ್ನು ಗೆದ್ದಿಕೊಂಡಿತು.

ಈ ಕ್ಷೇತ್ರ ಕಾಂಗ್ರೆಸ್‌ ಕೋಟೆ. ಒಂದು ಕಾಲಕ್ಕೆ ಎಡಪಕ್ಷಗಳ ಪ್ರಭಾವದಿಂದ ಇಲ್ಲಿ ಬಿಜೆಪಿ ರಾಜಕೀಯವಾಗಿ ನೆಲೆಯೂರಲು ಸಾಧ್ಯವಾಗಿರಲಿಲ್ಲ. ಮೋದಿ ನಾಮಬಲ ಹಾಗೂ ಮೊಲಿ ವಿರುದ್ಧದ ಅಲೆಯಿಂದ 2019ರಲ್ಲಿ ಗೆದ್ದ ಬಿಜೆಪಿ ಈಗ ಮತ್ತೆ ಅದೇ ಮೋದಿ ಅಲೆಯನ್ನು ನೆಚ್ಚಿಕೊಂಡಿದೆ. ಕಾಂಗ್ರೆಸ್‌ ಈ ಬಾರಿ 8ರ ಪೈಕಿ 7 ಕ್ಷೇತ್ರಗಳಲ್ಲಿ ತನ್ನ ಶಾಸಕರನ್ನು ಹೊಂದಿದೆ. ಜಾತಿ ಲೆಕ್ಕಾಚಾರದಲ್ಲಿ ಕ್ಷೇತ್ರದಲ್ಲಿ ಅಹಿಂದ ವರ್ಗ ಹೆಚ್ಚು ಪ್ರಾಬಲ್ಯ ಹೊಂದಿತ್ತು. ಇತ್ತೀಚೆಗೆ ಒಕ್ಕಲಿಗರ ಪ್ರಾಬಲ್ಯ ರಾಜಕೀಯವಾಗಿ ಹೆಚ್ಚಾಗುತ್ತಿದೆ. ಕ್ಷೇತ್ರದಲ್ಲಿ ಜಾತಿ, ಧರ್ಮ, ವ್ಯಕ್ತಿ, ಸಿದ್ಧಾಂತಕ್ಕಿಂತ ಇಲ್ಲಿ ಪಕ್ಷ ರಾಜಕಾರಣವೇ ಸದಾ ಮೇಲುಗೈ ಸಾಧಿಸುತ್ತಿದೆ.

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next