Advertisement

ಕಾಫಿನಾಡಲ್ಲಿ ನಿಲ್ಲದ ಮಳೆ ಅಬ್ಬರ

01:11 PM Nov 21, 2021 | Team Udayavani |

ಚಿಕ್ಕಮಗಳೂರು: ಜಿಲ್ಲಾದ್ಯಂತ ಅಕಾಲಿಕ ಮಳೆಯು ಅವಾಂತರ ಸೃಷ್ಟಿಸಿದ್ದು, ಸದ್ಯಕ್ಕೆ ಮಳೆ ನಿಲ್ಲುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಇದರಿಂದ ರೈತರು, ಬೆಳೆಗಾರರು ಕಂಗಾಲಾಗಿ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

Advertisement

ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ, ಶೀತಗಾಳಿಯೊಂದಿಗೆ ಮಳೆಯಾಗುತ್ತಿದೆ. ಶೀತದಿಂದ ಅಡಿಕೆ, ಕಾಫಿ, ಕಾಳುಮೆಣಸು, ಸೇರಿದಂತೆ ವಾಣಿಜ್ಯ ಬೆಳೆಗಳು ಸಂಪೂರ್ಣವಾಗಿ ನೆಲ ಕಚ್ಚಿವೆ. ಕೈಗೆ ಬಂದ ತುತ್ತು ಮಳೆಯಲ್ಲಿ ತೊಳೆದು ಹೋಗುವಂತೆ ಮಾಡಿದೆ.

ಶುಕ್ರವಾರ ರಾತ್ರಿ ಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಸುರಿದ ಭಾರೀ ಮಳೆ ಅವಾಂತರಗಳನ್ನು ಸೃಷ್ಟಿಸಿದ್ದು, ನೂರಾರು ಎಕರೆ ಜಮೀನಿನಲ್ಲಿ ನೀರು ನುಗ್ಗಿದೆ. ಓರ್ವ ವ್ಯಕ್ತಿ ಯನ್ನು ಬಲಿ ಪಡೆದುಕೊಂಡಿದೆ. ಬೆಳೆದ ಬೆಳೆ ಮಳೆನೀರಿನಲ್ಲಿ ಕೊಚ್ಚಿ ಹೋಗುವಂತೆ ಮಾಡಿದೆ. ಬರಪೀಡಿತ ತಾಲೂಕು ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಕಡೂರು ತಾಲೂಕು ಸುತ್ತ ಮುತ್ತ ಸುರಿದ ಭಾರೀ ಮಳೆಯಿಂದ ಅಂತರ್ಜಲದ ಮಟ್ಟ ಏರಿಕೆಯಾಗಿದೆ.

ತಾಲ್ಲೂಕಿನ ದೋಗೆಹಳ್ಳಿ ಗ್ರಾಮದ 10ಕ್ಕೂ ಹೆಚ್ಚು ಕೊಳವೆಬಾವಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ತರೀಕೆರೆ ತಾಲೂಕು ಲಿಂಗದಹಳ್ಳಿ ಸಿದ್ಧರಹಳ್ಳಿ ನಡುವೆ ಇರುವ ಹುಲಿತಿಮ್ಮಾಪುರ ಹಳ್ಳದ ಕಿರುಸೇತುವೆ ಮೇಲೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಪೊನ್ನಸ್ವಾಮಿ (45) ಎಂಬ ವ್ಯಕ್ತಿ ನಿಯಂತ್ರಣ ತಪ್ಪಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಅಗ್ನಿಶಾಮಕ ದಳ, ಪೊಲೀಸ್‌ ಸಿಬ್ಬಂದಿ ಹಾಗೂ ಸ್ಥಳೀಯರು ಮೃತದೇಹವನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ಲಿಂಗದಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕವಂಗಲ ಬುಳ್ಳನಕೆರೆ ತುಂಬಿ ಹರಿದು ಅರಸು ಬಡಾವಣೆಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಅಜ್ಜಂಪುರ ಬುಕ್ಕ ರಾಯನಕೆರೆ ಕೋಡಿ ಒಡೆದು ನೂರಾರು ಎಕರೆ ಪ್ರದೇಶದ ಹೊಲಗದ್ದೆಗಳಿಗೆ ನೀರು ನುಗ್ಗಿದೆ ಬೆಳೆನಷ್ಟ ಸಂಭವಿಸಿದೆ. ಮಲೆನಾಡು ಭಾಗದಲ್ಲೂ ಮಳೆ ಅಬ್ಬರಿಸಿದ್ದು, ಅಡಕೆ, ಕಾಫಿ, ಕಾಳುಮೆಣಸು ಬೆಳೆಗಾರರು ಕಂಗಾಲಾಗಿದ್ದಾರೆ. ಫಸಲು ಕೈ ಸೇರದಂತಾಗಿದೆ. ಬಯಲು ಸೀಮೆ ಭಾಗದಲ್ಲಿ ಬೆಳೆದಿರುವ ರಾಗಿ ಸೇರಿದಂತೆ ಇತರೆ ತರಕಾರಿ ಬೆಳೆಗಳು ಕೊಳೆಯುತ್ತಿವೆ. ಅಕಾಲಿಕ ಮಳೆಯಿಂದ ಕೋಟ್ಯಂತರ ರೂ. ನಷ್ಟವಾಗಿದೆ. ಮಳೆಯಿಂದ ಮಲೆನಾಡು ಬೆಚ್ಚಿಬಿದ್ದಿದೆ.

Advertisement

ಭಾರೀ ನಷ್ಟ: ಸುರಿಯುತ್ತಿರುವ ಅಕಾಲಿಕ ಮಳೆಗೆ 15ದಿನಗಳಲ್ಲೇ ಕೃಷಿ, ತೋಟಗಾರಿಕೆ ಬೆಳೆ ಹೊರತುಪಡಿಸಿ 35 ಕೋಟಿ ರೂ. ನಷ್ಟವಾಗಿದೆ. 24.34 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು 6,491.61 ಹೆಕ್ಟೇರ್‌ ಪ್ರದೇಶದ ತೋಟಗಾರಿಕಾ ಬೆಳೆ ನಷ್ಟವಾಗಿದೆ. ಲೋಕೋಪಯೋಗಿ ಮತ್ತು ಜಿಪಂ ವ್ಯಾಪ್ತಿಯ 68.ಕಿ.ಮೀ. ರಸ್ತೆಗೆ ಹಾನಿಯಾಗಿದ್ದು 31.55 ಕೋಟಿ ರೂ.ಗೂ ಅ ಧಿಕ ನಷ್ಟವಾಗಿದೆ. 9 ಸೇತುವೆಗೆ ಧಕ್ಕೆಯಾಗಿದ್ದು 3.25 ಕೋಟಿ ನಷ್ಟ ಅಂದಾಜಿಸಲಾಗಿದೆ.

ಜಿಲ್ಲಾದ್ಯಂತ 104 ವಿದ್ಯುತ್‌ ಕಂಬಗಳು ಧರೆಗುರುಳಿದ್ದು 8.63 ಲಕ್ಷ ರೂ. ನಷ್ಟ ಸಂಭವಿಸಿದೆ. 34 ಮನೆಗಳು ಭಾಗಶಃ ಹಾನಿಯಾಗಿ 17 ಲಕ್ಷ ರೂ. ನಷ್ಟವಾಗಿದೆ. 3 ಮನೆಗಳಿಗೆ ಸಂಪೂರ್ಣವಾಗಿ ಹಾನಿಯಾಗಿ 15 ಲಕ್ಷ ರೂ. ನಷ್ಟ ಉಂಟಾಗಿದೆ.

ವಾಡಿಕೆಗಿಂತ ಮಳೆ ಜಾಸ್ತಿ: ಜನವರಿಯಿಂದ ಇಲ್ಲಿಯವರೆಗೂ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. 1,833 ಮಿ.ಮೀ. ವಾಡಿಕೆ ಮಳೆಯಾದರೆ, 1,983ಮಿ.ಮೀ. ಇಲ್ಲಿಯವರೆಗೂ ಮಳೆಯಾಗಿದ್ದು ಶೇ.110ರಷ್ಟು ಮಳೆ ಬಿದ್ದಿದೆ. ಚಿಕ್ಕಮಗಳೂರು ವಾಡಿಕೆ ಮಳೆ 836 ಮಿ.ಮೀ ಇದ್ದು ಈ ಬಾರಿ 1,643 ಮಿ.ಮೀ. ಮಳೆಯಾಗಿದೆ. ಶೇ.203ರಷ್ಟು ಅ ಧಿಕವಾಗಿದೆ. ಕಡೂರು 639ಕ್ಕೆ 961, ಕೊಪ್ಪ 2907ಕ್ಕೆ 2971 ಮಿ.ಮೀ, ಮೂಡಿಗೆರೆ 2315 ವಾಡಿಕೆ ಮಳೆಗೆ ಬದಲಾಗಿ 3293 ಮಿ.ಮೀ. ಸರಾಸರಿ ಮಳೆಯಾಗಿದೆ. ನರಸಿಂಹರಾಜಪುರದಲ್ಲಿ 1609ಕ್ಕೆ 2135, ಶೃಂಗೇರಿ 3877ಕ್ಕೆ 3903, ತರೀಕೆರೆ 914 ವಾಡಿಕೆ ಮಳೆಗೆ ಬದಲಾಗಿ 1232 ಸರಾಸರಿ ಮಳೆ, ಅಜ್ಜಂಪುರ ತಾಲೂಕಿನಲ್ಲಿ 669ಕ್ಕೆ 939 ಮಿ.ಮೀ. ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next