ಚಿಕ್ಕಮಗಳೂರು: ವಿಚಾರಣಾಧೀನ ಕೈದಿ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ದಾಯಾದಿಗಳ ಹೊಡೆದಾಟ ಪ್ರಕರಣದಲ್ಲಿ 7 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದ ಮೂರೇ ದಿನಗಳಲ್ಲಿ ಸಾವನ್ನಪ್ಪಿದ್ದು, ಕಾರಾಗೃಹ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಣ್ಣ ತಮ್ಮ ಇಬ್ಬರು ಹಣಕಾಸಿನ ವಿಚಾರಕ್ಕೆ ಜಗಳವಾಡಿಕೊಂಡ ಪ್ರಕರಣದಲ್ಲಿ ವಿಚಾರಣಾಧೀನ ಕೈದಿ ಸತೀಶ್ ಪರಾರಿಯಾಗಿದ್ದ.
ಏಳು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸತೀಶ್ ಹಾಸನದ ಶ್ರೀನಗರದಲ್ಲಿ ವಾಸವಿರುವುದು ಗೊತ್ತಾಗಿ ಕಳೆದ ನಾಲ್ಕು ದಿನಗಳ ಹಿಂದೆ ನಗರ ಠಾಣೆ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂರೇ ದಿನಕ್ಕೆ ಆತ ಮೃತಪಟ್ಟಿದ್ದಾನೆ, ಸಾವಿನ ವಿಚಾರಕ್ಕೆ ಸಂಬಂಧಿಸಿ ಪತ್ನಿ ನೇತ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ.
ಸತೀಶ್ ಕೈ ಕುತ್ತಿಗೆ ಹಾಗೂ ದೇಹದ ಭಾಗದಲ್ಲಿ ಗಾಯಗಳಾಗಿದ್ದು ಕಾರಾಗೃಹ ಹಾಗೂ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿರಬಹುದಾಗಿ ಸತೀಶ್ ಸಹೋದರ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧ ನ್ಯಾಯಾಧೀಶರು ಜಿಲ್ಲಾಸ್ಪತ್ರೆಗೆ ಆಗಮಿಸಿ ಮೃತನ ಕುಟುಂಬಸ್ಥರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಪಘಾತದಲ್ಲಿ ಸಾವು ಎಂಬ ಸುದ್ದಿ ವೈರಲ್: ವಿಡಿಯೋ ಮಾಡಿ “ನಾನು ಜೀವಂತವಾಗಿದ್ದೇನೆ..” ಎಂದ ನಟಿ