ಚಿಕ್ಕಮಗಳೂರು: 6ನೇ ವೇತನ ಆರೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಕಾಫಿನಾಡಿನಲ್ಲಿ ಎರಡನೇ ದಿನವೂ ಖಾಸಗಿ ವಾಹನಗಳು ದರ್ಬಾರು ನಡೆಸಿದವು.
ನೌಕರರು ಮುಷ್ಕರ ಹೂಡಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿದೇರ್ಶನದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನೀಡಿರುವುದರಿಂದ ಎರಡನೇ ದಿನವೂ ಎಡೆಬಿಡದೆ ಸಂಚಾರ ನಡೆಸಿದವು. ಶಾಲಾ- ಕಾಲೇಜು, ಸರ್ಕಾರಿ ಕಚೇರಿ, ಬೇರೆ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಖಾಸಗಿ ವಾಹನಗಳ ಮೂಲಕ ನಿರಾಯಸವಾಗಿ ತಲುಪಿದರು. ಮುಷ್ಕರದ ಮೊದಲ ದಿನ ಖಾಸಗಿ ಬಸ್‌ಗಳತ್ತ ಮುಖ ಮಾಡದ ಜನರು ಎರಡನೇ ದಿನ ಜಿಲ್ಲೆಯ ಕಡೂರು, ತರೀಕೆರೆ, ಮೂಡಿಗೆರೆ, ಶೃಂಗೇರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೂ ಪ್ರಯಾಣ ಬೆಳೆಸಿದರು.
ಗುರುವಾರ 10 ಕೆಎಸ್‌ಆರ್‌ಟಿಸಿ ಬಸ್ ಸಂಚಾರ: ನೌಕರರ ಮುಷ್ಕರದ ನಡುವೆಯೇ ಚಿಕ್ಕಮಗಳೂರು ಡಿಪೋದಿಂದ ಗುರುವಾರ 10 ಕೆಎಸ್‌ಆರ್‌ಟಿಸಿ ಬಸ್ ಸಂಚಾರ ನಡೆಸಿವೆ. ಕಡೂರು ಪಟ್ಟಣದಿಂದ ಚಿಕ್ಕಮಗಳೂರು, ಚಿಕ್ಕಮಗಳೂರಿನಿಂದ ಮೂಡಿಗೆರೆ, ಚಿಕ್ಕಮಗಳೂರಿನಿಂದ ಆಲ್ದೂರು, ಅರಸೀಕೆರೆಯಿಂದ ಬಾಣಾವರ ಮಾರ್ಗದಲ್ಲಿ ಎರಡು ಬಸ್, ಬೇಲೂರು- ಸಕಲೇಶಪುರ ಮಾರ್ಗವಾಗಿ ಮೂರು ಬಸ್ ಹಾಗೂ ಮೂಡಿಗೆರೆ ಮತ್ತು ಕೊಟ್ಟಿಗೆಹಾರ ಮಾರ್ಗವಾಗಿ ಒಂದು ಬಸ್ ಸಂಚಾರ ನಡೆಸಿದೆ ಎಂದು ಚಿಕ್ಕಮಗಳೂರು ವಿಭಾಗನಿಯಂತ್ರಣಾಧಿಕಾರಿ ಎಚ್.ಟಿ. ವಿರೇಶ್ ಮಾಹಿತಿ ನೀಡಿದ್ದಾರೆ.
ಬಸ್ ಚಾಲಕನಿಗೆ ಧಮ್ಕಿ: ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ದೂರವಾಣಿಯಲ್ಲಿ ಧಮ್ಕಿ ಹಾಕಿರುವ ಘಟನೆ ಬುಧವಾರ ನಡೆದಿದ್ದು ಈ ಆಡೀಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬಸ್ ಚಾಲಕ ಬಾಸ್ಕರ್ ಎಂಬುವರು ಚಿಕ್ಕಮಗಳೂರು ಡಿಪೋ ವ್ಯಾಪ್ತಿಗೆ ಒಳಪಡುವ ಸಕಲೇಶಪುರದಿಂದ ಬೇಲೂರು ಮಾರ್ಗವಾಗಿ ಬಸ್ ಚಲಾಯಿಸಿದ್ದಾರೆ.
ಈ ವಿಚಾರ ತಿಳಿದ ಸಕಲೇಶಪುರ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಾಲಕ ಭಾಸ್ಕರ್ ಅವರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶದ್ಧಗಳಿಂದ ನಿಂ ದಿಸಿರುವ ಮತ್ತು ಧಮ್ಕಿ ಹಾಕಿರುವ ಆಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡನೇ ದಿನ ರಸ್ತೆಗಿಳಿದ 260 ಖಾಸಗಿ ಬಸ್‌ಗಳು: ನೌಕರರ ಮುಷ್ಕರದ ಎರಡನೇ ದಿನವಾದ ಗುರುವಾರ ಜಿಲ್ಲೆಯಲ್ಲಿ ಸುಮಾರು 260 ಖಾಸಗಿ ಬಸ್‌ಗಳು ಸಂಚಾರ ನಡೆಸಿವೆ. ಇವುಗಳೊಂದಿಗೆ ಟ್ಯಾಕ್ಸಿ, ಟಿಟಿ ವಾಹನಗಳು ಸಂಚರಿಸಿದವು. ವಿದ್ಯಾರ್ಥಿಗಳು, ಸಾರ್ವಜನಿಕರು ಖಾಸಗಿ ವಾಹನಗಳ ಮೊರೆ ಹೋದರೆ, ಕೆಲವರು ಸ್ವಂತವಾಹನಗಳ ಮೊರೆ ಹೋದರು. 110 ಲಕ್ಷ ರೂ.ಆದಾಯ ಖೋತಾ: ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟ ಪರಿಣಾಮ ಎರಡು ದಿನಗಳಲ್ಲಿ ಸುಮಾರು 110 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಪ್ರತೀ ನಿತ್ಯ 60 ರಿಂದ 70ಲಕ್ಷ ರೂ. ನಿಗಮಕ್ಕೆ ಆದಾಯ ಬರುತ್ತಿತ್ತು. ಈ ಎರಡು ದಿನಗಳಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಕಾರಣದಿಂದ ಭಾರೀ ನಷ್ಟ ಉಂಟಾಗಿದೆ.