ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಮೀಸಲಾತಿ ವಿಚಾರದಲ್ಲಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದು, ಶ್ರಮಿಕ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಅಭಿನಂದನೀಯ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಉತ್ಸವ ಶುಕ್ರವಾರ ನಡೆದ ಮುಖಂಡರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಭೂಮಿಯನ್ನೇ ನಂಬಿರುವ ಒಕ್ಕಲಿಗ, ಲಿಂಗಾಯಿತ ಮತ್ತು ಪಂಚಮಸಾಲಿ ಸಮುದಾಯಗಳಿಗೆ ಮೀಸಲಾತಿ ನೀಡುವ ತೀರ್ಮಾನ ಕೈಗೊಂಡಿದ್ದು, ಈವರೆಗೆ 3ಎ ಮತ್ತು 3ಬಿಯಲ್ಲಿದ್ದ ಈ ಸಮುದಾಯಗಳನ್ನು 2ಸಿ ಮತ್ತು 2ಡಿ ಪ್ರವರ್ಗಗಳಾಗಿ ವಿಂಗಡಿಸಿ ಮೀಸಲಾತಿ ನೀಡಲು ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.
ಹಿಂದುಳಿದವರಿಗೆ ಭಯ ಇಲ್ಲ: ಈಗಾಗಲೇ 2ಎ ಮೀಸಲಾತಿಯಲ್ಲಿರುವ ಸುಮಾರು 107 ಜಾತಿಗಳವರು ಇದರಿಂದ ಆತಂಕ ಪಡಬೇಕಿಲ್ಲ. ಈವರೆಗೆ 2ಎ ಮೀಸಲಾತಿಯಂತೆ ಇದ್ದ ಶೇ.15 ಮೀಸಲಾತಿ ಹಾಗೆಯೇ ಮುಂದುವರಿಯಲಿದೆ. ಇದರಿಂದ ಯಾವುದೇ ಕಾರಣಕ್ಕೂ ಕಡಿಮೆ ಮಾಡುವ ಉದ್ಧೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಈವರೆಗೆ 3ಎ ಪ್ರವರ್ಗದಲ್ಲಿದ್ದ ಒಕ್ಕಲಿಗ ಸೇರಿದಂತೆ ಇತರೆ ಸಮುದಾಯಗಳು ಇನ್ನು ಮುಂದೆ 2ಸಿ ಪ್ರವರ್ಗದಡಿ ಮೀಸಲಾತಿ ಪಡೆಯಲಿವೆ. ಅದೇ ರೀತಿಯಲ್ಲಿ ಈವರೆಗೆ 3ಬಿ ಪ್ರವರ್ಗದಲ್ಲಿದ್ದ ಪಂಚಮಸಾಲಿ, ಲಿಂಗಾಯಿತ ಸೇರಿದಂತೆ ಇತರೆ ಸಮುದಾಯಗಳು 2ಡಿ ಪ್ರವರ್ಗದಡಿ ಮೀಸಲಾತಿ ಪಡೆಯಲಿವೆ. ಇವರಿಗೆ ಮೀಸಲಾತಿ ಪ್ರಮಾಣ ಎಷ್ಟು ಪ್ರಮಾಣ ಹೆಚ್ಚಳವಾಗಲಿದೆ ಎಂಬುದು ಹಿಂದುಳಿದ ವರ್ಗಗಳ ಆಯೋಗ ನೀಡುವ ಅಂತಿಮ ವರದಿಯ ನಂತರ ತೀರ್ಮಾನಿಸಲಾಗುವುದು ಎಂದು ಹೇಳಿದರು.
ವಿಶ್ವ ನಾಯಕನನ್ನು ಕೊಟ್ಟ ತಾಯಿ: ದೇಶಕ್ಕೆ ಪ್ರಭಾವಿ ಪ್ರಧಾನಿಯಾಗುವ ಜತೆಗೆ ವಿಶ್ವ ನಾಯಕನನ್ನು ನೀಡಿದ ಮಹಾತಾಯಿ ವಿವಶರಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಹೆತ್ತ ತಾಯಿಯನ್ನು ಕಳೆದುಕೊಂಡ ನೋವು ಭರಿಸುವ ಶಕ್ತಿಯನ್ನು ಪ್ರಧಾನಿ ಮೋದಿಯವರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.