ಚಿಕ್ಕೋಡಿ: ಕಳೆದ ಆಗಸ್ಟ್‌ನಲ್ಲಿ ಭೀಕರ ನೆರೆಗೆ ಹಾನಿಯಾದ ಬೆಳೆ ಪರಿಹಾರ ರೈತರ ಖಾತೆಗೆ ಜಮೆಯಾಗುತ್ತಿದ್ದು, ಆದರೆ ನೆರೆಯಲ್ಲಿ ಭೂಮಿ ಕೊರೆತವಾದ ರೈತರಿಗೆ ಪರಿಹಾರ ಮರೀಚಿಕೆಯಾಗಿದೆ. ಗಡಿ ಭಾಗದ ಕೃಷ್ಣಾ, ದೂಧಗಂಗಾ, ವೇದಗಂಗಾ ಮತ್ತು ಪಂಚಗಂಗಾ ನದಿಗಳ ಭೀಕರ ಪ್ರವಾಹದಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಹಾನಿಯಾದ ಬೆಳೆ ಪರಿಹಾರ ರೈತರ ಖಾತೆಗೆ ನೆರವಾಗಿ ಜಮೆಯಾಗುತ್ತಿದೆ.
ಈಗಾಗಲೇ ಚಿಕ್ಕೋಡಿ ತಾಲೂಕಿನ 35,127 ರೈತರ ಅರ್ಜಿಗಳಲ್ಲಿ 21,086 ಜನ ರೈತರಿಗೆ 28.84 ಕೋಟಿ ರೂ. ಪರಿಹಾರ ನೀಡಿದೆ. ನಿಪ್ಪಾಣಿ ತಾಲೂಕಿನ 1,4867 ರೈತರ ಅರ್ಜಿಗಳಲ್ಲಿ 8,675 ಜನ ರೈತರಿಗೆ 10.99 ಕೋಟಿ ರೂ. ಪರಿಹಾರ ಜಮೆ ಆಗಿದೆ. ಇನ್ನು ನದಿ ಹತ್ತಿರ ಮತ್ತು ಹಳ್ಳದ ಹತ್ತಿರ ಇರುವ ರೈತರ ಜಮೀನುಗಳು ಹತ್ತಾರು ಅಡಿಯಷ್ಟು ಕೊರೆತ ಕಂಡಿವೆ. ಜಮೀನುಗಳಲ್ಲಿ ಇರುವ ಮಣ್ಣು ಕಿತ್ತು ಹೋಗಿದೆ. ಸಮತಟ್ಟಾದ ಜಮೀನುಗಳು ಈಗ ಕೆರೆ ಹಾಗೂ ಬಾವಿಯಂತಾಗಿ ರೂಪುಗೊಂಡಿದ್ದು, ರೈತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಎಲ್ಲೆಲ್ಲಿ ಹಾನಿ: ಚಿಕ್ಕೋಡಿ ತಾಲೂಕಿನ ಕಲ್ಲೋಳ, ಯಡೂರ, ಇಂಗಳಿ, ಮಾಂಜರಿ, ಅಂಕಲಿ, ಚೆಂದೂರ, ಯಡೂರವಾಡಿ, ಸದಲಗಾ, ಮಲಿಕವಾಡ, ಯಕ್ಸಂಬಾ ಹಾಗೂ ನಿಪ್ಪಾಣಿ ತಾಲೂಕಿನ ಜತ್ರಾಟ, ಭೀವಸಿ, ಕಾರದಗಾ, ಭೋಜ, ಮಾಣಕಾಪುರ, ಯಮಗರ್ಣಿ ಮುಂತಾದ ಗ್ರಾಮಗಳಲ್ಲಿ ರೈತರ ಜಮೀನುಗಳು ಭೀಕರ ನೆರೆ ಹೊಡೆತಕ್ಕೆ ಕಿತ್ತು ಹೋಗಿವೆ. ಚಿಕ್ಕೋಡಿ ಮತ್ತು ನಿಪ್ಪಾಣಿ ಎರಡು ತಾಲೂಕಿನಲ್ಲಿ ಅಂದಾಜು 70 ರಿಂದ 80 ಜನ ರೈತರ ಜಮೀನುಗಳಿಗೆ ಹಾನಿಯಾಗಿದೆ.
ಸುಮ್ಮನಾದ ಸರ್ಕಾರ: ನದಿ ದಡದ ಹತ್ತಿರ ಹಾಗೂ ತಗ್ಗು ಪ್ರದೇಶದ ರೈತರ ಜಮೀನುಗಳು ಬೆಳೆ ಸಮೇತ ಕಿತ್ತು ಹೋಗಿ ರೈತರಿಗೆ ಭಾರಿ ಸಮಸ್ಯೆ ಉಂಟು ಮಾಡಿದೆ. ನೆರೆ ಇಳಿದ ಮೇಲೆ ಸರ್ಕಾರ ರೈತರಿಗೆ ಪರಿಹಾರದ ಭರವಸೆ ನೀಡಿತ್ತು. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಸರ್ವೇ ಕಾರ್ಯ ಕೈಗೊಂಡು ಜಮೀನು ಕಿತ್ತು ಹೋದ ರೈತರಿಗೆ ಸರ್ಕಾರ ಸೂಕ್ತ ಪರಿಹಾರದ ಭರವಸೆ ನೀಡಿತ್ತು.
ಸ್ಥಳೀಯ ಶಾಸಕರು ಮತ್ತು ಸಂಸದರು, ಸಚಿವರು ಸಹ ಯಾವುದೇ ರೈತರಿಗೆ ಅನ್ಯಾಯವಾಗದಂತೆ ಬೆಳೆ ಪರಿಹಾರ ಹಾಗೂ ಜಮೀನು ಕಿತ್ತು ಹೋದ ರೈತರಿಗೆ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ ಇದೀಗ ಬೆಳೆ ಪರಿಹಾರ ನೀಡಿ ಕೈತೊಳೆದುಕೊಂಡಿದೆ. ಒಂದಕ್ಕೆ ಮಾತ್ರ ಪರಿಹಾರ: ಪ್ರವಾಹದಲ್ಲಿ ವಿವಿಧ ಬೆಳೆಗಳು ನಾಶವಾಗಿವೆ. ಮತ್ತು ಕೆಲ ರೈತರ ಜಮೀನು ಕಿತ್ತು ಹೋಗಿದೆ. ಬೆಳೆ ಪರಿಹಾರ ಪಡೆದಿರುವ ರೈತರಿಗೆ ಸರ್ಕಾರ ಜಮೀನು ಕಿತ್ತು ಹೋಗಿರುವ ಪರಿಹಾರ ನೀಡಿಲ್ಲ, ಬೆಳೆ ನಾಶಕ್ಕೆ ಸರ್ಕಾರ ಪ್ರತಿ ಹೆಕ್ಟೇರ್‌ಗೆ 23,500 ಪರಿಹಾರ ನೀಡಿದೆ. ಅದರಂತೆ ಜಮೀನು ಕಿತ್ತು ಹೋದ ರೈತರಿಗೆ ಪ್ರತಿ ಎಕರೆಗೆ 35 ಸಾವಿರ ಪರಿಹಾರ ನೀಡಬೇಕೆಂದು ಘೋಷಣೆ ಮಾಡಿದೆ.
ಕೆಲ ರೈತರ ಗುಂಟೆ ಮಾದರಿಯಲ್ಲಿ ಜಮೀನು ಕಿತ್ತು ಹೋಗಿದೆ. ಇದರಿಂದ ಜಮೀನು ಕಿತ್ತಿರುವುದಕ್ಕೆ ಪರಿಹಾರ ಕೇಳುವ ರೈತರಿಗೆ ಪರಿಹಾರದ ಮೊತ್ತ ಕಡಿಮೆ ಬರುತ್ತದೆ. ಹೀಗಾಗಿ ರೈತರು ತಾವೇ ಕಿತ್ತು ಹೋಗಿರುವ ಜಮೀನುಗಳನ್ನು ಸಮತಟ್ಟಾಗಿ ಮಾಡಿಕೊಳ್ಳಬೇಕೆಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ತಾತ ಮುತ್ತಜ್ಜನ ಕಾಲದಿಂದ ನಂಬಿಕೊಂಡು ಬಂದಿರುವ ಜಮೀನುಗಳು ನೆರೆ ಹೊಡೆತಕ್ಕೆ ಕಿತ್ತು ಹೋಗಿದೆ. ಭೂಮಿ ಸಮತಟ್ಟು ಮಾಡಲು ಸಾವಿರಾರು ರೂ. ಖರ್ಚಾಗುತ್ತದೆ. ಸರ್ಕಾರ ಸ್ವಲ್ಪ ಪರಿಹಾರ ನೀಡಿದರೆ ಅನುಕೂಲವಾಗುತ್ತದೆ.
ಕೃಷ್ಣಾ ಉಪ್ಪಾರ, ಯಡೂರ ರೈತ
ಪ್ರವಾಹದಲ್ಲಿ ಜಮೀನು ಕಿತ್ತು ಹೋದ ರೈತರ ಜಮೀನುಗಳನ್ನು ಸರ್ವೇ ಮಾಡಿ ಸರ್ಕಾರಕ್ಕೆ ಕಳಿಸಲಾಗಿದೆ. ಈಗ ಬೆಳೆ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಿದೆ. ಅದನ್ನು ಜಮೆ ಮಾಡಬಹುದು. ಇಲ್ಲವೆ ಬೆಳೆ ಪರಿಹಾರ ಪಡೆದಿರುವ ರೈತರಿಗೆ ನೀಡದೇ ಇರಬಹುದು. ಆದರೂ ರೈತರು ತಮ್ಮ ಜಮೀನುಗಳನ್ನು ಸಮತಟ್ಟಾಗಿ ಮಾಡಿಕೊಂಡು ಕೃಷಿ ಮಾಡಬೇಕು.
ಮಂಜುನಾಥ ಜನಮಟ್ಟಿ,
ಸಹಾಯಕ ಕೃಷಿ ನಿರ್ದೇಶಕರು ಚಿಕ್ಕೋಡಿ.
ಮಹಾದೇವ ಪೂಜೇರಿ