Advertisement

ದೀಪಕ್‌, ಬಶೀರ್‌ ಮನೆಗೆ ಮುಖ್ಯಮಂತ್ರಿ ಭೇಟಿ

06:00 AM Jan 08, 2018 | Harsha Rao |

ಸುರತ್ಕಲ್‌/ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕಾಟಿಪಳ್ಳದ ದೀಪಕ್‌ ರಾವ್‌ ಮತ್ತು ಆಕಾಶಭವನದ ಮಹಮ್ಮದ್‌ ಬಶೀರ್‌ ಅವರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವಿವಾರ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವನ ಹೇಳಿದರು.

Advertisement

ದೀಪಕ್‌ ರಾವ್‌ ಅವರ ಕಾಟಿಪಳ್ಳದ ಮನೆಗೆ ಶನಿವಾರ ರಾತ್ರಿ 9.10ರ ವೇಳೆಗೆ ಆಗಮಿಸಿದ ಸಿದ್ದರಾಮಯ್ಯ ಸುಮಾರು 12 ನಿಮಿಷ ಅಲ್ಲಿ ಕಳೆದರು. ದೀಪಕ್‌ ತಾಯಿ ಮತ್ತು ಸಹೋದರನಿಗೆ ಸಾಂತ್ವನ ಹೇಳಿದರು. ಜಿಲ್ಲಾಧಿಕಾರಿಯವರನ್ನು ಕರೆದು ದೀಪಕ್‌ ಸಹೋದರನಿಗೆ ಸೂಕ್ತ ಸರಕಾರಿ ಉದ್ಯೋಗ ಒದಗಿಸಿ ಕೊಡುವಂತೆ ಸೂಚಿಸಿದರು. ಮನೆ ನಿರ್ಮಾಣಕ್ಕೆ ಸಾಲ ಮರುಪಾವತಿ ಬಾಕಿ ಇದೆಯೇ ಎಂದು ದೀಪಕ್‌ ಸಂಬಂಧಿಕರಲ್ಲಿ ಪ್ರಶ್ನೆ ಮಾಡಿದರು. ಹತ್ಯೆ ನಡೆದ ಕುರಿತ ವಿವರಗಳನ್ನು ಕೇಳಿ ಪಡೆದುಕೊಂಡ ಸಿಎಂ, ಆರೋಪಿಗಳಿಗೆ ಕಠಿನ ಶಿಕ್ಷೆಯಾಗುವಂತೆ ನಿಖರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಂತೆ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಅವರಿಗೆ ಸೂಚಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ದೀಪಕ್‌ ಸಹೋದರನಿಗೆ ಸರಕಾರಿ ಉದ್ಯೋಗಾವಕಾಶ ಕಲ್ಪಿಸಲು ಸೂಚಿಸಿದ್ದಾಗಿ ತಿಳಿಸಿದರು.

ಸಿಎಂ ಜತೆಗೆ ಸಚಿವ ಬಿ. ರಮಾನಾಥ ರೈ, ಯು.ಟಿ. ಖಾದರ್‌, ಐವನ್‌ ಡಿ’ಸೋಜಾ, ಮೇಯರ್‌ ಕವಿತಾ ಸನಿಲ್‌, ಸ್ಥಳೀಯ ಶಾಸಕರ ಸಹಿತ ಗಣ್ಯರಿದ್ದರು. ಭೇಟಿ ಹಿನ್ನೆಲೆಯಲ್ಲಿ ಗರಿಷ್ಠ ಭದ್ರತೆ ಕಲ್ಪಿಸಲಾಗಿತ್ತು.

ಬಶೀರ್‌ ಕುಟುಂಬಕ್ಕೆ  ಸಾಂತ್ವನ
ಮಂಗಳೂರು: ಬಶೀರ್‌ ಅವರ ಕುಟುಂಬ ವರ್ಗದ ಜತೆ ಕೆಲ ಹೊತ್ತು ಸಮಾಲೋಚನೆ ನಡೆಸಿದ ಮುಖ್ಯಮಂತ್ರಿಗಳು ದೀಪಕ್‌ ರಾವ್‌ ಕುಟುಂಬಕ್ಕೆ ನೀಡಿದಂತೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಬಶೀರ್‌ ಅವರನ್ನು ಹಲ್ಲೆಗೊಳಿಸಿದ ಆರೋಪಿಗಳಿಗೆ ಕಠಿನ ಶಿಕ್ಷೆ ನೀಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಮುಂದೆ ಈ ರೀತಿಯ ಪ್ರಕರಣಗಳು ದಾಖಲಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next