Advertisement

Karnataka: ನೂತನ ಸಚಿವರಿಗೆ ಟಾರ್ಗೆಟ್ ಫಿಕ್ಸ್ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

04:00 PM May 28, 2023 | Team Udayavani |

ಬೆಂಗಳೂರು: ಚುನಾವಣಾ ಫಲಿತಾಂಶ ಪ್ರಕಟವಾಗಿ ಹದಿನೈದು ದಿನಗಳ ಒಳಗೆ ಪೂರ್ಣ ಪ್ರಮಾಣದ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಸಚಿವರಿಗೂ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ.

Advertisement

ನಾಡಿನ ಜನತೆ ಅಭೂತಪೂರ್ವ ಬಹುಮತದಿಂದ ಗೆಲ್ಲಿಸಿ ನಮಗೆ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಜನಪರ ಆಡಳಿತ ನೀಡಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಜನರ ಸಮಸ್ಯೆಗಳನ್ನು ಕೇಳಿಸಿಕೊಳ್ಳಿ. ತಮ್ಮ ತಮ್ಮ ಕ್ಷೇತ್ರದಲ್ಲೇ ಸಮಸ್ಯೆ ಬಗೆಹರಿಸಲು ಬೇಕಾದ ಕ್ರಿಯಾಶೀಲತೆಯನ್ನು ರೂಢಿಸಿಕೊಳ್ಳಿ. ಸಣ್ಣ ಪುಟ್ಟ ಕೆಲಸಗಳಿಗೂ ಕ್ಷೇತ್ರದ ಜನ ಸರ್ಕಾರಿ ಕಚೇರಿಗಳಿಗೆ ಪದೆ ಪದೆ ಅಲೆಯುವುದನ್ನು ತಪ್ಪಿಸಿ. ಜನರು ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಬಸ್ಸು, ರೈಲು ಹತ್ತಿಕೊಂಡು ವಿಧಾನಸೌಧಕ್ಕೆ ಬರುವ ಹೊರೆಯನ್ನು ತಪ್ಪಿಸಿ ಎಂದು ಸೂಚಿಸಿದ್ದಾರೆ.

ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ನಾವು ಕನಿಷ್ಠ 20 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತು ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಿಗೆ ಉಡುಗೊರೆ ನೀಡಬೇಕು. ಈ ಗುರಿ ಇಟ್ಟುಕೊಂಡು ಶ್ರದ್ದೆ, ಪ್ರಾಮಾಣಿಕತೆ ಹಾಗೂ ಚುರುಕಾಗಿ ಜವಾಬ್ದಾರಿ ನಿರ್ವಹಿಸಿ ಎಂದು ಎಲ್ಲಾ ಸಚಿವರಿಗೂ ಮನವರಿಕೆ ಮಾಡಿಸಿದ್ದಾರೆ.

ಇದನ್ನೂ ಓದಿ:ವಸಾಹತುಶಾಹಿ ಮನಸ್ಥಿತಿಗೆ ಅಂತ್ಯ, ಭಾರತದ ಹೊಸ ಪ್ರಯಾಣದ ಆರಂಭ: ಹೊಸ ಸಂಸತ್ ಭವನದಲ್ಲಿ ಮೋದಿ

ನಾವು ನೀಡಿರುವ ಗ್ಯಾರಂಟಿಗಳು ಜನರಿಗೆ ಸಮರ್ಪಕವಾಗಿ ತಲುಪುವಂತೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಹಿಂದಿನ ಬಾರಿಯ ತಪ್ಪುಗಳು ಈ ಬಾರಿ ಮರುಕಳಿಸಬಾರದು ಎಂದಿದ್ದಾರೆ.

Advertisement

ಖಾತೆ ಹಂಚಿಕೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ನೀವೆಲ್ಲಾ ಸಕ್ರಿಯರಾಗಿ. ವಿರೋಧ ಪಕ್ಷದಲ್ಲಿದ್ದಾಗ ನಾವು ನಡೆಸಿದ ಹೋರಾಟದ ಫಲವಾಗಿ ಜನತೆ ಬಿಜೆಪಿಯ ದುರಾಡಳಿತವನ್ನು ತಿರಸ್ಕರಿಸಿ ನಮ್ಮ ಕೈ ಹಿಡಿದಿದ್ದಾರೆ. ಈಗ ನಾವು ಸರ್ಕಾರವನ್ನು, ಸರ್ಕಾರದ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಮ್ಮ ಜನಪರ ನಿಷ್ಠೆ ಮತ್ತು ಕೆಲಸಗಳ ಮೂಲಕ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ದಾಖಲಿಸಬೇಕಿದೆ ಎಂದು ಸಚಿವರಿಗೆ ಸೂಚಿಸಿದ್ದಾರೆ.

ಕೇಂದ್ರದ ದುರಾಡಳಿತವನ್ನು ಕರ್ನಾಟಕದ ಮೂಲಕ ಕೊನೆಗೊಳಿಸಲು ಪರಿಸ್ಥಿತಿ ಹದವಾಗಿದೆ. ಇದನ್ನು ನಾವು ಮರೆಯಬಾರದು. ಹೀಗಾಗಿ ಸಚಿವರು ತಮಗೆ ಉಸ್ತುವಾರಿ ವಹಿಸಲಾಗುವ ಜಿಲ್ಲೆಗಳಿಗೆ ಹೆಚ್ಚೆಚ್ಚು ಪ್ರವಾಸ ಮಾಡಬೇಕು. ಜಿಲ್ಲೆ, ತಾಲ್ಲೂಕು ಮಟ್ಟದಲ್ಲೇ ಸಮಸ್ಯೆಗಳನ್ನು ಬಗೆಹರಿಸಬೇಕು. ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟು ಭ್ರಷ್ಟಾಚಾರಕ್ಕೆ ಬರೆ ಎಳೆಯಬೇಕು ಎಂದು ಮುಖ್ಯಮಂತ್ರಿಗಳು ಎಲ್ಲಾ ಸಚಿವರಿಗೂ ಟಾರ್ಗೆಟ್ ನೀಡಿ ಶುಭ ಹಾರೈಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next