ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬುಧವಾರ ಬಜೆಟ್ ಮಂಡಿಸಿದ್ದು, ಒಟ್ಟು 26,844.40 ಕೋಟಿ ರೂ.ಗಳ ಬೃಹತ್ ಗಾತ್ರದ ಬಜೇಟ್ ಇದಾಗಿದೆ. 2022-23 ಕ್ಕೆ ಹೋಲಿಸಿದರೆ ಯೋಜಿತ ಒಟ್ಟು ಸ್ವೀಕೃತಿಗಳು ಶೇಕಡಾ 12.53 ರಷ್ಟು ಬೆಳವಣಿಗೆಯನ್ನು ತೋರಿಸುತ್ತಿವೆ ಎಂದು ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಮಂಡಿಸಿದರು. ಪ್ರಸಕ್ತ ಬಜೇಟ್ 2022-23 ರ ಅಂದಾಜಿಗಿಂತ 9.71 ಶೇಕಡಾ ಹೆಚ್ಚಳವಾಗಿದೆ.
ಕೇಂದ್ರ ಸರ್ಕಾರದ ಅನುದಾನದ ಮೂಲಕ 800 ಕೋಟಿ ರೂ. ರಾಜ್ಯದಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಪುನರಾರಂಭಿಸಲು ಮತ್ತು ಕೇಂದ್ರ ತೆರಿಗೆಗಳಲ್ಲಿ ಗೋವಾದ ಪಾಲನ್ನು ಹೆಚ್ಚಿಸಲು ನಮ್ಮ ಸರ್ಕಾರವು ಕೈಗೊಂಡ ಉಪಕ್ರಮಗಳಿಂದ ಆದಾಯ ಸಂಗ್ರಹಣೆ ಹೆಚ್ಚಳವಾಗಲಿದೆ. 2ನೇ ಕಂತಿನ ಅನುದಾನವನ್ನು ರಾಜ್ಯವೂ ಪಡೆಯುವ ನಿರೀಕ್ಷೆಯಿದೆ ಎಂದು ಸಾವಂತ್ ಹೇಳಿದರು.
ಗೋವಾ ಬಜೆಟ್ 2023-24 ಗೋವಾ ಸರ್ಕಾರವು ಕೈಗಾರಿಕಾ ವಲಯದ ಜೊತೆಗೆ ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತಿದೆ ಮತ್ತು ಮೊಪಾದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ವಿಮಾನ ನಿಲ್ದಾಣವು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಮುಖ್ಯಮಂತ್ರಿ ಇಂದು ಅಧಿವೇಶನಕ್ಕೆ ತಿಳಿಸಿದರು, ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿವಿಧ ಇಲಾಖೆಗಳಲ್ಲಿ 1,000 ಕ್ಕೂ ಹೆಚ್ಚು ಗೋವಾದ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂದು ಮುಖ್ಯಮಂತ್ರಿಗಳು ನುಡಿದರು.
ಕೃಷಿ ಇಲಾಖೆಗೆ 277 ಕೋಟಿ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಸಾವಂತ್ ಇಂದು ಅಧಿವೇಶನದಲ್ಲಿ ಮಾಹಿತಿ ನೀಡಿದರು. ಕೃಷಿ ಉತ್ಪಾದನೆಗೆ ಉತ್ತೇಜನ ನೀಡಲು ಮುಖ್ಯಮಂತ್ರಿ ಪ್ರಗತ್ ಶೇತ್ಕರಿ ಯೋಜನೆ ಜಾರಿಗೊಳಿಸಲಾಗುವುದು ಎಂದರು.