Advertisement

ಕಪ್ಪು ಚುಕ್ಕೆ ಹೋಗಲಾಡಿಸಲು ಮೈತ್ರಿ

06:00 AM May 26, 2018 | |

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವ ಮೂಲಕ ನನ್ನ ತಂದೆ ಎಚ್‌.ಡಿ.ದೇವೇಗೌಡರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಮೂಡುವಂತೆ ಮಾಡಿದ್ದೆ. ಅದನ್ನು ಹೋಗಲಾಡಿಸುವ ಉದ್ದೇಶದಿಂದ ಈಗ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿದ್ದೇನೆಯೇ ಹೊರತು ಅಧಿಕಾರದ ಆಸೆಯಿಂದ ಅಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಅವರು ಮಾತನಾಡಿದರು.

Advertisement

ಬೆಂಗಳೂರು: ಕಾಂಗ್ರೆಸ್‌ ಜತೆ ಮೈತ್ರಿ ಸರ್ಕಾರಕ್ಕೆ ಮುಂದಾಗಿದ್ದು, ಹಿಂದಿನ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಎದುರಿಸಿದ ಅವಮಾನ, ಸಮಸ್ಯೆಗಳನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸದನದಲ್ಲಿ ವಿವರಿಸಿದರು. ಅಲ್ಲದೆ, ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ವಿರುದ್ಧವೂ ಕಿಡಿ ಕಾರಿದರು.

ಭಾಷಣದ ಪ್ರಮುಖಾಂಶಗಳು: ರಾಜ್ಯದಲ್ಲಿ ಈ ಬಾರಿ ಜನ ಯಾವುದೇ ಪಕ್ಷಕ್ಕೆ ಬಹುಮತ ಕೊಟ್ಟಿಲ್ಲ. ಬಿಜೆಪಿಯವರು ನಮಗೆ ಬಹುಮತ ಇದೆ ಎಂದು ಯಾವ ರೀತಿ ವಿಶ್ಲೇಷಣೆ ಮಾಡುತ್ತಿದ್ದಾರೆ ಎಂಬುದು ಅರ್ಥ ಆಗುತ್ತಿಲ್ಲ.

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಘೋಷಣೆಯಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯದಲ್ಲಿ ಬಿಜೆಪಿ ಹೊರತುಪಡಿಸಿ ಬೇರೆಯವರು ಸರ್ಕಾರ ರಚಿಸಲು ಬಿಡುವುದಿಲ್ಲ ಎಂದು ಹೇಳಿದ್ದರು. ದೇಶದ ಮುಖ್ಯಸ್ಥರಾಗಿರುವವರು ಬೇರೆಯವರಿಗೆ ಸರ್ಕಾರ ರಚಿಸಲು ಬಿಡುವುದಿಲ್ಲ ಎಂದು ಹೇಳುವುದು ಎಷ್ಟು ಸರಿ ಎಂಬುದನ್ನು ಅವರ ವಿವೇಚನೆಗೆ ಬಿಡುತ್ತೇನೆ.

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚಿಸಲು 118 ಶಾಸಕರ ಬೆಂಬಲವಿದೆ ಎಂಬುದನ್ನು ಕಾಂಗ್ರೆಸ್‌ ನಾಯಕರ ಜತೆಗೂಡಿ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೆವು. ರಾಜ್ಯಪಾಲರು ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾರಣ ಆಹ್ವಾನ ನೀಡಿದರು ಎಂಬುದು ಯಡಿಯೂರಪ್ಪನವರ ಸಮರ್ಥನೆ.

Advertisement

ಆದರೆ, ಗೋವಾದಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್‌ಗೆ ರಾಜ್ಯಪಾಲರು ಆಹ್ವಾನ ನೀಡಿದ್ದರೇ? ಕಾಂಗ್ರೆಸ್‌ ಜತೆ ಸಮ್ಮಿಶ್ರ ಸರ್ಕಾರ ರಚಿಸಲು ಮುಂದಾದ ಬಳಿಕ ನನಗೆ ಇಡಿ ಅಧಿಕಾರಿಯೊಬ್ಬರು ಬೆದರಿಕೆ ಹಾಕಿದ್ದರು.

ನನ್ನನ್ನು ಸಂಪರ್ಕಿಸಿ, ನೀವು ಮಲೇಷಿಯಾದಲ್ಲಿ ಆಸ್ತಿ ಹೊಂದಿದ್ದೀರಂತೆ ಎಂದರು. ಇದ್ದರೆ ಕ್ರಮ ಕೈಗೊಳ್ಳಿ ಎಂದು ಹೇಳಿ ಕಳುಹಿಸಿದ್ದೆ. ಕೇಂದ್ರ ಸರ್ಕಾರ ಇಡಿ, ಆದಾಯ ತೆರಿಗೆ ಇಲಾಖೆಯನ್ನು ಮುಂದಿಟ್ಟುಕೊಂಡು ಆಟ ಆಡುವುದಕ್ಕೆ
ಅವಕಾಶ ನೀಡಬಾರದು.

ಸಮಗ್ರ ಕರ್ನಾಟಕ ನನ್ನ ಗುರಿ
ಗಟ್ಸ್‌ ಇದ್ದರೆ ರೈತರ ಸಾಲ ಮನ್ನಾ ಮಾಡಿ. ಉತ್ತರ ಕರ್ನಾಟಕ ನಿರ್ಲಕ್ಷಿಸಿದರೆ ಜನ ಕ್ಷಮಿಸುವುದಿಲ್ಲ ಎಂದು ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ಇಲ್ಲಿ ಉತ್ತರ ಕರ್ನಾಟಕ, ಹಳೇ ಕರ್ನಾಟಕ ಎಂದು ವಿಭಾಗ ಮಾಡುವುದಿಲ್ಲ. ಅಖಂಡ ಕರ್ನಾಟಕದ ಅಭಿವೃದ್ಧಿ ಇಟ್ಟುಕೊಂಡು ಕೆಲಸ ಮಾಡಬೇಕು. ಜನರಿಗೆ ತೆರಿಗೆ ಹಾಕಿ ಸಾಲ ಮನ್ನಾ ಮಾಡುವುದಿಲ್ಲ. ಚುನಾವಣೆ ವೇಳೆ ಕೊಟ್ಟ ಮಾತಿನಂತೆ ರೈತರು ಮಾಡಿದ ಸಂಪೂರ್ಣ ಸಾಲ ಮನ್ನಾ ಮಾಡುವುದು ನನ್ನ ಜವಾಬ್ದಾರಿ. ಇದರ ಜತೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಪ್ರಣಾಳಿಕೆಗಳನ್ನೂ ಜಾರಿಗೊಳಿಸುತ್ತೇನೆ. ಆದರೆ, ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಕಾಂಗ್ರೆಸ್‌ನವರ ಅಭಿಪ್ರಾಯ ಪಡೆಯಬೇಕಾಗುತ್ತದೆ. ಸಮ್ಮಿಶ್ರ ಸರ್ಕಾರವೊಂದು ದೇಶಕ್ಕೆ ಮಾದರಿಯಾಗಿ ಹೇಗೆ ನಡೆಯಬಹುದು ಎಂಬುದನ್ನು ತೋರಿಸಿಕೊಡುತ್ತೇನೆ. ಆದ್ದರಿಂದ ನನ್ನ ಸರ್ಕಾರದ ಮೇಲೆ ವಿಶ್ವಾಸ ತೋರಿಸಿ ಎಂದು ಸದನದ ಸದಸ್ಯರಲ್ಲಿ ಮನವಿ ಮಾಡುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next