Advertisement
ಮಂಗಳೂರಿನಲ್ಲಿ ಲವ್ ಜೆಹಾದ್ ತಡೆಯಲು ಹಿಂದೂ ಟಾಸ್ಕ್ ಫೋರ್ಸ್ ರಚಿಸಲಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಆದಿಉಡುಪಿ ಹೆಲಿಪ್ಯಾಡ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲದಕ್ಕೂ ಕಾನೂನಿದೆ ಮತ್ತು ಕೆಲವು ಕಾನೂನುಗಳನ್ನು ಹಿಂದಿನ ಸರಕಾರಗಳೇ ರಚನೆ ಮಾಡಿವೆ. ಕಾನೂನು ರಕ್ಷಿಸುವುದು ನಮ್ಮ ಕೆಲಸ ಎಂದರು.
ಪ್ರಚಲಿತ ವಿದ್ಯಮಾನಗಳ ಬಗ್ಗೆ ಮುಖ್ಯಮಂತ್ರಿಗಳು ಮೌನವಾಗಿದ್ದಾರೆ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಆಡಳಿತಾತ್ಮಕ ಕ್ರಮಗಳೇ ಮಾತಾಡುತ್ತಿವೆ. ಎಲ್ಲದಕ್ಕೂ ನಾವು ಮಾತನಾಡಬಾರದು. ನಮ್ಮ ಕೆಲಸಗಳು ಮಾತನಾಡಬೇಕು. ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳ ಬೇಕು ಎಂದು ನಮಗೆ ತಿಳಿದಿದೆ. ವಿಪಕ್ಷದ ನಾಯಕರಿಂದ ಏನನ್ನೂ ಕಲಿಯಬೇಕಿಲ್ಲ. ಹಲವು ಕೊಲೆಗಳಿಗೆ ನೇರವಾಗಿ ಆರೋಪ ಇರುವ ಸಂಸ್ಥೆಗಳ ಪ್ರಕರಣಗಳನ್ನು ಇವರು ಅಧಿಕಾರದಲ್ಲಿದ್ದಾಗ ಸರಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಕೈಬಿಟ್ಟಿದ್ದರು. ಆಗ ಇವರ ಕರ್ತವ್ಯ ಪ್ರಜ್ಞೆ ಎಲ್ಲಿತ್ತು? ಕರ್ನಾಟಕ ಶಾಂತಿ ಸುವ್ಯವಸ್ಥೆ ಇರುವ ಅತ್ಯಂತ ಪ್ರಗತಿಪರ ರಾಜ್ಯ. ರಾಜ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂದು ಗೊತ್ತಿದೆ. ಅದನ್ನು ಮಾಡಿ ತೋರಿಸುತ್ತಿದ್ದೇವೆ. ಇವರ ಕಾಲದಲ್ಲಿ ಹತ್ತು ಹಲವು ಹಿಂದೂ ಯುವಕರ ಕೊಲೆಗಳಾಗಿದ್ದವು. ಆ ಸಂಸ್ಥೆಗಳ ಮೇಲಿನ ಪ್ರಕರಣವನ್ನೇ ಹಿಂಪಡೆದ್ದರು. ಆಗ ಅವರು ಬುದ್ಧಿ ಕಳೆದುಕೊಂಡಿದ್ದರೇ ಎಂದು ಪ್ರಶ್ನಿಸಿದರು. ಆ ಸಂಸ್ಥೆಯನ್ನು ರದ್ದುಗೊಳಿಸಲಾಗುವುದೇ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದರು. ಪಿಪಿಪಿ ಮಾದರಿಯ 8 ವೈದ್ಯ ಕಾಲೇಜು
ರಾಜ್ಯದಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) 8 ವೈದ್ಯಕೀಯ ಕಾಲೇಜು ಬರುತ್ತಿವೆ. ಅದರಲ್ಲಿ ಉಡುಪಿಯೂ ಒಂದಾಗಿದೆ. ಡಿಪಿಆರ್ ಸಿದ್ಧಪಡಿ ಸುವ ಕಾರ್ಯವೂ ನಡೆಯುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆಗೆ ಚರ್ಚೆ ನಡೆಸಲಿದ್ದೇವೆ. ಉಡುಪಿ ನಗರದ ಯುಜಿಡಿ ಕಾಮಗಾರಿಗೆ ಅನುದಾನ ಒದಗಿಸಲಾಗುವುದು ಎಂದರು.
Related Articles
Advertisement