ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಿಗೆ ಸಂವಿಧಾನದ ಪ್ರತಿ ಪೂರೈಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಂವಿಧಾನ ದಿನದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಸಂವಿಧಾನದ ಪ್ರತಿ ಹಾಗೂ ಗ್ರಾಮ ಪಂಚಾಯಿತಿಯ 73 ಮತ್ತು 74 ನೇ ತಿದ್ದುಪಡಿ, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗಳ ಪ್ರತಿಗಳನ್ನು ದೊಡ್ಡ ಪ್ರಮಾಣದಲ್ಲಿ ಕಳಿಸಿ ಅಲ್ಲಿಯೂ ಸಂವಿಧಾನಬದ್ಧ ಆಡಳಿತ ನಡೆಸುವುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಸಂವಿಧಾನದ ಸ್ಫೂರ್ತಿ ಗ್ರಾಮೀಣ ಮಟ್ಟದಲ್ಲಿ ಆಗಬೇಕೆನ್ನುವುದು ನಮ್ಮ ಉದ್ದೇಶ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂವಿಧಾನ ನನಗೆ ಧರ್ಮಗ್ರಂಥ ಎಂದು ಹೇಳಿದ್ದರು. ಅದನ್ನು ಅಕ್ಷರಶಃ ನಾವೆಲ್ಲರೂ ಪಾಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಭಾರತದ ಏಕತೆ, ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ ಎಲ್ಲಾ ಆಯಾಮಗಳಲ್ಲಿ ನೋಡಿ ರಚನೆಯಾಗಿದ್ದರಿಂದ 75 ವರ್ಷ ಯಶಸ್ವಿ ಪ್ರಜಾಪ್ರಭುತ್ವವನ್ನು ಸಂವಿಧಾನಬದ್ಧವಾಗಿ ನಡೆಸಲು ಸಾಧ್ಯವಾಗಿದೆ. ಎಲ್ಲಾ ಕಾನೂನುಗಳು ಸಂವಿಧಾನಬದ್ಧವಾಗಿ ನಡೆಯಬೇಕಾಗಿರುವುದು ಭಾರತ ಪ್ರಜಾಪ್ರಭುತ್ವದ ಮೂಲ ಮಂತ್ರವಾಗಿದೆ ಎಂದು ತಿಳಿಸಿದರು.
Related Articles
ಸಂವಿಧಾನದಂತೆ ನಡೆದುಕೊಳ್ಳಬೇಕು:
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಪತ್ರಿಕಾ ರಂಗಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕಿದೆ. ಭಾರತದಲ್ಲಿ ಕಾನೂನು ಸುವ್ಯವಸ್ಥೆ, ನ್ಯಾಯ ಮತ್ತು ಶಾಂತಿ ಎಲ್ಲವೂ ನಡೆಸಲು ಸಾಧ್ಯವಾಗಿದೆ. ಇದು ಅತ್ಯಂತ ಜೀವಂತಿಕೆ ಇರುವ ಸಂವಿಧಾನವಾಗಿದ್ದು, ಕಾಲ ಕಾಲಕ್ಕೆ ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಿಗನುಗುಣವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಹಾಗೂ ಹೊಸ ಹೊಸ ಸಂಶೋಧನೆಗಳ ಮೂಲಕ ಸಂವಿಧಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ಅವಕಾಶವನ್ನು ಅಂಬೇಡ್ಕರ್ ಅವರು ಮಾಡಿಕೊಟ್ಟಿದ್ದಾರೆ. ಹೀಗಾಗಿ ಕಾಲಕಾಲಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.