ಬೆಂಗಳೂರು: ರಾಜಕಾರಣಕ್ಕೆ ನಿವೃತ್ತಿ ಮತ್ತು ವಿದ್ಯಾರ್ಹತೆ ಎರಡೂ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಿವೃತ್ತರಾಗಿರುವ ವಿಧಾನ ಪರಿಷತ್ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬ್ರಿಟಿಷರ ಕಾಲದಲ್ಲಿದ್ದ ವಿಧಾನ ಪರಿಷತ್ತನ್ನು ನಾವು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದೇವೆ. ಪರಿಷತ್‌ನಲ್ಲಿ ಸಾಕಷ್ಟು ಮಹತ್ವದ ಚರ್ಚೆಯಾಗಿದೆ. ಇಲ್ಲಿಗೆ ವಿವಿಧ ಕ್ಷೇತ್ರದ ಪರಿಣಿತರು ಬರುತ್ತಾರೆ. ಮಾರ್ಗದರ್ಶಕರ ಹಿರಿಯ ಸದನ ಪರಿಷತ್ ಎಂದರು.
ಆತ್ಮಾವಲೋಕನ ಅಗತ್ಯ
ಹಲವಾರು ಬಾರಿ ಪರಿಷತ್ ಉಳಿಸಿಕೊಳ್ಳಬೇಕೋ ಬೇಡವೋ ಎಂಬ ಚರ್ಚೆ ನಡೆದಿದೆ. ಆಯಾ ಸಮಯ ಸಂದರ್ಭದಲ್ಲಿ ಎಲ್ಲರೂ ವ್ಯಾಖ್ಯಾನ ಮಾಡಿದ್ದಾರೆ. ಒಂದು ರೀತಿ ವಿಧಾನಸಭೆಯಲ್ಲಿ ಆದ ನಿರ್ಣಯ ಗಳನ್ನು ಮರು ಪರಿಶೀಲಿಸುವ ಗುರುತರ ಜವಾಬ್ದಾರಿ ಪರಿಷತ್‌ನದ್ದು. ಪರಿಷತ್ ಸದಸ್ಯರ ಪಾತ್ರದ ಬಗ್ಗೆ ಸಿಂಹಾವಲೋಕನ, ಆತ್ಮಾವಲೋಕನ ಅಗತ್ಯವಿದೆ ಎಂದರು.
19 ಜನ ತಮ್ಮ ಅವಧಿ ಮುಗಿಸಿ ನಿವೃತ್ತಿ ಆಗುತ್ತಿದ್ದಾರೆ. ಇದನ್ನು ನಾನು ನಿವೃತ್ತಿ ಅಥವಾ ಬೀಳ್ಕೊಡುಗೆ ಅಂತಲೂ ಕರೆಯುವುದಿಲ್ಲ. ರಾಜಕಾರಣದಲ್ಲಿ ಯಾವತ್ತೂ ನಿವೃತ್ತಿ ಆಗುವ ಪ್ರಶ್ನೆ ಇಲ್ಲ. ರಾಜಕಾರಣಕ್ಕೆ ನಿವೃತ್ತಿ ಹಾಗೂ ವಿದ್ಯಾರ್ಹತೆ ಎರಡೂ ಇಲ್ಲ. ಸಮಾಜ ನಿರ್ಮಿತ ಪಾತ್ರ ಅನುಸರಿಸಿ ಪಾಲಿಸಿಕೊಂಡು ಹೋಗಬೇಕು. ಎಲ್ಲಿಯವರೆಗೆ ಶಕ್ತಿ ಇದೆ ಅಲ್ಲಿಯವರೆಗೂ ರಾಜಕಾರಣದಲ್ಲಿ ಸೇವೆ ಮಾಡಬಹುದು ಎಂದರು.
Related Articles
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಪೈಲಟ್ ತರಬೇತಿ ಕೇಂದ್ರ: ಪ್ರಹ್ಲಾದ್ ಜೋಷಿ
ಪರಿಷತ್ ಚುನಾವಣೆಯಲ್ಲಿ ಮರು ಆಯ್ಕೆಯಾದವರಿಗೆ ಅಭಿನಂದನೆ ಸಲ್ಲಿಸಿದ ಸಿಎಂ, ನಿವೃತ್ತರಾದವರಿಗೆ ಮತ್ತೆ ಬೇರೆ ಬೇರೆ ರಂಗದಲ್ಲಿ ಅವಕಾಶಗಳು ಸಿಗಲಿ. ನಿಮ್ಮ ಜತೆ ನಾವಿದ್ದೇವೆ. ಕನ್ನಡ ನಾಡನ್ನು ಕಟ್ಟಲು, ಕನ್ನಡಿಗರ ಬಾಳನ್ನು ಹಸಿರು ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಆಗ ವಿಧಾನ ಪರಿಷತ್ತಿನಲ್ಲಿ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಸಾಕಷ್ಟು ಗಂಭೀರ ಚರ್ಚೆ ನಡೆಸುತ್ತಿದ್ದರು. ಹಾಸ್ಯ, ವಾದ ವಿವಾದ ಎಲ್ಲವೂ ಇರುತ್ತಿತ್ತು. ಆಗ ಎಲ್ಲ ವರ್ಗದ ಜನರೂ ಬರುತ್ತಿದ್ದರು. ಸಾಹಿತಿಗಳು, ಗಂಗೂಬಾಯಿ ಹಾನಗಲ್ ಮಲ್ಲಿಕಾರ್ಜುನ ಮನ್ಸೂರಂತಹ ಸಂಗೀತಗಾರರು, ಸಿನೆಮಾ ತಾರೆಯರು, ಶಿಕ್ಷಣ ತಜ್ಞರು ಬರುತ್ತಿ ದ್ದರು. ಪರಿಷತ್ ಕಲಾಪ ನೋಡಲು ವಿಧಾನಸಭೆ ಶಾಸಕರು ಬಂದು ಕುಳಿತುಕೊಳ್ಳುತ್ತಿದ್ದರು. ಎಂದರು. ಮಾಜಿ ಸಭಾಪತಿಗಳಾದ ಡಿ.ಎಚ್.ಶಂಕರ ಮೂರ್ತಿ, ಬಿ.ಎಲ್.ಶಂಕರ, ಮೇಲ್ಮನೆ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಇದ್ದರು.