Advertisement

ಬಡವರ ಕನಸು ನನಸು ಬಿಜೆಪಿ ಗುರಿ: ಸಿಎಂ ಬೊಮ್ಮಾಯಿ

10:01 PM Mar 20, 2023 | Team Udayavani |

ಬೆಂಗಳೂರು: ಬಡವರ ಕನಸನ್ನು ನನಸು ಮಾಡುವುದೇ ಬಿಜೆಪಿ ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಬಸವನಗುಡಿಯ ನ್ಯಾಷನಲ್‌ ಕಾಲೇಜು ಆಟದ ಮೈದಾನದಲ್ಲಿ ಕಂದಾಯ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 5 ಸಾವಿರ ಫ‌ಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಸುಮಾರು 1 ಲಕ್ಷ 54 ಸಾವಿರ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. 1.5 ಲಕ್ಷಕ್ಕೂ ಅಧಿಕ ಲಮಾಣಿ ತಾಂಡ, ಕುರುಬರ ಹಟ್ಟಿ, ಗೊಲ್ಲರ ಹಟ್ಟಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆೆ. ಕೊಳಚೆ ಅಭಿವೃದ್ಧಿ ನಿಗಮದ ಅಡಿಯಲ್ಲಿ 1.72 ಲಕ್ಷ ಮನೆಗಳನ್ನು ಸರ್ಕಾರ ನಿರ್ಮಿಸಿದೆ. ಕಾಫಿ ಬೆಳೆಗಾರರಿಗೆ ಭೂಮಿ ಗುತ್ತಿಗೆ ಕೊಡುವ ಕೆಲಸ ನಡೆದಿದೆ ಎಂದು ತಿಳಿಸಿದರು.

40 ಲಕ್ಷ ಮನೆಗಳಿಗೆ ಕುಡಿಯುವ ನೀರು:
ಕುಡಿಯುವ ನೀರು ನೀಡುವಿಕೆ ವಿಚಾರದಲ್ಲಿ ಜನ ಮೆಚ್ಚುವ ಕೆಲಸ ಮಾಡಲಾಗಿದೆ. 72 ವರ್ಷಗಳ ಆಡಳಿತ ಅವಧಿಯಲ್ಲಿ ರಾಜ್ಯದಲ್ಲಿ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ಕೊಟ್ಟಿದ್ದರು. ಆದರೆ, ಬಿಜೆಪಿ ಸರ್ಕಾರದ 3 ವರ್ಷದ ಆಡಳಿತದಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರು ಕಲ್ಪಿಸಲಾಗಿದೆ. ಬಡವರಿಗೆ 12 ಲಕ್ಷ ಶೌಚಾಲಯ ನಿರ್ಮಿಸಿಕೊಡಲಾಗಿದೆ ಎಂದರು.

ಈ ಹಿಂದೆ ಅಧಿಕಾರ ನಡೆಸಿದವರು ಏಕೆ ಈ ಕೆಲಸ ಮಾಡಲಿಲ್ಲ ಎಂಬ ಪ್ರಶ್ನೆಗೆ ಈಗ ಉತ್ತರ ದೊರಕುತ್ತಿದೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇರಲಿಲ್ಲ. ಅಧಿಕಾರದ ದಾಹದಲ್ಲೇ ಸಮಯ ಕಳೆದರು. ಆಡಳಿತ ವ್ಯವಸ್ಥೆಯಲ್ಲಿ ಎರಡು ರೀತಿಯ ರಾಜಕಾರಣವಿದೆ. ಒಂದು ಅಧಿಕಾರದ ರಾಜಕಾರಣ, ಮತ್ತೂಂದು ಜನರ ರಾಜಕಾರಣ. ನಾವು ಜನರ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌, ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಕೃಷ್ಣಪ್ಪ, ಶಾಸಕ ರವಿಸುಬ್ರಹ್ಮಣ್ಯ, ಉದಯ್‌ ಗರುಡಾಚಾರ್‌, ಸತೀಶ್‌ ರೆಡ್ಡಿ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next