ಜಗಳೂರು: ತಾಲೂಕಿನ ಜಮೀನುಗಳಲ್ಲಿ ಈ ವರ್ಷ ಕಡಲೆ ಬೆಳೆ ನಳನಳಿಸುತ್ತಿದೆ. ಮುಂಗಾರು ಕೈಕೊಟ್ಟಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಸದ್ಯ ಕಡಲೆ ಬೆಳೆ ಆಸರೆ ಆಗುವ ಲಕ್ಷಣ ಗೋಚರಿಸಿದ್ದು, ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಹಿಂಗಾರು ಮಳೆ ಉತ್ತಮವಾಗಿ ಸುರಿದ್ದರಿಂದ ಭೂಮಿ ತೇವಾಂಶ ಅಧಿಕಗೊಂಡು ಕಡಲೆ ಬೆಳೆ ಸಮೃದ್ಧಿಯಾಗಿ ಬೆಳೆದು ನಿಂತಿದೆ. ತಾಲೂಕಿನದ್ಯಾಂತ ಕಡಲೆ ಯಾವುದೇ ರೋಗದ ಕಾಟವಿಲ್ಲದೇ ಬೆಳೆದು ನಿಂತಿದ್ದು, ಉತ್ತಮ ಫಸಲು ದೊರೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಮುಂಗಾರು ಮಳೆ ಸಕಾಲಕ್ಕೆ ಬೀಳದೇ ರೈತರನ್ನು ಚಿಂತೆಗೇಡು ಮಾಡಿತ್ತು. ಅಲ್ಲದೇ ಮೆಕ್ಕೆಜೋಳ, ಶೇಂಗಾ, ರಾಗಿ, ಸಜ್ಜೆ ಬೆಳೆಗಳು ಕಾಳು ಕಟ್ಟುವ ಸಂದರ್ಭದಲ್ಲಿ ಮಳೆ ಕೊರತೆ ಆಗಿದ್ದರಿಂದ ರೈತರು ನಿರೀಕ್ಷಿಸಿದಷ್ಟು ಇಳುವರಿ ಬಾರದೇ ನಷ್ಟ ಅನುಭವಿಸುವಂತೆ ಮಾಡಿತ್ತು. ಸದ್ಯ ಹಿಂಗಾರು ಮಳೆ ಕೈ ಹಿಡಿದಿರುವುದರಿಂದ ಕಡಲೆ ಬೆಳೆ ತಾಲೂಕಿನಲ್ಲಿ ನಳನಳಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಸತತ ಬರ ಅನುಭವಿಸಿದ್ದ ಕಾರಣ ಕಡಲೆ ಇಳುವರಿ ತಾಲೂಕಿನಲ್ಲಿ ಕುಂಠಿತಗೊಂಡಿತ್ತು. ಆದರೆ ಆಕ್ಟೋಬರ್ ಮಾಹೆಯಲ್ಲಿ ಸುರಿದ ಮಳೆಯಿಂದ ತೇವಾಂಶ ಹೆಚ್ಚಳ ಆಗಿದ್ದರಿಂದ ಕಡಲೆ ಬೆಳೆಗೆ ಪೂರಕವಾಗಿ ಪರಿಣಮಿಸಿದೆ.
ಈಗಾಗಿ ರೈತರುಡಿ ಹಿಂಗಾರು ಬೆಳೆ ಕಡಲೆ ಬೆಳೆಗೆ ಒತ್ತು ನೀಡಿ ಬಿತ್ತನೆ ಮಾಡಿದ್ದರು. ತಾಲೂಕಿನಲ್ಲಿ 5850 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಬಹುತೇಕ ಬಿತ್ತನೆಯಾಗಿದೆ. ಕಸಬಾ ಹೋಬಳಿ ವ್ಯಾಪ್ತಿಯ ದೋಣೆಹಳ್ಳಿ, ಮುಸ್ಟೂರು, ಹಿರೆಮಲ್ಲನಹೊಳೆ, ಮೂಡಲ ಮಾಚಿಕೆರೆ, ಸಿದ್ದಿಹಳ್ಳಿ, ಚಿಕ್ಕಮಲ್ಲನಹೊಳೆ ಸೇರಿದಂತೆ ಇತರ ಗ್ರಾಮಗಳಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಗ್ರಾಮಗಳು ಕಪ್ಪು ಮಣ್ಣು ಪ್ರದೇಶ ಆಗಿರುವುದರಿಂದ ತೇವಾಂಶ ಹಿಡಿದಿಟ್ಟುಕೊಂಡಿದ್ದು, ಇಲ್ಲಿ ಶೇ.70ರಷ್ಟು ಬಿತ್ತನೆ ಆಗಿದೆ.
ಸೊಕ್ಕೆ ಹೋಬಳಿ ಹೊಸಕೆರೆ, ಕೆಚ್ಚೆನಹಳ್ಳಿ ಕಪ್ಪು ಮಣ್ಣು ಪ್ರದೇಶ ಹೊಂದಿದೆ. ಸೊಕ್ಕೆ, ಗಡಿಮಾಕುಂಟೆ, ಲಕ್ಕಂಪುರ ಗ್ರಾಮಗಳಲ್ಲಿ ಕೆಂಪು ಮಣ್ಣು ಇರುವುದರಿಂದ ಶೇ.20ರಷ್ಟು ಬಿತ್ತನೆ ಆಗಿದೆ. ಬಿಳಿಚೋಡು ಹೋಬಳಿಯಲ್ಲಿ ಶೇ.5ರಷ್ಟು ಕಡಲೆ ಬಿತ್ತನೆಯಾಗಿದೆ ಎಂಬುದು ಕೃಷಿ ಇಲಾಖೆ ಮಾಹಿತಿ. ಕೃಷಿ ಇಲಾಖೆಯಿಂದ 5250 ಕ್ವಿಂಟಲ್ ಕಡಲೆ ಬೀಜ ವಿತರಿಸಲಾಗಿದೆ. ಬಿತ್ತನೆಯಾದ ಎಲ್ಲ ಗ್ರಾಮಗಳಲ್ಲಿ ಸಮೃದ್ಧವಾಗಿ ಬೆಳೆ ಬಂದಿದ್ದು, ಇಲ್ಲಿಯವರೆಗೂ ಯಾವುದೇ ರೋಗ ಬಾಧೆ ಲಕ್ಷಣಗಳು ಕಂಡುಬಂದಿಲ್ಲ. ಕಳೆದ ಮೂರು ವರ್ಷದಿಂದ ವರುಣ ಅವಕೃಪೆ ಒಳಗಾಗಿದ್ದ ತಾಲೂಕಿನ ರೈತರಿಗೆ ಈ ಬಾರಿ ಕಡಲೆ ಬೆಳೆ ಕೈ ಹಿಡಿಯುವ ಎಲ್ಲ ಲಕ್ಷಣಗಳು ಕಂಡುಬಂದಿವೆ.
-ರವಿಕುಮಾರ ತಾಳಿಕೆರೆ