ಮಡಿಕೇರಿ: ಕೋವಿಡ್ 19 ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಿರುವ ಕೊಡಗು ಜಿಲ್ಲಾಡಳಿತ ವಿದೇಶದಿಂದ ಬಂದಿರುವವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮುಂದುವರಿಸಿದೆ. ಇದುವರೆಗೆ 165 ಜನರನ್ನು ಪತ್ತೆ ಮಾಡಿದ್ದು, ಈ ಪೈಕಿ 159ಜನರಿಗೆ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆ ಮತ್ತು ಮೂವರು ಪ್ರವಾಸಿಗರಿಗೆ ರೆಸಾರ್ಟ್/ ಹೋಂಸ್ಟೇಗಳಲ್ಲೇ ಸಂಪರ್ಕ ತಡೆ ಮಾಡಲಾಗಿದೆ.
ಅಲ್ಲದೆ ಜಿಲ್ಲಾಡಳಿತದಿಂದಆದೇಶವನ್ನು ಹೊರಡಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ವಿವಿಧಇಲಾಖೆಗಳ ಅಧೀನದಲ್ಲಿ ಬರುವ ಎಲ್ಲಾ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರ/ಸಾರ್ವಜನಿಕರ ಭೇಟಿಯನ್ನು ಮಾ.21ರವರೆಗೆ ನಿಷೇಧಿಸಲಾಗಿದೆ.
ವಿದೇಶಗಳಿಗೆ ಹೋಗಿ ಬಂದಿರುವವರನ್ನು ಪತ್ತೆ ಹಚ್ಚಿ ತಪಾಸಣೆ ಮಾಡುವ ಕಾರ್ಯದಡಿ ಮಂಗಳವಾರ ಸಂಜೆಯವರೆಗೆ ಮಡಿಕೇರಿ ತಾಲೂಕಿನಲ್ಲಿ 72, ವೀರಾಜಪೇಟೆ ತಾಲೂಕಿನಲ್ಲಿ 41 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 52 ಜನರನ್ನು ಪತ್ತೆ ಹಚ್ಚಲಾಗಿದೆ.
ವಿದೇಶದಿಂದ ಬಂದ 3 ವ್ಯಕ್ತಿಗಳಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಮಂಗಳವಾರ ಗಡಿ ಭಾಗವಾದ ಕುಟ್ಟ ಮತ್ತು ತೋಲ್ಪಟ್ಟಿ ಚೆಕ್‌ಪೋಸ್ಟ್ ಹಾಗೂ ಕುಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ಭೇಟಿ ನೀಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ತೆರೆಯಲಾದ ಚೆಕ್‌ಪೋಸ್ಟ್‌ಗಳ ಪರಿಶೀಲನೆ ನಡೆಸಿದ್ದಾರೆ.
ಗಡಿ ಭಾಗದಲ್ಲಿ ತಪಾಸಣೆ ಕೇರಳ ರಾಜ್ಯ ಗಡಿ ಭಾಗವಾದ ಕರಿಕೆ, ಕುಟ್ಟ ಮತ್ತು ಮಾಕುಟ್ಟ ಗಡಿಭಾಗಗಳಲ್ಲಿ ಕೇರಳ ರಾಜ್ಯದಿಂದ ಜಿಲ್ಲೆಗೆ ಬರುವವರನ್ನು 24×7 ಗಂಟೆಯೂ ತಪಾಸಣೆ ನಡೆಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದಲೂ ಹಕ್ಕಿ ಜ್ವರದ ಸಂಬಂಧ ಕೇರಳದಿಂದ ಜಿಲ್ಲೆಗೆ ಬರುವ ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ತಡೆಯಲು ಈ ಮೂರು ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್ ಗಳನ್ನು ತೆರೆಯಲಾಗಿದೆ ಮತ್ತು ಈ ಎರಡೂ ಇಲಾಖೆಯ ಚೆಕ್‌ಪೋಸ್ಟ್‌ಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.