Advertisement

ಕೋಳಿ ಜ್ವರ ಮಾನವ ಆರೋಗ್ಯಕ್ಕೆ ಹಾನಿಕರವಲ್ಲ: ಸಚಿವ ಎ.ಮಂಜು

07:15 AM Jan 13, 2018 | |

ಬೆಂಗಳೂರು: ರಾಜ್ಯದಲ್ಲಿ ಕೋಳಿಗಳಿಗೆ ಕಾಣಿಸಿಕೊಂಡಿರುವ ಹಕ್ಕಿಜ್ವರ ಮಾನವನ ಆರೋಗ್ಯಕ್ಕೆ ಹಾನಿಕರವಲ್ಲ. ಹೀಗಾಗಿ ಕೋಳಿಮಾಂಸ ತಿನ್ನಲು ಸಮಸ್ಯೆ ಇಲ್ಲ ಎಂದು ಪಶು ಸಂಗೋಪನಾ ಸಚಿವ ಎ.ಮಂಜು ಹೇಳಿದ್ದಾರೆ.

Advertisement

ಆದರೆ, ತುಮಕೂರು ಜಿಲ್ಲೆ ಕುಣಿಗಲ್‌ನ ಫಾರಂನಿಂದ ಬಂದ ಕೋಳಿಗಳಿಂದಾಗಿ ಬೆಂಗಳೂರು ಸುತ್ತಮುತ್ತ ಕಾಣಿಸಿಕೊಂಡಿರುವ ಹಕ್ಕಿ ಜ್ವರ ಕುರಿತ ಮಾದರಿಯನ್ನು ಭೋಪಾಲ್‌ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಆ ವರದಿ ಇನ್ನೂ ಬಂದಿಲ್ಲ. ಅದು ಬಂದ ಮೇಲೆ ರಾಜ್ಯದಲ್ಲಿ ಕಾಣಿಸಿಕೊಂಡ ಹಕ್ಕಿಜ್ವರ ಮಾನವನ ಆರೋಗ್ಯಕ್ಕೆ ಹಾನಿಕರವೇ ಎಂಬುದು ಸ್ಪಷ್ಟವಾಗಲಿದೆ ಎಂದರು.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಕೋಳಿಗೆ ಕಾಣಿಸಿಕೊಂಡಿದ್ದ ಜ್ವರ ಹಿನ್ನೆಲೆಯಲ್ಲಿ ಅದರ ಮಾದರಿಯನ್ನು ಭೋಪಾಲ್‌ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅಲ್ಲಿಂದ ವರದಿ ಬಂದಿದೆ. ಕೋಳಿಗೆ ಎಚ್‌-5 ಮಾದರಿ ಜ್ವರ ಕಾಣಿಸಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಜ್ವರ ಬಂದ ಕೋಳಿಗಳ ಮಾಂಸ ಸೇವನೆ ಮಾನನವ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹಕ್ಕಿಜ್ವರದಲ್ಲಿ ಹಲವು ವಿಧಗಳಿವೆ. ಆ ಪೈಕಿ ಎನ್‌-1 ಹಕ್ಕಿಜ್ವರ ಬಂದರೆ ಮಾತ್ರ ಮಾನವನ ಆರೋಗ್ಯಕ್ಕೆ ಹಾನಿಕರ. ಆದರೆ, ಪ್ರಸ್ತುತ ರಾಜ್ಯದಲ್ಲಿರುವುದು ಎಚ್‌-5 ಜ್ವರವಾಗಿರುವುದರಿಂದ ಜನ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಬೆಂಗಳೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಳ್ಳಲು ಕಾರಣವಾದ ಕುಣಿಗಲ್‌ನ ಕೋಳಿ ಫಾರಂ ಅನ್ನು ಮುಚ್ಚಿ ಅಲ್ಲಿನ ಕೋಳಿಗಳನ್ನು ನಾಶಪಡಿಸಲಾಗಿದೆ. ಅಲ್ಲದೆ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಂದ ಬರುವ ಕೋಳಿಗಳನ್ನು ಪರೀಕ್ಷಿಸಿ ರಾಜ್ಯಕ್ಕೆ ತರಲಾಗುತ್ತಿದೆ. ಅಲ್ಲದೆ, ಹಕ್ಕಿಜ್ವರ ಏಕೆ ಬಂದಿದೆ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next