Advertisement

ಶಿವಾಜಿ ಇಲ್ಲದಿದ್ದರೆ ಭಾರತ ಮತ್ತೊಂದು ಪಾಕ್‌ ಆಗಿರುತ್ತಿತ್ತು: ಸಚಿವ ಸಿ.ಟಿ.ರವಿ

08:40 AM Feb 20, 2020 | Sriram |

ಬೆಂಗಳೂರು: ಹಿಂದೂ ಸಾಮ್ರಾಜ್ಯದ ಸ್ಥಾಪನೆಗಾಗಿ ಛತ್ರಪತಿ ಶಿವಾಜಿ ಹೋರಾಟ ಪ್ರಾರಂಭಿಸದೇ ಹೋಗಿದ್ದರೆ, ಭಾರತ ಇಂದು ಮತ್ತೊಂದು ಪಾಕಿಸ್ತಾನವಾಗಿರುತ್ತಿತ್ತು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ಹೇಳಿದರು.

Advertisement

ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಸ್ತವಾಂಶ ಮಾತನಾಡಿದರೆ ಪ್ರಚೋದನೆ ನೀಡಿದಂತಾಗುವುದಿಲ್ಲ. ಛತ್ರಪತಿ ಶಿವಾಜಿ ಜನ್ಮವೇ ತಾಳದಿದ್ದರೆ, ಇಂದು ನಮ್ಮ ತಾಯಂದಿರ ಹಣೆಯ ಮೇಲೆ ಕುಂಕುಮ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಕೆಲವರು ಉದ್ದೇಶಪೂರ್ವಕವಾಗಿ, ಇನ್ನು ಕೆಲವರು ತಿಳಿವಳಿಕೆ ಇಲ್ಲದೆ ಇತಿಹಾಸದಲ್ಲಿ ಶಿವಾಜಿಯ ಸಾಧನೆಗಳ ಬಗ್ಗೆ ಉಲ್ಲೇಖೀಸಿಲ್ಲ. ಹಿಂದೂ ಎನ್ನುವ ಭಾವನೆ ಎಲ್ಲರಲ್ಲೂ ಇದ್ದರೆ ದೇಶ ಉಳಿಯುವುದಕ್ಕೆ ನೆರವಾಗಲಿದೆ. ಆದರೆ, ನಾವೆಲ್ಲ ಒಂದು ನಾವೆಲ್ಲ ಹಿಂದೂ ಎನ್ನುವ ಭಾವನೆ ಬಲಗೊಳ್ಳಬೇಕು.ಯಾವುದೇ ಪಕ್ಷಕ್ಕೆ ಬೇಕಾದರೂ ಮತ ಹಾಕಿಕೊಳ್ಳಿ. ಹಿಂದೂ ಎನ್ನುವ ಭಾವನೆ ಬೆಳಸಿಕೊಳ್ಳಿ. ಕೆಲವರಿಗೆ ಭಗವಧ್ವಜ ಪ್ರೇರಣೆ ಇನ್ನೂ ಕೆಲವರಿಗೆ ಪ್ರಚೋದನೆ ಮಾಡಿದಂತಾಗುತ್ತದೆ. ಅವರವರ ಭಾವಕ್ಕೆ ಸಂಬಂಧಿಸಿದ್ದು ಎಂದರು.

ಶಿವಾಜಿಯನ್ನು ಒಂದು ಪ್ರದೇಶಕ್ಕೆ, ಜಾತಿಗೆ ಹಾಗೂ ಭಾಷೆಗೆ ಸೀಮಿತ ಮಾಡುವುದು ಅವರಿಗೆ ಮಾಡುವ ಅವಮಾನ. ಅದೇ ರೀತಿ ಶಿವಾಜಿಯನ್ನು ಗಡಿ ವಿವಾದದೊಂಗೆ ತಳಕು ಹಾಕುವ ಹುನ್ನಾರವೂ ನಡೆಯುತ್ತಿದೆ. ಇದು ಶೋಭೆ ತರುವ ವಿಚಾರವಲ್ಲ. ದೇಶಕ್ಕೆ ಯಾವುದೇ ಕೊಡುಗೆ ನೀಡದವರ ಜಯಂತಿಯನ್ನು ವಿಧಾನಸೌಧದ ಸಭಾಂಗಣದಲ್ಲಿ ಆಚರಣೆ ಮಾಡಲಾಗಿದೆ. ದೇಶಕ್ಕೆ ಸೇವೆ ನೀಡಿರುವ ಶಿವಾಜಿ ಅವರ ಜಯಂತಿ ವಿಧಾನಸೌಧದಲ್ಲಿ ಆಚರಣೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ಈ ಬಾರಿ ಅಧಿವೇಶನ ಇರುವುದರಿಂದ ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಜವಳಿ ಮತ್ತು ಕೈಮಗ್ಗ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಬಲಾಡ್ಯರ ವಿರುದ್ಧ ಯಾರೂ ಮಾತನಾಡದ ಸಂದರ್ಭದಲ್ಲಿ ಶಿವಾಜಿ ಅವರು ಹಿಂದೂ ಸಾಮ್ರಾಜ್ಯ ಉಳಿವಿಗೆ ಶ್ರಮಿಸಿದರು. ಅಪ್ಪಟ ದೇಶ ಪ್ರೇಮಿಯಾಗಿದ್ದ ಶಿವಾಜಿ ಯಾವುದೇ ಒಂದು ಜಾತಿಗೆ ಸೀಮಿತ ಆಗಿರಲಿಲ್ಲ ಎಂದರು.

Advertisement

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ ಆಡಳಿತ ಅಧ್ಯಕ್ಷ ವಿ.ಎ.ಎ.ರಾಣೋಜಿರಾವ್‌ ಸಾಠೆ ಮಾತನಾಡಿ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವ ಮೂಲಕ, ಜನಾಂಗದ ಏಳಿಗೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.

ಮರಾಠ ಸಮುದಾಯ ಅಭಿವೃದ್ಧಿಗೆ ಮೀಸಲಾತಿ, 100 ಕೋಟಿ ರೂ.ಅನುದಾನ, ಪ್ರತ್ಯೇಕ ನಿಗಮ ಮಂಡಳಿ ಹಾಗೂ ಸಮುದಾಯವನ್ನು 3ಬಿ ಪ್ರವರ್ಗದಿಂದ 2ಗೆ ಸೇರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಟಿ.ರವಿ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೋಸಾಯಿ ಮಹಾ ಸಂಸ್ಥಾನಮಠ ಭವಾನಿಪೀಠದ ಮಂಜುನಾಥ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ ರಾಜ್ಯಾಧ್ಯಕ್ಷ ಎಸ್‌.ಸುರೇಶ್‌ರಾವ್‌ ಸಾಠೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ ಹಾಗೂ ಕಾರ್ಯದರ್ಶಿ ಆರ್‌.ಆರ್‌.ಜನ್ನು ಮತ್ತಿತರರು ಹಾಜರಿದ್ದರು.

ಕನ್ನಡ ಸಚಿವನಿಂದ ಮರಾಠೀ ಭಾಷಣ!
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಜವಳಿ ಮತ್ತು ಕೈಮಗ್ಗ ಸಚಿವ ಶ್ರೀಮಂತ ಪಾಟೀಲ, ಮರಾಠಿಯಲ್ಲೇ ಭಾಷಣ ಮಾಡಿದರು. ಭಾಷಣ ಪ್ರಾರಂಭಿಸುವುದಕ್ಕೂ ಮುನ್ನ ಇಲ್ಲಿ ಎಲ್ಲರಿಗೂ ಮರಾಠಿ ಬರುತ್ತದೆ ತಾನೇ ಎಂದು ಮರಾಠಿಯಲ್ಲಿ ಪ್ರಶ್ನೆ ಮಾಡಿದ ಸಚಿವರು, ಬೆರಳೆಣಿಕೆಯ ಜನ ಕೈ ಎತ್ತಿದರೂ ಮರಾಠಿಯಲ್ಲೇ ಭಾಷಣ ಮುಂದುವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next