ಹೈದರಾಬಾದ್:ಡಿಸೆಂಬರ್ 7 ರಂದು ತೆಲಂಗಾಣ ವಿಧಾನಸಭೆಗೆ ಚುನವಾಣೆ ನಡೆಯಲಿದ್ದು ರಾಜಕೀಯ ವಿದ್ಯಮಾನಗಳಲ್ಲಿ ಪಕ್ಷಾಂತರ ಪರ್ವವೂ ಜೋರಾಗಿ ನಡೆಯುತ್ತಿದೆ. ಮಂಗಳವಾರ ಟಿಆರ್‌ಎಸ್ ತೊರೆದಿದ್ದ ಚೆವೆಲ್ಲಾ ಕ್ಷೇತ್ರದ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ಅವರು ಬುಧವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಮೂಲಕ ಕಾಂಗ್ರೆಸ್ ಸೇರ್ಪಡೆಯಾಗುವ ಸುದ್ದಿಗೆ ಪುಷ್ಠಿ ನೀಡಿದ್ದಾರೆ.
2014 ರ ಚುನಾವಣೆ ವೇಳೆ 528 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಳ್ಳುವ ಮೂಲಕ ತೆಲಂಗಾಣದ ಶ್ರೀಮಂತ ಸಂಸದ ಎನಿಸಿಕೊಂಡಿದ್ದರು.
ಕೊಂಡ ವಿಶ್ವೇಶ್ವರ ರೆಡ್ಡಿ ಅವರು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರಿಗೆ 3 ಪುಟಗಳಷ್ಟು ಪತ್ರ ಬರೆದು ತೆಲಂಗಾಣ ರಾಷ್ಟ್ರೀಯ ಸಮಿತಿಯ ವಿರುದ್ದ ತೀವ್ರ ಅಸಮಾಧಾನ ಹೊರ ಹಾಕಿ ಪಕ್ಷವನ್ನು ತೊರೆದಿದ್ದರು ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದ್ದರು.
ವೈಯಕ್ತಿಕ, ಕಾರ್ಯಕರ್ತರ ಕಡೆಗಣನೆ , ಕ್ಷೇತ್ರದ ಕಡೆಗಣನೆ ಮೊದಲಾದ ವಿಚಾರಗಳಿಗೆ ನೊಂದು ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ವಿಶ್ವೇಶ್ವರ ರೆಡ್ಡಿ ಹೇಳಿಕೊಂಡಿದ್ದರು.
ವಿಶ್ವೇಶ್ವರ ರೆಡ್ಡಿ ಅವರು ಪಕ್ಷ ತೊರೆದಿರುವುದು ಟಿಆರ್‌ಎಸ್‌ಗೆ ಭಾರಿ ಹೊಡೆತವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲಿ ಟಿಡಿಪಿ , ತೆಲಂಗಾಣ ಜನ ಸಮಿತಿ ಮತ್ತು ಸಿಪಿಐ ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ಕುರಿತಾಗಿ ಅಸಮಾಧಾನ ಭುಗಿಲೆದ್ದಿದೆ.
ಕಾಂಗ್ರೆಸ್ ಮಿತ್ರ ಪಕ್ಷಗಳಿಗೆ 25 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಟಿಡಿಪಿಗೆ 14, ಟಿಜೆಎಸ್‌ಗೆ 8 ಮತ್ತು ಸಿಪಿಐಗೆ 3 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.ಟಿಜೆಎಸ್ 12 ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದೆ.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು , ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟವಾಗಲಿದೆ.