ಈಗಂತೂ ಎಲ್ಲಿ ನೋಡಿದ್ರೂ ಸೆಲ್ಫಿಯ ಜಮಾನ. ಕೈಯಲ್ಲಿರುವ ಸ್ಮಾರ್ಟ್‌ಫೋನಿನಲ್ಲಿ ಪ್ರತಿದಿನ ಭಿನ್ನ-ವಿಭಿನ್ನಭಂಗಿಯ ಹತ್ತಾರು ಫೋಟೋಗಳನ್ನು ಬಹುತೇಕರು ಕ್ಲಿಕ್ಕಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ಎರಡು-ಮೂರು ದಶಕಗಳ ಹಿಂದೆ ಫೋಟೋಗಳನ್ನು ತೆಗೆಸಿಕೊಳ್ಳುವ ಪ್ರಕ್ರಿಯೆ ಹೀಗಿರಲಿಲ್ಲ. ಎಲ್ಲೋ ಹಳ್ಳಿಯಲ್ಲಿರುವವರು ಒಂದು ಚಿಕ್ಕ ಫೋಟೋ ತೆಗೆಸಿಕೊಳ್ಳಬೇಕು ಅಂತಿದ್ದರೇ, ಸಣ್ಣ-ಪುಟ್ಟ ಪಟ್ಟಣಗಳಲ್ಲಿರುವ ಸ್ಟುಡಿಯೋಗಳಿಗೆ ಹೋಗಬೇಕಿತ್ತು. ಆದರೆ ಮದುವೆ ಮತ್ತಿತರ ಯಾವುದಾದರೂ ಸಮಾರಂಭಗಳಿಗೆ ಕಾಯಬೇಕಿತ್ತು. ಇಂಥದ್ದೇ 90ರ ದಶಕದ ಫೋಟೋ ಹಿಂದಿನ ಭಾವನಾತ್ಮಕ ಕಥೆಯನ್ನು ತೆರೆದಿಡುವ ಚಿತ್ರ “ಭಾವಪೂರ್ಣ’. ಈ ಚಿತ್ರ ಅ.27ಕ್ಕೆ ತೆರೆಕಾಣುತ್ತಿದೆ.
90ರ ಕಾಲಘಟ್ಟದ ಕಥೆಯನ್ನು ಇಂದಿನ ಕಾಲಘಟ್ಟದಲ್ಲಿ ಜೋಡಿಸಿ, “ಭಾವಪೂರ್ಣ’ ಸಿನಿಮಾವನ್ನು ಎಲ್ಲರೂ ನೋಡುವಂತೆ, ಎಲ್ಲರಿಗೂ ಕಾಡುವಂಥೆ ತೆರೆಮೇಲೆ
ತಂದಿದ್ದೇವೆ. ಕೆಲವು ಸಿನಿಮಾಗಳು ನೋಡಿದ ನಂತರ ಮರೆಯಾಗುತ್ತದೆ. ಆದರೆ ಕೆಲವು ಸಿನಿಮಾಗಳು ನೋಡಿದ ನಂತರವೂ ಕಾಡುತ್ತವೆ. ಅಂಥ ನೋಡುವ, ಕಾಡುವ ಸಿನಿಮಾ ನಮ್ಮದು ಎನ್ನುವುದು “ಭಾವಪೂರ್ಣ’ ಸಿನಿಮಾದ ನಿರ್ದೇಶಕ ಚೇತನ್ ಮುಂಡಾಡಿ ಮತ್ತು ಚಿತ್ರತಂಡದ ಒಕ್ಕೊರಲ ಮಾತು.
“ಜಿ.ಎಲ್ ಮೋಶನ್ ಪಿಕ್ಚರ್’ ಬ್ಯಾನರಿನಲ್ಲಿ ಪ್ರಶಾಂತ್ ಅಂಜನಪ್ಪ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಭಾವಪೂರ್ಣ’ ಸಿನಿಮಾಕ್ಕೆ ಚೇತನ್ ಮುಂಡಾಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇಲ್ಲಿಯವರೆಗೆ ಸಿನಿಮಾ ಮತ್ತು ಕಿರುತೆರೆಯಲ್ಲಿ ನೂರಾರು ವಿಭಿನ್ನ ಪಾತ್ರಗಳಲ್ಲಿ ಮಿಂಚಿರುವ ನಟ ರಮೇಶ್ ಪಂಡಿತ್ ತಮ್ಮ ವೃತ್ತಿ ಜೀವನದಲ್ಲೇ ಮೊದಲ ಬಾರಿಗೆ “ಭಾವಪೂರ್ಣ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಮಂಜುನಾಥ್ ಹೆಗಡೆ, ಶೈಲಶ್ರೀ, ಮಂಗಳಾ, ನಾಗೇಂದ್ರ ಶಾ, ಅಥರ್ವ ಪ್ರಕಾಶ್, ವಿನ್ಯಾ ರೈ, ವಿ. ಮನೋಹರ್, ಸುಜಯ್ ಶಾಸ್ತ್ರಿ, ಎಂ. ಕೆ ಮಠ, ಉಗ್ರಂ ಮಂಜು, ಶಿವಾಜಿರಾವ್ ಜಾಧವ್, ಪವನ್, ಗೋವಿಂದೇಗೌಡ (ಜಿ. ಜಿ) ಮುಂತಾದವರು “ಭಾವಪೂರ್ಣ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.