ಮಂಗಳೂರು: ದ್ವಿಚಕ್ರ ವಾಹನ ಶೋರೂಮ್‌ಗಳಿಗೆ ತೆರಳಿ ಮುಂಗಡ ಹಣ ಪಾವತಿಸಿ ವಾಹನ ಬುಕ್ ಮಾಡಿ ಎರಡು ದಿನಗಳ ಬಳಿಕ ವಾಹನ ಬುಕಿಂಗನ್ನು ರದ್ದು ಪಡಿಸಿ ಈ ಸಂದರ್ಭದಲ್ಲಿ ಮುಂಗಡ ಹಣಕ್ಕೆ ಸಂಬಂಧಿಸಿ ಶೋರೂಮ್ ಮಾಲಕರು ನೀಡುವ ಚೆಕ್‌ನ್ನು ಪಡೆದು ಬಳಿಕ ಅದನ್ನು ತಿದ್ದಿ ಅಧಿಕ ಮೊತ್ತವನ್ನು ನಮೂದಿಸಿ ಬ್ಯಾಂಕಿಗೆ ಹಾಕಿ ಶೋರೂಮ್ ಮಾಲಕರನ್ನು ವಂಚಿಸಲು ಯತ್ನಿಸಿದ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಬೆಂಗಳೂರಿನ ದೊಡ್ಡಬಳ್ಳಾಪುರ ರಸ್ತೆಯ ಮಲ್ಲಪ್ಪ ಲೇಔಟ್‌ನ ಅಬ್ದುಲ್ ಅಲಿ ಈ ಪ್ರಕರಣದ ಆರೋಪಿ.
ಮಂಗಳೂರಿನಲ್ಲಿ ಈತ ಮೂರು ದ್ವಿಚಕ್ರ ವಾಹನ ಶೋರೂಮ್‌ಗಳಿಗೆ ವಂಚಿಸಲು ಯತ್ನಿಸಿದ ಬಗ್ಗೆ ಮಾಹಿತಿ ಲಭಿಸಿದ್ದು, ಒಂದು ಶೋರೂಮ್‌ನ ಮಾಲಕರು ಮಾತ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಾಂಡೇಶ್ವರದ ಪೈ ಸೇಲ್ಸ್ ಸಂಸ್ಥೆಗೆ ಜೂ. 12ರಂದು ಭೇಟಿ ನೀಡಿದ್ದ ಅಬ್ದುಲ್ ಅಲಿ ಆ್ಯಕ್ಸೆಸ್ ಸ್ಕೂಟರ್ ಬುಕ್ ಮಾಡಿ 1,000 ರೂ. ಮುಂಗಡ ಹಣ ನೀಡಿದ್ದನು. ಜೂ. 14ರಂದು ಆತ ಶೋರೂಮ್‌ಗೆ ತೆರಳಿ ವಾಹನ ಬುಕಿಂಗನ್ನು ರದ್ದು ಪಡಿಸಿದ್ದು, ಈ ಸಂದರ್ಭದಲ್ಲಿ ಆತನಿಗೆ ಮುಂಗಡ ಹಣದ ಮರುಪಾವತಿಗಾಗಿ ಶೋರೂಮ್‌ನಿಂದ ಎಸ್‌ಬಿಐ ಮಲ್ಲಿಕಟ್ಟೆ ಶಾಖೆಯ 1,000 ರೂ. ಗಳ ಚೆಕ್ ನೀಡಲಾಗಿತ್ತು.
ಆರೋಪಿ ಅಬ್ದುಲ್ ಅಲಿ ಈ ಚೆಕ್‌ನನ್ನು ತಿದ್ದಿ 2,70,000 ರೂ.ಗಳೆಂಬುದಾಗಿ ನಮೂದಿಸಿ ಮಂಗಳೂರಿನ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಕ್ಲಿಯರೆನ್ಸ್‌ಗಾಗಿ ಹಾಕಿದ್ದನು. (ಅಬ್ದುಲ್ ಅಲಿಯ ಮೂಲ ಬ್ಯಾಂಕ್ ಖಾತೆ ಬೆಂಗಳೂರಿನ ಬ್ಯಾಂಕ್ ಆಫ್ ಬರೋಡಾದಲ್ಲಿ ಇದ್ದು, ಎನಿವೇರ್ ಬ್ಯಾಂಕಿಂಗ್ ಸೌಲಭ್ಯ ಇರುವುದರಿಂದ ಆತ ಈ ಚೆಕ್‌ನ್ನು ಮಂಗಳೂರು ಶಾಖೆಗೆ ಪ್ರಸೆಂಟ್ ಮಾಡಿದ್ದನು).
ಬ್ಯಾಂಕ್ ಆಫ್ ಬರೋಡಾ ಮಂಗಳೂರು ಶಾಖೆಯ ಅಧಿಕಾರಿಗಳು ಈ ಚೆಕ್‌ನ್ನು ಕ್ಲಿಯರೆನ್ಸ್‌ಗಾಗಿ ಎಸ್‌ಬಿಐ ಮಲ್ಲಿಕಟ್ಟೆ ಶಾಖೆಗೆ ಕಳುಹಿಸಿದ್ದರು. ಎಸ್‌ಬಿಐನ ಅಧಿಕಾರಿಗಳು 2,70,000 ರೂ. ಗಳ ಚೆಕ್‌ನ್ನು ಕ್ಲಿಯರೆನ್ಸ್ ಮಾಡಬಹುದೇ ಎಂದು ಜು. 3ರಂದು ಪೈ ಸೇಲ್ಸ್ ಸಂಸ್ಥೆಗೆ ಮೊಬೈಲ್ ಸಂದೇಶ ಕಳುಹಿಸಿದಾಗ ಅಬ್ದುಲ್ ಅಲಿ ವಂಚನೆ ಮಾಡಿರುವ ವಿಷಯ ಗೊತ್ತಾಯಿತು. ಕೂಡಲೇ ಸಂಸ್ಥೆಯವರು ಸ್ಟಾಪ್ ಪೇಮೆಂಟ್‌ಗೆ ಆದೇಶ ನೀಡಿ, ಆರೋಪಿಯ ಖಾತೆಗೆ ಹಣ ವರ್ಗಾವಣೆಯಾಗದಂತೆ ನೋಡಿಕೊಂಡರು. ಬಳಿಕ ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ಅಬ್ದುಲ್ ಅಲಿ ನಗರದ ಇನ್ನೂ ಎರಡು ದ್ವಿಚಕ್ರ ವಾಹನ ಮಾರಾಟ ಮಳಿಗೆಗಳಿಗೆ ಇದೇ ರೀತಿ ವಂಚಿಸಲು ಯತ್ನಿಸಿದ ಬಗ್ಗೆ ಮಾಹಿತಿ ಲಭಿಸಿದೆ. ಒಂದು ಮಳಿಗೆಯಲ್ಲಿ 1000 ರೂ. ಚೆಕ್‌ನ್ನು ತಿದ್ದಿ 4,50,000 ರೂ. ಎಂಬುದಾಗಿ ಹಾಗೂ ಇನ್ನೊಂದು ಮಳಿಗೆಯಲ್ಲಿ 4,60,000 ರೂ. ಎಂಬುದಾಗಿ ನಮೂದಿಸಿದ್ದನು. ತಿದ್ದುಪಡಿ ಮಾಡಿದ ಚೆಕ್ ನೋಡಿದ ಕೂಡಲೇ ಬ್ಯಾಂಕ್ ಸಿಬಂದಿಗೆ ಸಂಶಯ ಬಂದಿದ್ದು, ಅವರು ಚೆಕ್‌ನಲ್ಲಿ ನಮೂದಿಸಿದ್ದ ಫೋನ್ ನಂಬರ್ ಮೂಲಕ ಕರೆ ಮಾಡಿ ಅಬ್ದುಲ್ ಅಲಿಯನ್ನು ಬ್ಯಾಂಕಿಗೆ ಬರುವಂತೆ ವಿನಂತಿಸಿದ್ದಾರೆ. ಆದರೆ ಅಬ್ದುಲ್ ಅಲಿ ತಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. ಈಗ ಬರಲಾಗುವುದಿಲ್ಲ ಎಂದು ತಿಳಿಸಿದ್ದು, ಬಳಿಕ ಆತ ಸಂಪರ್ಕವನ್ನೂ ಮಾಡದೆ ನಾಪತ್ತೆಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.