Advertisement

ನಿಷ್ಠೆ ಸಾಬೀತುಪಡಿಸಲು ಪತಿ ಸವಾಲು…10 ವರ್ಷದ ಮಗಳನ್ನು ಬೆಂಕಿ ಹಚ್ಚಿಕೊಂದ ಪತ್ನಿ!

03:56 PM Feb 01, 2022 | Team Udayavani |

ಚೆನ್ನೈ: ಪತಿಯ ಸವಾಲನ್ನು ಸ್ವೀಕರಿಸಿ ತನ್ನ ನಿಷ್ಠೆಯನ್ನು ಸಾಬೀತುಪಡಿಸಲು ಪತ್ನಿ ಹತ್ತು ವರ್ಷದ ಮಗಳನ್ನೇ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಚೆನ್ನೈನ ತಿರುವಟ್ಟಿಯೂರ್ ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪತಿ, ಪತ್ನಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಮಣಿಪಾಲ: ಅಪಘಾತದ ರಭಸಕ್ಕೆ ಧಗಧಗನೇ ಹೊತ್ತಿ ಉರಿದ ಸ್ಕೂಟರ್

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಶೇ.75ರಷ್ಟು ಸುಟ್ಟು ಹೋಗಿದ್ದ ಮಗು ಸೋಮವಾರ ಬೆಳಗ್ಗೆ ಸಾವನ್ನಪ್ಪಿತ್ತು. ಘಟನೆ ಕುರಿತಂತೆ ಜಯಲಕ್ಷ್ಮಿ ಹಾಗೂ ಆಕೆಯ ಪತಿ ಪದ್ಮನಾಭನ್ ನನ್ನು ಪೊಲೀಸರು ಬಂಧಿಸಿದ್ದು, ಬಳಿಕ ಕೋರ್ಟ್ ಇಬ್ಬರನ್ನು ದೋಷಿ ಎಂದು ಆದೇಶ ನೀಡಿ ಜೈಲಿಗೆ ಕಳುಹಿಸಿದೆ.

ಏನಿದು ನಿಷ್ಠೆ ಸಾಬೀತು ಘಟನೆ?

5ನೇ ತರಗತಿ ವಿದ್ಯಾರ್ಥಿನಿ ಪವಿತ್ರ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾಳೆ. ಪವಿತ್ರ ತನ್ನ ತಾಯಿ ಜಯಲಕ್ಷ್ಮಿ ಹಾಗೂ ಮಲ ತಂದೆ ಪದ್ಮನಾಭನ್ ಜೊತೆ ವಾಸವಾಗಿದ್ದಳು. ಪೊಲೀಸರ ಮಾಹಿತಿ ಪ್ರಕಾರ, ಜಯಲಕ್ಷ್ಮಿ ತನ್ನ 19 ವಯಸ್ಸಿನಲ್ಲಿ ಪಲ್ವಾಣ್ಣನ್ ಎಂಬಾತನ ಜೊತೆ ಮೊದಲ ವಿವಾಹವಾಗಿದ್ದಳು. ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಈಗ ಆಕೆ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ಟುಟಿಕೋರಿಯನ್ ನಲ್ಲಿ ಅಜ್ಜಿ ಜತೆ ವಾಸವಾಗಿದ್ದಾಳೆ ಎಂದು ತಿಳಿಸಿದ್ದಾರೆ.

Advertisement

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕೆಲವು ವರ್ಷದ ನಂತರ ಜಯಲಕ್ಷ್ಮಿ ಪಲ್ವಾಣ್ಣನ್ ತೊರೆದು, ಆತನ ಕಿರಿಯ ಸಹೋದರ ದೊರೆರಾಜ್ ಎಂಬಾತನ ಜತೆ ವಿವಾಹವಾಗಿದ್ದಳು. ನಂತರ ಇಬ್ಬರೂ ಮುಂಬಯಿಯಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಪವಿತ್ರ ಜನಿಸಿದ್ದಳು ಎಂದು ತಿಳಿಸಿದೆ.

ಬಳಿಕ ದೊರೆರಾಜ್ ನನ್ನೂ ತೊರೆದು ಮುಂಬಯಿನಿಂದ ಚೆನ್ನೈಗೆ ವಾಪಸ್ ಬಂದು, ತಿರುವಟ್ಟಿಯೂರ್ ನಲ್ಲಿ ನೆಲೆಸಿದ್ದಳು. ಈ ವೇಳೆ ಪದ್ಮನಾಭನ್ ಎಂಬಾತನ ಜತೆ ಸ್ನೇಹ ಬೆಳೆಸಿದ್ದಳು. ಈತ ವೃತ್ತಿಯಲ್ಲಿ ಟ್ಯಾಂಕರ್ ಚಾಲಕನಾಗಿದ್ದ. ಇಬ್ಬರೂ ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿದ್ದು, ಆರು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳಿದ್ದಾರೆ ಎಂದು ವರದಿ ವಿವರಿಸಿದೆ.

ಪದ್ಮನಾಭನ್ ಮದ್ಯ ಸೇವಿಸಿ ಬಂದು ಪತ್ನಿ ಜತೆ ಆಕೆಯ ನಿಷ್ಠೆಯ ಬಗ್ಗೆ ಗಲಾಟೆ ಮಾಡಿಕೊಳ್ಳುತ್ತಿದ್ದ. ಭಾನುವಾರ (ಜನವರಿ 30) ರಾತ್ರಿ ಗಂಡ, ಹೆಂಡತಿ ನಡುವೆ ಮತ್ತೆ ಜಗಳ ಆರಂಭವಾಗಿದ್ದು, ಮಗಳು ಪವಿತ್ರಳಿಗೆ ಬೆಂಕಿ ಹಚ್ಚುವಂತೆ ಪತಿ ಸವಾಲು ಹಾಕಿದ್ದ. ಅಲ್ಲದೇ ಒಂದು ವೇಳೆ ಜಯಲಕ್ಷ್ಮಿ ನಿಷ್ಕಪಟಿಯಾಗಿದ್ದರೆ ಮಗಳು ಪವಿತ್ರಳಿಗೆ ಬೆಂಕಿಯಿಂದ ಏನೂ ಹಾನಿಯಾಗಲಾರದು ಎಂದು ಪತಿ ಹೇಳಿದ್ದ.!

ಪತಿಯ ಸವಾಲು ಸ್ವೀಕರಿಸಿದ ಪತ್ನಿ ಕೋಣೆಯೊಳಗೆ ತೆರಳಿ ತನ್ನ ಮಲ ಸಹೋದರಿಯರೊಂದಿಗೆ ಮಲಗಿ ನಿದ್ರಿಸುತ್ತಿದ್ದ ಪವಿತ್ರಳನ್ನು ಎತ್ತಿಕೊಂಡು ಹೊರತಂದು ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಳು.

ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದ ಮಗು ಕಿರುಚಾಡುತ್ತಿರುವುದನ್ನು ಕೇಳಿ ನೆರೆ ಹೊರೆಯವರು ಮನೆಯೊಳಗೆ ಬಂದು ಬೆಂಕಿಯನ್ನು ನಂದಿಸಿ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಸುಟ್ಟ ಗಾಯಗಳಿಂದಾಗಿ ಮಗು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next