Advertisement

ಚೆನ್ನೈಅಂಗಳದಲ್ಲಿ ಡೆಲ್ಲಿಗೆ ಅಗ್ನಿಪರೀಕ್ಷೆ: ಇತ್ತಂಡಗಳ ನಡುವಿನ ಮೊದಲ ಮುಖಾಮುಖಿ

09:56 PM May 09, 2023 | Team Udayavani |

ಚೆನ್ನೈ: ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ನೆಗೆದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಬುಧವಾರ ರಾತ್ರಿ ಕಟ್ಟಕಡೆಯ ಸ್ಥಾನಿಯಾದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ತನ್ನದೇ ಅಂಗಳದಲ್ಲಿ ಮಹತ್ವದ ಪಂದ್ಯವನ್ನು ಆಡಲಿದೆ. ಸಹಜವಾಗಿ ಧೋನಿ ಪಡೆಯೇ ಇಲ್ಲಿನ ನೆಚ್ಚಿನ ತಂಡವಾಗಿದೆ.

Advertisement

ಚೆನ್ನೈ ಈವರೆಗೆ 11 ಪಂದ್ಯಗಳಲ್ಲಿ ಆರನ್ನು ಗೆದ್ದು 13 ಅಂಕ ಹೊಂದಿದೆ. ಇನ್ನೊಂದೆಡೆ ಡೆಲ್ಲಿ 10 ಪಂದ್ಯಗಳಲ್ಲಿ ನಾಲ್ಕನ್ನಷ್ಟೇ ಜಯಿಸಿದೆ. 8 ಅಂಕದೊಂದಿಗೆ ಅಂಕಪಟ್ಟಿಯ ತಳವನ್ನು ಗಟ್ಟಿ ಮಾಡಿಕೊಂಡಿದೆ. ಸನ್‌ರೈಸರ್ ಹೈದರಾಬಾದ್‌ ಕೂಡ ಇದೇ ಸ್ಥಿತಿಯಲ್ಲಿದ್ದರೂ ರನ್‌ರೇಟ್‌ನಲ್ಲಿ ತುಸು ಮುಂದಿದೆ.

ಇದು 2023ರ ಸರಣಿಯ ಚೆನ್ನೈ-ಡೆಲ್ಲಿ ನಡುವಿನ ಮೊದಲ ಹಾಗೂ ಏಕೈಕ ಲೀಗ್‌ ಪಂದ್ಯವಾಗಿದೆ. ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯವನ್ನು ಗೆದ್ದ ಹುರುಪಿನಲ್ಲಿವೆ. ಡೆಲ್ಲಿ ತನ್ನದೇ ಅಂಗಳದಲ್ಲಿ ಆರ್‌ಸಿಬಿಯನ್ನು 7 ವಿಕೆಟ್‌ಗಳಿಂದ ಕೆಡವಿದರೆ, ಚೆನ್ನೈ 6 ವಿಕೆಟ್‌ಗಳ ಅಂತರದಿಂದ ಮುಂಬೈಯನ್ನು ಮಣಿಸಿತ್ತು. ಡೆಲ್ಲಿಯನ್ನೂ ಮಣಿಸಿದರೆ ಧೋನಿ ಪಡೆ ಪ್ಲೇ ಆಫ್ಗೆ ಹತ್ತಿರವಾಗಲಿದೆ. ಡೆಲ್ಲಿಯ ಹಾದಿ ಬಹುತೇಕ ಕೊನೆಗೊಳ್ಳಲಿದೆ.

ಹೀಗಾಗಿ ಡೇವಿಡ್‌ ವಾರ್ನರ್‌ ಪಡೆಗೆ ಇದು ಮಾಡು-ಮಡಿ ಪಂದ್ಯ ಮುಂಬೈ ವಿರುದ್ಧ ಕಳೆದ ಶನಿವಾರ ಚೆನ್ನೈಯಲ್ಲಿ ನಡೆದ ಪಂದ್ಯ ಸಣ್ಣ ಮೊತ್ತಕ್ಕೆ ಸಾಕ್ಷಿಯಾಗಿತ್ತು. ಮುಂಬೈ 8 ವಿಕೆಟಿಗೆ 138 ರನ್‌ ಗಳಿಸಿದರೆ, ಚೆನ್ನೈ 4 ವಿಕೆಟಿಗೆ 140 ರನ್‌ ಬಾರಿಸಿ ತನ್ನ 6ನೇ ಜಯಭೇರಿ ಮೊಳಗಿಸಿತ್ತು. ಶ್ರೀಲಂಕಾದ ಮತೀಶ ಪತಿರಣ ಮುಂಬೈಯನ್ನು ಹಿಡಿದಿಡುವಲ್ಲಿ ಭಾರೀ ಯಶಸ್ಸು ಕಂಡಿದ್ದರು. ಲಂಕೆಯ ಮತ್ತೋರ್ವ ಬೌಲರ್‌ ಮಹೀಶ ತೀಕ್ಷಣ ಕೂಡ ಘಾತಕವಾಗಿ ಪರಿಣಮಿಸುತ್ತಿದ್ದಾರೆ. ಜತೆಗೆ ತುಷಾರ್‌ ದೇಶಪಾಂಡೆ, ದೀಪಕ್‌ ಚಹರ್‌, ರವೀಂದ್ರ ಜಡೇಜ ಅವರ ದಾಳಿ ಕೂಡ ಹರಿತವಾಗಿಯೇ ಇದೆ. ಮುಖ್ಯವಾಗಿ, ತವರಿನ ಅಂಗಳದಲ್ಲಿ ಚೆನ್ನೈ ಬೌಲಿಂಗ್‌ ಆಕ್ರಮಣವನ್ನು ಎದುರಿಸಿ ನಿಲ್ಲುವುದು ಸುಲಭವಲ್ಲ. ತುಷಾರ್‌ ದೇಶಪಾಂಡೆ ಅವರಂತೂ ಪವರ್‌ ಪ್ಲೇಯಲ್ಲಿ ಎದುರಾಳಿಗೆ ಸಿಂಹಸ್ವಪ್ನರಾಗುತ್ತ ಬಂದಿದ್ದಾರೆ.

ಟಾಪ್‌ ಆರ್ಡರ್‌ ಯಶಸ್ಸು
ಚೆನ್ನೈ ಬ್ಯಾಟಿಂಗ್‌, ಅದರಲ್ಲೂ ಟಾಪ್‌-ಆರ್ಡರ್‌ ಬ್ಯಾಟರ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ನ್ಯೂಜಿಲ್ಯಾಂಡ್‌ನ‌ ಡೇವನ್‌ ಕಾನ್ವೇ ಅರ್ಧ ಶತಕ ಬಾರಿಸುವುದನ್ನು ಹವ್ಯಾಸವಾಗಿ ಮಾಡಿಕೊಂಡಿದ್ದಾರೆ. ಈಗಾಗಲೇ 457 ರನ್‌ ಇವರ ಖಾತೆಗೆ ಸೇರಿದೆ. ರುತುರಾಜ್‌ ಗಾಯಕ್ವಾಡ್‌ 292, ಅಜಿಂಕ್ಯ ರಹಾನೆ 245 ರನ್‌ ಮಾಡಿ ಚೆನ್ನೈ ಬ್ಯಾಟಿಂಗ್‌ ಸರದಿಗೆ ಬಲ ತುಂಬಿದ್ದಾರೆ. ಬಿಗ್‌ ಹಿಟ್ಟರ್‌ ಶಿವಂ ದುಬೆ ಇದೇ ಮೊದಲ ಸಲ ಐಪಿಎಲ್‌ನಲ್ಲಿ ಮಿಂಚು ಹರಿಸಲಾರಂಭಿಸಿದ್ದು ಚೆನ್ನೈ ಪಾಲಿಗೊಂದು ಪ್ಲಸ್‌ ಪಾಯಿಂಟ್‌. ಅವರು 9 ಪಂದ್ಯಗಳಿಂದ 290 ರನ್‌ ರಾಶಿ ಹಾಕಿದ್ದಾರೆ.

Advertisement

ಆದರೆ ಚೆನ್ನೈ ಕೆಳ ಸರದಿಯ ಬ್ಯಾಟಿಂಗ್‌ ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ಅನುಭವಿ ಅಂಬಾಟಿ ರಾಯುಡು (11 ಪಂದ್ಯ 95 ರನ್‌), ರವೀಂದ್ರ ಜಡೇಜ (11 ಪಂದ್ಯ, 92 ರನ್‌) ಸಂಪೂರ್ಣ ವಿಫ‌ಲರಾಗಿದ್ದಾರೆ. ಧೋನಿ ಕ್ರೀಸ್‌ ಇಳಿಯುವಾಗ ಇನ್ನಿಂಗ್ಸ್‌ ಮುಗಿದಿರುತ್ತದೆ. ಆದರೆ ಈ ಕೊರತೆಯನ್ನು ಅಗ್ರ ಕ್ರಮಾಂಕದ ಬ್ಯಾಟರ್ ಯಶಸ್ವಿಯಾಗಿ ನಿಭಾಯಿಸುತ್ತಿರುವುದು ಚೆನ್ನೈ ತಂಡದ ಹೆಚ್ಚುಗಾರಿಕೆ.

ಅಪರೂಪದ ಯಶಸ್ಸು
ಕೂಟದಲ್ಲೇ ಅತ್ಯಂತ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತ ಬಂದ ಡೆಲ್ಲಿ ಕ್ಯಾಪಿಟಲ್ಸ್‌, ತನ್ನ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಪರೂಪದ ಯಶಸ್ಸು ಕಂಡಿತ್ತು. ಆರಂಭಕಾರ ಫಿಲಿಪ್‌ ಸಾಲ್ಟ್ ಸಿಡಿದು ನಿಂತಿದ್ದರು. ತನ್ನ ಸ್ಫೋಟಕ ಶೈಲಿಗೆ ವಿರುದ್ಧವಾಗಿ ಆಡುತ್ತಿದ್ದ ಡೇವಿಡ್‌ ವಾರ್ನರ್‌ ಕೂಡ ಬಿರುಸು ಪಡೆದಿದ್ದರು. ಮಿಚೆಲ್‌ ಮಾರ್ಷ್‌, ರಿಲೀ ರೋಸ್ಯೂ ಅವರ ಬ್ಯಾಟಿಂಗ್‌ ಕೂಡ ಆಕರ್ಷಕವಾಗಿತ್ತು. ಹೀಗೆ ವಿದೇಶಿ ಕ್ರಿಕೆಟಿಗರ ಕೋಟಾವನ್ನು ಅಗ್ರ ಕ್ರಮಾಂಕದಲ್ಲೇ ಮುಗಿಸಿರುವ ಡೆಲ್ಲಿ ಇದರಲ್ಲಿ ಧಾರಾಳ ಯಶಸ್ಸು ಕಂಡಿತ್ತು. ಚೆನ್ನೈ ವಿರುದ್ಧವೂ ಇದೇ ಮಟ್ಟದ ಪ್ರದರ್ಶನ ನೀಡಿದರಷ್ಟೇ ಡೆಲ್ಲಿಯ 5ನೇ ಗೆಲುವನ್ನು ನಿರೀಕ್ಷಿಸಬಹುದು.

ಡೆಲ್ಲಿಯ ಬೌಲಿಂಗ್‌ ವಿಭಾಗ ಚೆನ್ನೈಗೆ ಹೋಲಿಸಿದರೆ ತೀರಾ ಸಾಮಾನ್ಯ. ಇಶಾಂತ್‌ ಶರ್ಮ, ಖಲೀಲ್‌ ಅಹ್ಮದ್‌, ಮುಕೇಶ್‌ ಕುಮಾರ್‌, ಮಿಚೆಲ್‌ ಮಾರ್ಷ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌ ಅವರೆಲ್ಲ ಹೆಚ್ಚು ಘಾತಕವಾಗಿ ಪರಿಣಮಿಸಬೇಕಿದೆ. ಆರ್‌ಸಿಬಿ ವಿರುದ್ಧ ಇವರಿಗೆ ಉರುಳಿಸಲು ಸಾಧ್ಯವಾದದ್ದು 4 ವಿಕೆಟ್‌ ಮಾತ್ರ ಎಂಬುದನ್ನು ಗಮನಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next