ತಮಿಳುನಾಡು:ತನ್ನನ್ನು ಮದುವೆಯಾಗು ಎಂದು ನಿರಂತರವಾಗಿ ಪೀಡಿಸುತ್ತಿದ್ದ ಮಾಜಿ ಪ್ರಿಯಕರನನ್ನು ಪ್ರಿಯತಮೆ ಹಾಗೂ ಆಕೆಯ ಬಾಯ್ ಫ್ರೆಂಡ್ ಜತೆಗೂಡಿ ಹತ್ಯೆಗೈದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ:
43 ವರ್ಷದ ಸೆಂಥಿಲ್ ಎಂಬಾತ 26 ವರ್ಷದ ಜೆ.ದೇಸಪ್ರಿಯಳನ್ನು ಪ್ರೀತಿಸುತ್ತಿದ್ದ. ನಂತರ ಆಕೆ ಲಾಕ್ ಡೌನ್ ಸಂದರ್ಭದಲ್ಲಿ ಸೆಂಥಿಲ್ ನಿಂದ ದೂರವಾಗಿದ್ದಳು, ಆದರೆ ಸೆಂಥಿಲ್ ತನ್ನ ಮದುವೆಯಾಗು ಎಂದು ಆಕೆ ಮೇಲೆ ಒತ್ತಡ ಹೇರುತ್ತಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಅಸಮಾಧಾನಗೊಂಡ ದೇಸಪ್ರಿಯ ತನ್ನ ಪ್ರಿಯಕರ ಎಸ್.ಅರುಣ್ ಪಾಂಡ್ಯನ್ (27ವರ್ಷ) ಜತೆಗೂಡಿ ಗುರುವಾರ ಕೆಲಾಬಾಕ್ಕಂನಲ್ಲಿರುವ ಖಾಸಗಿ ಕಾಲೇಜಿನ ಹೊರಭಾಗದಲ್ಲಿ ಸೆಂಥಿಲ್ ನನ್ನು ಚೂರಿಯಿಂದ ಇರಿದು ಹತ್ಯೆಗೈದಿದ್ದರು.
Related Articles
ತನ್ನ ಮದುವೆಯಾಗದಿದ್ದರೆ ಇಂಟರ್ನೆಟ್ ನಲ್ಲಿ ನಗ್ನ ಚಿತ್ರಗಳನ್ನು ಅಪ್ ಲೋಡ್ ಮಾಡುವುದಾಗಿ ಸೆಂಥಿಲ್ ಬೆದರಿಕೆಯೊಡ್ಡಿದ್ದ ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ. ಸೆಂಥಿಲ್ ಪೆರಂಬಲೂರಿನ ನಿವಾಸಿಯಾಗಿದ್ದು, ಚೆನ್ನೈನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿದ್ದರು.
ದೇಸಪ್ರಿಯ ತಿರುವಣ್ಣಾಮಲೈ ನಿವಾಸಿಯಾಗಿದ್ದು, ಈಕೆ ಹಳೇ ಮಹಾಬಲಿಪುರಂ ರಸ್ತೆಯ ಕಳವಕ್ಕಂನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಭೌತಶಾಸ್ತ್ರದ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಳು. ದೇಸಪ್ರಿಯಳ ಪ್ರಿಯಕರ ಅರುಣ್ ಪಾಂಡ್ಯಯನ್ ಉಳುಂದುರ್ ಪೆಟ್ ನಿವಾಸಿಯಾಗಿದ್ದು, ಈತ ಕಟ್ಟಾನ್ ಕುಳತ್ತೂರ್ ವಿವಿಯಲ್ಲಿನ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ 1.30ಕ್ಕೆ ದೇಸಪ್ರಿಯ ಸೆಂಥಿಲ್ ಗೆ ಕರೆ ಮಾಡಿ ತನ್ನ ಕಾಲೇಜಿನಲ್ಲಿ ಭೇಟಿಯಾಗುವಂತೆ ತಿಳಿಸಿದ್ದಳು. ಇಬ್ಬರು ಕಾಲೇಜು ಹೊರಭಾಗದಲ್ಲಿ ಮಾತನಾಡುತ್ತಿದ್ದ ವೇಳೆ ಅರುಣ್ ಪಾಂಡ್ಯಯನ್ ಜತೆಗೂಡಿದ್ದ. ಮೂವರ ನಡುವೆ ವಾಕ್ಸಮರ ನಡೆಯುತ್ತಿದ್ದಾಗಲೇ, ದೇಸಪ್ರಿಯ ಮತ್ತು ಅರುಣ್ ಪಾಂಡ್ಯಯನ್ ಸೆಂಥಿಲ್ ನ ಗಂಟಲು ಸೀಳಿ, ಹಲವಾರು ಬಾರಿ ಚೂರಿಯಿಂದ ಇರಿದಿದ್ದರು.
ಈ ಸಂದರ್ಭದಲ್ಲಿ ದೇಸಪ್ರಿಯ ಹಾಗೂ ಪಾಂಡ್ಯಯನ್ ಘಟನ ಸ್ಥಳದಿಂದ ಓಡಿಹೋಗಲು ಯತ್ನಿಸಿದ್ದರು. ಆದರೆ ಜನರು ಇಬ್ಬರನ್ನೂ ಹಿಡಿದು ಪೊಲೀಸರಿಗೊಪ್ಪಿಸಿದ್ದರು ಎಂದು ವರದಿ ತಿಳಿಸಿದೆ. ಸೆಂಥಿಲ್ ವಿವಾಹವಾಗಿದ್ದು, ಆತನ ಪತ್ನಿ ತವರಿನಲ್ಲಿದ್ದಳು. ಆದರೆ ಈತ ತನಗೆ ಪದೇ, ಪದೇ ವಿವಾಹವಾಗುವಂತೆ ಕಿರುಕುಳ ನೀಡುತ್ತಿದ್ದ ಎಂದು ದೇಸಪ್ರಿಯ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ತಾನು ವಿವಾಹವಾಗಿ ಏಳು ವರ್ಷವಾಯ್ತು ಆದರೆ ಮಕ್ಕಳಾಗಿಲ್ಲ. ಹೇಗಾದರೂ ಮಾಡಿ ಪತ್ನಿಯ ಮನವೊಲಿಸಿ, ಎರಡನೇ ವಿವಾಹವಾಗುವುದಾಗಿ ಸೆಂಥಿಲ್ ತನಗೆ ತಿಳಿಸಿದ್ದರು ಎಂದು ದೇಶಪ್ರಿಯ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾಳೆ.