ಚೆನ್ನೈ: ಐಸಿಸ್‌ನೊಂದಿಗೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ನಗೂರ್ ಮೀರನ್ ಬಂಧಿತ ಆರೋಪಿ. ಮತ್ತಿಬ್ಬರನ್ನು ಚೆನ್ನೈ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಚೆಕ್‌ಪಾಯಿಂಟ್ ಒಂದರಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ, ಈ ಮೂವರು ಆರೋಪಿಗಳು ಪೊಲೀಸರನ್ನು ಕಾಣುತ್ತಿದ್ದಂತೆ ಸ್ಥಳದಿಂದ ಪರಾರಿಯಾದರು.
ಅನುಮಾನಗೊಂಡ ಪೊಲೀಸರು ಅವರನ್ನು ಬೆನ್ನಟ್ಟಿ ಪತ್ತೆಹಚ್ಚಿದರು. ಈ ವೇಳೆ ಅವರ ಬ್ಯಾಗ್‌ನಲ್ಲಿ ಐಸಿಸ್‌ಗೆ ಸಂಬಂಧಿಸಿದ ಕರಪತ್ರಗಳು, ಬಾಂಬ್ ಹೇಗೆ ತಯಾರಿಸಬೇಕೆಂಬ ಸಂಪೂರ್ಣ ಮಾಹಿತಿ ಇರುವ ಪುಸ್ತಕ ಸಿಕ್ಕಿತು.
ಯೂಟೂಬ್ ನೋಡಿಕೊಂಡು ರಾಸಾಯನಿಕಗಳು ಬಳಸಿ ಬಾಂಬ್ ತಯಾರಿಸುವ ಬಗ್ಗೆ ಅವರು ನೋಟ್ಸ್ ಮಾಡಿಕೊಂಡಿದ್ದರು. ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಎನ್‌ಐಎ ಅಧಿಕಾರಿಗಳು, ಶಂಕಿತ ಐಸಿಸ್ ಉಗ್ರ ಶಕುಲ್ ಹಮ್ಮದ್‌ನನ್ನು ಬಂಧಿಸಿದ್ದರು. ಈತ ಐಸಿಸ್ ಪರವಾಗಿ ನಿಧಿ ಸಂಗ್ರಹ ಮಾಡುತ್ತಿದ್ದ. ಅಲ್ಲದೇ ತಮಿಳುನಾಡಿನ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಲು ಯೋಜಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿತ್ತು.