ಚೆನ್ನೈ: ಜ್ಯುವೆಲ್ಲರಿ ಅಂಗಡಿಯ ಕೆಲಸಗಾರನೊಬ್ಬ ತನ್ನ ಸ್ನೇಹಿತರಿಗಾಗಿ ಆಯೋಜಿಸಿದ್ದ ಈದ್ ಪಾರ್ಟಿಯಲ್ಲಿ ಭಾಗವಹಿಸಿದ್ದ 32 ವರ್ಷದ ವ್ಯಕ್ತಿಯೊಬ್ಬ 1.45 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ನುಂಗಿದ್ದಾನೆ.
ಮಾಧ್ಯಮಗಳ ವರದಿಯ ಪ್ರಕಾರ, ಪಾರ್ಟಿಯಲ್ಲಿ ಆಹ್ವಾನಿತರೊಬ್ಬರ ಗೆಳೆಯ ರಾಹುಲ್ (ಹೆಸರು ಬದಲಾಯಿಸಲಾಗಿದೆ) ರುಚಿಕರವಾದ ಔತಣವನ್ನು ಸವಿದು ಕೆಲವು ಪಾನೀಯಗಳನ್ನು ಸಹ ಕುಡಿದಿದ್ದು, ನಶೆಯಲ್ಲಿದ್ದ ಆತ ಬಳಿಕ ಆತಿಥೇಯರ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದ.
ಪಾರ್ಟಿ ಮುಗಿದ ನಂತರ ಆತಿಥೇಯರು ಮನೆಯಲ್ಲಿ ಚಿನ್ನದ ಸರ, ವಜ್ರದ ಪೆಂಡೆಂಟ್ ಮತ್ತು ವಜ್ರದ ನೆಕ್ಲೇಸ್ ಕಾಣೆಯಾಗಿರುವುದನ್ನು ಗಮನಿಸಿದ್ದು, ವಿಚಾರಿಸಿದಾಗ ರಾಹುಲ್ ನಿರುದ್ಯೋಗಿಯಾಗಿದ್ದು, ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಚಿನ್ನಾಭರಣ ನುಂಗಿದ್ದನ್ನು ರಾಹುಲ್ ಒಪ್ಪಿಕೊಂಡಿದ್ದು, ಎಕ್ಸ್ ರೇ ಸ್ಕ್ಯಾನ್ ನಲ್ಲೂ ಅದು ದೃಢಪಟ್ಟಿದೆ. ವೈದ್ಯರು ಅವನಿಗೆ ಎನಿಮಾ ಮತ್ತು ಭಾರೀ ಪ್ರಮಾಣದ ಭೇದಿಮಾಡಿಸುವ ಔಷಧಗಳನ್ನು ನೀಡಿ ಆಭರಣಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿಯ ಪ್ರಕಾರ, ತಮ್ಮ ಆಭರಣಗಳನ್ನು ಮರಳಿ ಪಡೆದ ನಂತರ ದೂರನ್ನು ಹಿಂಪಡೆದಿದ್ದಾರೆ.