ಚೆನ್ನೈ:ಮದ್ರಾಸ್ ನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯ ಆವರಣದಲ್ಲಿ ಉಪನ್ಯಾಸಕರ ಸುಟ್ಟ ದೇಹ ಗುರುವಾರ(ಜುಲೈ 01) ಪತ್ತೆಯಾಗಿದೆ. ಹಾಕಿ ಮೈದಾನದ ಸಮೀಪ ಶವ ಪತ್ತೆಯಾಗಿದ್ದು, ಐಐಟಿಯ ಕ್ರೀಡಾ ಅಧಿಕಾರಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮಂಗಳಪದವು ಬಳಿ ಕಾಲೇಜು ಬಸ್-ಬೈಕ್ ನಡುವೆ ಭೀಕರ ಅಪಘಾತ:ನಾಲ್ವರಿಗೆ ಗಾಯ, ತಪ್ಪಿದ ಭಾರೀ ಅನಾಹುತ
ಮೃತ ವ್ಯಕ್ತಿಯನ್ನು ಉನ್ನಿಕೃಷ್ಣನ್ ನಾಯರ್ (30ವರ್ಷ) ಎಂದು ಗುರುತಿಸಲಾಗಿದೆ. ಅವರು 2021ರ ಏಪ್ರಿಲ್ ನಲ್ಲಿ ಬಿ.ಟೆಕ್ ಪೂರ್ಣಗೊಳಿಸಿದ ನಂತರ ಮದ್ರಾಸ್ ಐಐಟಿಯಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಮತ್ತು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿ ವಿವರಿಸಿದೆ.
ನಾಯರ್ ಗುರುವಾರ ಬೆಳಗ್ಗೆ ಕೇರಳದಿಂದ ಕ್ಯಾಂಪಸ್ ಗೆ ಮರಳಿದ್ದರು ಎಂದು ವರದಿಯಾಗಿದೆ. ಕೆಲವು ವಿದ್ಯಾರ್ಥಿಗಳು ಕ್ರೀಡಾಭ್ಯಾಸ ನಡೆಸಲು ಹಾಕಿ ಮೈದಾನಕ್ಕೆ ಬಂದ ಸಂದರ್ಭದಲ್ಲಿ ಸುಟ್ಟುಹೋದ ಶವ ಪತ್ತೆಯಾಗಿತ್ತು ಎಂದು ವರದಿ ತಿಳಿಸಿದೆ. ನಂತರ ವಿದ್ಯಾರ್ಥಿಗಳು ಕ್ರೀಡಾ ಅಧಿಕಾರಿ ಗಮನಕ್ಕೆ ತಂದಿರುವುದಾಗಿ ವರದಿ ಹೇಳಿದೆ.
ಕೊಟ್ಟೂರ್ಪುರಂ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನಾಯರ್ ವಾಸವಾಗಿದ್ದ ರೂಂನಲ್ಲಿ 11 ಪುಟಗಳ ಸೂಸೈಡ್ ನೋಟ್ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.