Advertisement

ನೀರಿನ ಸಮಸ್ಯೆ ಇಲ್ಲ, ಆದರೂ ತೊಂದರೆ ತಪ್ಪಿಲ್ಲ !

11:35 AM Mar 12, 2020 | Naveen |

ಚನ್ನಗಿರಿ: ಅರೆಮಲೆನಾಡು ಪ್ರದೇಶವಾದ ಚನ್ನಗಿರಿ ತಾಲೂಕಿನಲ್ಲಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಬೇಸಿಗೆಕಾಲ ಆರಂಭವಾಗಿದ್ದು ನೀರಿನ ಸಮಸ್ಯೆ ಸದ್ಯಕ್ಕೆ ಇಲ್ಲ. ಆದರೆ ತಾಲೂಕಿನಲ್ಲಿ ಶುದ್ಧ ನೀರಿನ ಸಮಸ್ಯೆ ಜೋರಾಗಿದೆ. ಸರ್ಕಾರ ಕುಡಿಯುವ ನೀರಿಗಾಗಿ ನೂರಾರು ಕೋಟಿ ಖರ್ಚು ಮಾಡಿದೆಯಾದರೂ ಅಶುದ್ಧ ನೀರು ಸರಬರಾಜಿನಿಂದ ತಾಲೂಕಿನಲ್ಲಿ ಸಾಂಕ್ರಮಿಕ ರೋಗ ಹರಡುವ ಭೀತಿ ಎದುರಾಗಿದೆ.

Advertisement

56ಕೋಟಿ ರೂ. ವೆಚ್ಚದಲ್ಲಿ ಸೂಳೆಕೆರೆಯಿಂದ ಚನ್ನಗಿರಿ ಪಟ್ಟಣ ಸೇರಿ ತಾಲೂಕಿನ 70ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಕೈಗೊಳ್ಳಲಾಗಿದೆ. ಆದರೆ ಸೂಳೆಕೆರೆಯಿಂದ ಮಣ್ಣು ಮಿಶ್ರಿತ ನೀರು ಸರಬರಾಜು ಆಗುತ್ತಿದ್ದು, ಜನ ಆ ನೀರನ್ನು ಬಳಕೆಗೆ ಮಾತ್ರ ಉಪಯೋಗಿಸಿ, ಕುಡಿಯುವ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಮೊರೆಹೋಗಿದ್ದಾರೆ. ಇದರಿಂದ ಸೂಳೆಕೆರೆ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಂತಾಗಿದ್ದು ಸದ್ಯ ಶುದ್ಧ ನೀರಿನ ಘಟಕಗಳು ಜನತೆಗೆ ವರದಾನವಾಗಿವೆ.

ಅಶುದ್ಧ ನೀರು?: ಸೂಳೆಕೆರೆಯಿಂದ ಚನ್ನಗಿರಿ ನಗರಕ್ಕೆ ಸರಬರಾಜು ಆಗುತ್ತಿರುವ ಕುಡಿಯುವ ನೀರನ್ನು ಶುದ್ಧಗೊಳಿಸದೇ ಹಾಗೆಯೇ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ದಿನನಿತ್ಯ ಜನತೆಯಿಂದ ಕೇಳಿಬರುತ್ತಿದೆ. ಆ ನೀರು ಶೇಖರಣೆ ಮಾಡಿಟ್ಟುಕೊಂಡರೆ ತಳದಲ್ಲಿ ಏನಿಲ್ಲ ಎಂದರೂ ಅರ್ಧ ಇಂಚಿನಷ್ಟು ಮಣ್ಣು ಕುಳಿತಿರುತ್ತದೆ. ಇಂತಹ ನೀರನ್ನು ಕುಡಿದರೆ ಕಾಲರಾ, ಮಲೇರಿಯಾ, ಡೆಂಘೀ, ಚಿಕೂನ್‌ ಗೂನ್ಯದಂತಹ ಸಾಂಕ್ರಾಮಿಕ ರೋಗ ತಗುಲಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ನಿರ್ಮಾಣ ಆಗಲಿದೆ. ತಕ್ಷಣ ಸೂಳೆಕೆರೆ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಬೇಕು ಎಂಬುದು ತಾಲೂಕಿನ ಜನತೆಯ ಆಗ್ರಹವಾಗಿದೆ.

ಸೂಳೆಕೆರೆಯಿಂದ ನೀರು ಸರಬರಾಜು ಆಗುತ್ತಿದ್ದರೂ ಜನ ಶುದ್ಧ ನೀರು ಘಟಕಗಳಿಂದ ಹಣಪಾವತಿಸಿ ನೀರು ಪಡೆಯುವಂತಾಗಿದೆ. ಇದರಿಂದ ಬಡವರು, ನಿರ್ಗತಿಕರು ನೀರಿಗಾಗಿ ಪರದಾಡುವಂತಾಗಿದ್ದು, ಕೆಲವರು ಕಲುಷಿತ ನೀರನ್ನು ಕುಡಿದು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಪಟ್ಟಣಕ್ಕಿಲ್ಲ ಕುಡಿಯುವ ನೀರಿನ ಸಮಸ್ಯೆ: 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿರುವ ಚನ್ನಗಿರಿ ಪಟ್ಟಣದಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಈಗಾಗಲೇ 10 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಬೋರ್‌ವೆಲ್‌ಗ‌ಳಿಂದ ಮಿನಿ ಟ್ಯಾಂಕ್‌ಗಳಿಗೂ ನೀರು ಸರಬರಾಜು ಆಗುತ್ತಿದೆ. ಹಿರೇಮಳ್ಳಿಯಲ್ಲಿ 2 ತಿಂಗಳಿಗೆ ಆಗುವಷ್ಟು ನೀರನ್ನು ಶೇಖರಿಸಲಾಗಿದೆ. ಹಾಗೂ ಸದ್ಯಕ್ಕೆ ಸೂಳೆಕೆರೆಯಲ್ಲಿರುವ ನೀರು ಜನತೆಗೆ ಸರಬರಾಜು ಆಗುತ್ತಿದೆ.

Advertisement

ಕ್ರಿಯಾ ಯೋಜನೆಗೆ ಸಿದ್ಧ: ತಾಲೂಕಿನಲ್ಲಿ ಸಮಸ್ಯೆ ಎದುರಾಗಬಹುದಾದ 27 ಗ್ರಾಮಗಳ ಪಟ್ಟಿ ಮಾಡಿದ್ದು, ಮಾಯಕೊಂಡ ವಿಧಾನಸಭಾ ಕ್ಷೇತ್ರದ 10 ಗ್ರಾಮಗಳು ಮತ್ತು ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ 17 ಗ್ರಾಮಗಳು ಈ ಪಟ್ಟಿಯಲ್ಲಿವೆ. ಸಮಸ್ಯೆಯುಂಟಾದರೆ ಹೇಗೆ ನಿಭಾಯಿಸಬೇಕೆಂದು ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಇಲ್ಲದಿದ್ದರೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸದ್ಯಕ್ಕೆ ತಾಲೂಕಿನಲ್ಲಿ ಎಲ್ಲೂ ಕೂಡ ಕುಡಿಯುವ ನೀರಿನ ಸಮಸ್ಯೆ ಇಲ್ಲ. ನೀರಿನ ಸಮಸ್ಯೆ ಆಗಬಹುದಾದಂತಹ ಗ್ರಾಮಗಳ ಪಟ್ಟಿ ಮಾಡಲಾಗಿದೆ ಅಂತಹ ಗ್ರಾಮಗಳಿಗೆ ನೀರು ಸರಬರಾಜು ಮಾಡುವುದಕ್ಕೆ ಮುಂಜಾಗ್ರತೆಯಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಕುಡಿಯುವ ನೀರಿಗೆ ತೊಂದರೆ ಆಗದಂತೆ ನಿಗಾವಹಿಸಲಾಗುವುದು.
ಹೂವಯ್ಯ ಶೆಟ್ಟಿ, ಎಇಇ,
ಗ್ರಾಮೀಣ ಕುಡಿಯುವ ನೀರು ಮತ್ತು
ನೈರ್ಮಲ್ಯ ಇಲಾಖೆ ಅಧಿ ಕಾರಿ, ಚನ್ನಗಿರಿ

ಪುರಸಭೆಯಿಂದ ಮಣ್ಣು ಮಿಶ್ರಿತ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ನೀರು ಕುಡಿಯುವುದಕ್ಕೆ ಯೋಗ್ಯವಿಲ್ಲ. ಜನತೆ ಹಣ ಪಾವತಿಸಿ ಶುದ್ಧಕುಡಿಯುವ ನೀರಿನ ಘಟಕಗಳಿಂದ ನೀರು ತಂದು ಕುಡಿಯುತ್ತಿದ್ದಾರೆ. ಶುದ್ಧ ನೀರು ಕೊಡದಿದ್ದರೆ ಟಿಪ್ಪು ವೇದಿ ಕೆಯಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಮಹ್ಮದ್‌ ನವಾಜ್‌,
ಸ್ಥಳೀಯ ನಿವಾಸಿ

ಪಟ್ಟಣದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಿಲ್ಲ, ಹಿರೇಮಳ್ಳಿಯಲ್ಲಿ ಚಾನಲ್‌ ನೀರಿನ ಸಂಗ್ರಹವಿದೆ. ಸೂಳೆಕೆರೆಯಲ್ಲಿ ಸಾಕಷ್ಟು ನೀರಿದೆ. ಬೋರ್‌ವೆಲ್‌ಗ‌ಳು ಕಾರ್ಯನಿರ್ವಹಿಸುತ್ತಿವೆ. ಈ ಬಾರಿ ಬೇಸಿಗೆಯಲ್ಲಿ ಅಷ್ಟೊಂದು ಸಮಸ್ಯೆ ಆಗುವುದಿಲ್ಲ.
ಬಸವರಾಜ್‌,
ಪುರಸಭೆ ಮುಖ್ಯಾಧಿಕಾರಿ, ಚನ್ನಗಿರಿ.

„ಶಶೀಂದ್ರ ಸಿ.ಎಸ್‌. ಚನ್ನಗಿರಿ

Advertisement

Udayavani is now on Telegram. Click here to join our channel and stay updated with the latest news.

Next