ಎರಡು ತಿಂಗಳ ಹಿಂದಷ್ಟೇ ಬಿಡುಗಡೆಯಾದ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ನಿಮಗೆ ನೆನಪಿರಬಹುದು. ತಬಲನಾಣಿ, ಚಂದನ್ ಆಚಾರ್, ಅಪೂರ್ವ, ಸಂಜನಾ ಆನಂದ್ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಕೌಟುಂಬಿಕ ಕಥಾಹಂದರ ಹೊಂದಿದ್ದ ಈ ಚಿತ್ರ ಇದೀಗ ಸದ್ದಿಲ್ಲದೆ 63 ದಿನಗಳ ಯಶಸ್ವಿ ಪ್ರದರ್ಶನವನ್ನು ಪೂರೈಸಿದೆ. ಇದೇ ವೇಳೆ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ, ಇತ್ತೀಚೆಗೆ ಸಮಾರಂಭವನ್ನು ಆಯೋಜಿಸಿತ್ತು.
ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ, ಚಿತ್ರದ ಯಶಸ್ಸಿಗೆ ಕಾರಣರಾದ ಕಲಾವಿದರು ಮತ್ತು ತಂತ್ರಜ್ಞರನ್ನು ಅಭಿನಂದಿಸಲಾಯಿತು. ನಟ ನೀನಾಸಂ ಸತೀಶ್, ನಿರ್ಮಾಪಕ ಸುಪ್ರೀತ್, ನಿರ್ದೇಶಕ ಬಹದ್ದೂರ್ ಚೇತನ್, ನಿರ್ದೇಶಕ ಮಹೇಶ್ ಕುಮಾರ್, ಗಾಯಕ ನವೀನ್ ಸಜ್ಜು ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಚಿತ್ರಕ್ಕಾಗಿ ದುಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಇದೇ ವೇಳೆ ಮಾತನಾಡಿದ ನಟ ನೀನಾಸಂ ಸತೀಶ್, “ಕಡಿಮೆ ಬಜೆಟ್‌ನಲ್ಲಿ ಒಳ್ಳೆಯ ಸಿನಿಮಾ ಮಾಡಿ ಗೆಲ್ಲಿಸುವುದು ಕಷ್ಟ. ಅಂತಹ ಕೆಲಸವನ್ನು ಈ ತಂಡ ಮಾಡಿದೆ. ಒಂದು ಸಿನಿಮಾಗೆ ಬೇಕಿರುವುದು ಒಳ್ಳೆಯ ಕಥೆ. ಅದಕ್ಕೆ ತಕ್ಕಂತೆ ಜೀವ ತುಂಬುವ ಕಲಾವಿದರು. ಈ ಚಿತ್ರದಲ್ಲಿ ಅದೆಲ್ಲವೂ ಒಟ್ಟಾಗಿರುವುದರಿಂದ ಚಿತ್ರ ಗೆದ್ದಿದೆ. ಚಿತ್ರದ ಕಲಾವಿದರು, ತಂತ್ರಜ್ಞರು ಒಟ್ಟಾಗಿ ಎಫರ್ಟ್ ಹಾಕಿ ಚಿತ್ರವನ್ನು ಗೆಲ್ಲಿಸಿದ್ದಾರೆ’ ಎಂದರು.
ನಿರ್ದೇಶಕ ಚೇತನ್ ಕುಮಾರ್ ಮಾತನಾಡಿ, “ಒಬ್ಬ ನಿರ್ದೇಶಕನಿಗೆ ತನ್ನ ಪ್ರತಿ ಚಿತ್ರವೂ ಸವಾಲಾಗಿರುತ್ತದೆ. ಆ ಸವಾಲುಗಳನ್ನು ಗೆದ್ದು ನಿರ್ದೇಶಕ ಕುಮಾರ್ ತಮ್ಮ ನಿರ್ಮಾಪಕರನ್ನು ಸೇಫ್ ಮಾಡಿದ್ದಾರೆ’ ಎಂದರು. ಇದೇ ವೇಳೆ ಮಾತನಾಡಿದ ನಟ ತಬಲ ನಾಣಿ, ನಿರ್ಮಾಪಕರ ಮೊದಲ ಚಿತ್ರ “ಸಂಯುಕ್ತ-2’ನಲ್ಲಿ ನಾನು ಅಭಿನಯಿಸಿದ್ದೆ. ನಿರ್ದೇಶಕ ಕುಮಾರ್ ಈ ಕಥೆ ಹೇಳಿದಾಗ ತುಂಬಾ ಇಷ್ಟವಾಗಿ ಪಾತ್ರಕ್ಕೆ ಒಪ್ಪಿದೆ. ನಿರ್ಮಾಪಕರು ಕೊಟ್ಟ ಬಜೆಟ್‌ನಲ್ಲೇ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಅಭಿನಯಿಸಿದ ಎಲ್ಲರಿಗೂ ಒಳ್ಳೊಳ್ಳೆ ಅವಕಾಶಗಳು ಸಿಗುತ್ತಿವೆ’ ಎಂದು ಹೇಳಿದರು.
ನಾಯಕಿ ಸಂಜನಾ ಮಾತನಾಡಿ, “ಒಂದು ಚಿತ್ರ ಯಶಸ್ವಿಯಾಗಿ 63 ದಿನ ಪೂರೈಸಿದೆ ಎಂದರೆ ಅದು ತಮಾಷೆಯ ಮಾತಲ್ಲ. ಅದರಲ್ಲೂ ನನ್ನ ಮೊದಲ ಚಿತ್ರಕ್ಕೆ ಇಷ್ಟೊಂದು ಬಿಗ್ ರೆಸ್ಪಾನ್ಸ್ ಸಿಗುತ್ತಿರುವುದು ಖುಷಿಯ ವಿಚಾರ. ಚಿತ್ರತಂಡದಿಂದ ಸಿಕ್ಕ ಪ್ರೋತ್ಸಾಹ, ಸಹಕಾರದಿಂದ ಇದು ಸಾಧ್ಯವಾಯಿತು’ ಎಂದರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಿರ್ಮಾಪಕ ಡಿ.ಎಸ್ ಮಂಜುನಾಥ್, ನಿರ್ದೇಶಕ ಕುಮಾರ್, ವಿತರಕ ವಿಜಯ್‌ಕುಮಾರ್ ಸೇರಿದಂತೆ ಹಲವರು ಚಿತ್ರದ ಬಗ್ಗೆ ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಂಡರು.