ಮಂಡ್ಯ: ಶ್ರೀ ಚೆಲುವನಾರಾಯಣನ ನೆಲೆ ಬೀಡಾಗಿರುವ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಜೆಡಿಎಸ್ ಹಾಗೂ ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಬಿಜೆಪಿ ಪಡೆಯುವ ಮತಗಳ ಮೇಲೆ ಸೋಲು-ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿವೆ.
ಕಳೆದ 2018ರ ಚುನಾವಣೆಯಲ್ಲಿ ದಿ. ಕೆ.ಎಸ್.ಪುಟ್ಟಣ್ಣಯ್ಯ ನಿಧನದ ಅನುಕಂಪದ ಅಲೆಯಲ್ಲೂ ದರ್ಶನ್‌ಪುಟ್ಟಣ್ಣಯ್ಯ ಪರಾ ಭವಗೊಂಡಿದ್ದರು. ಆದರೆ ಈ ಬಾರಿ ಗೆಲ್ಲಲೇಬೇಕು ಎಂಬ ನಿಟ್ಟಿನಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಶಾಸಕ ಸಿ.ಎಸ್. ಪುಟ್ಟರಾಜು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕವೇ ಮತ್ತೂಮ್ಮೆ ಗೆಲುವಿನ ನಗೆ ಬೀರಲು ಸಜ್ಜಾಗಿದ್ದಾರೆ.
ಅಭಿವೃದ್ಧಿಯೇ ಪುಟ್ಟರಾಜುಗೆ ಭರವಸೆ: 5 ವರ್ಷಗಳಲ್ಲಿ ಮೇಲುಕೋಟೆ ನೀರಾವರಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದಿ ದ್ದಾರೆ. 12 ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳ ನೀರು ತುಂಬಿಸಿದ್ದಾರೆ. ಅಲ್ಲದೆ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿಗೆ ಹೆಚ್ಚು ಮಹತ್ವ ನೀಡಿರುವುದು ಶಾಸಕ ಪುಟ್ಟರಾಜುಗೆ ಚುನಾವಣೆಯಲ್ಲಿ ಶ್ರೀರಕ್ಷೆ ಯಾಗಿದೆ. ಇದರ ಆಧಾರದ ಮೇಲೆಯೇ ಕ್ಷೇತ್ರದ ಜನರ ಬಳಿ ಹೋಗು ತ್ತಿದ್ದಾರೆ. ಅಲ್ಲದೆ ಕೊರೊನಾ ವೇಳೆ ಮಾಡಿದ ಕೆಲಸಗಳನ್ನೂ ಪ್ರಸ್ತಾವಿಸಿ ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಗೆಲುವಿಗಾಗಿ ದರ್ಶನ್ ಕಸರತ್ತು: ದರ್ಶನ್‌ಪುಟ್ಟಣ್ಣಯ್ಯಗೆ ರೈತಸಂಘ, ಕಾಂಗ್ರೆಸ್ ಹಾಗೂ ಸುಮ ಲತಾ ಬೆಂಬಲವೂ ಸಿಕ್ಕಿದೆ. ಇದರ ಜತೆಗೆ ತಂದೆಯ ವರ್ಚಸ್ಸು, ಕಳೆದ ಬಾರಿಯ ಸೋಲಿನ ಅನುಕಂಪ ಈ ಬಾರಿ ಕೈಹಿಡಿಯಬಹುದು ಎಂಬ ಭರವಸೆ ಯಲ್ಲಿದ್ದಾರೆ. ಆದರೆ ಕಳೆದ ಬಾರಿ ಸೋತ ಅನಂತರ ಅಮೆರಿಕ ಸೇರಿದ ದರ್ಶನ್‌ಪುಟ್ಟಣ್ಣಯ್ಯ ಕಳೆದ ಡಿಸೆಂಬರ್‌ನಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದರು. ಅಲ್ಲದೆ ಅಮೆರಿಕದಲ್ಲಿರುವ ಆಸ್ತಿಗಳನ್ನು ಮಾರಾಟ ಮಾಡಿದ್ದೇನೆ ಎಂದು ಹೇಳಿದ್ದ ದರ್ಶನ್, ಚುನಾವಣೆ ಅಫಿದವಿತ್ ಅದಕ್ಕೆ ತದ್ವಿರುದ್ಧವಾಗಿ ಸಲ್ಲಿಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿರುವುದು ಮೈನಸ್ ಪಾಯಿಂಟ್ ಆಗಿದೆ. ಕಾಂಗ್ರೆಸ್, ಸುಮಲತಾ ಬೆಂಬಲಿಸುತ್ತಿರುವುದು ಪ್ಲಸ್ ಪಾಯಿಂಟ್ ಆಗಿದೆ.
ಮೂವರು ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಇದರಿಂದ ಒಕ್ಕಲಿಗ ಮತಗಳು ಸ್ವಲ್ಪ ಚದುರುವ ಸಾಧ್ಯತೆ ಇದೆ. ಕೆಲವು ಲಿಂಗಾಯತ ಮತಗಳು ಬಿಜೆಪಿಗೆ ಅನುಕೂಲವಾದರೆ ಕಾಂಗ್ರೆಸ್, ರೈತಸಂಘ ಮತಗಳು ದರ್ಶನ್ ಪುಟ್ಟಣ್ಣಯ್ಯಗೆ ಸಿಗಬಹುದು.
ಬಿಜೆಪಿ ಬಲ ಹೆಚ್ಚಿಸಿದ ಇಂದ್ರೇಶ್: ಇಲ್ಲಿ ಬಿಜೆಪಿ ಬಲ ಹೆಚ್ಚಲು ಡಾ| ಎನ್.ಎಸ್.ಇಂದ್ರೇಶ್ ಕಾರಣ. 3 ವರ್ಷಗಳ ಹಿಂದೆ ಕ್ಷೇತ್ರಕ್ಕೆ ಆಗಮಿಸಿದಇಂದ್ರೇಶ್ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಗಮನಸೆಳೆದಿದ್ದಾರೆ. ಇಲ್ಲಿ ಮೋದಿ ಅಲೆ ಮ್ಯಾಜಿಕ್ ಮಾಡಬೇಕಾಗಿದೆ. ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ್ದರೂ ಇಲ್ಲಿ ದರ್ಶನ್ ಬೆಂಬಲಿಸಿರುವುದು ಇಂದ್ರೇಶ್‌ಗೆ ಹಿನ್ನಡೆಯಾಗಿದೆ.
~ ಎಚ್.ಶಿವರಾಜು