ಮನುಷ್ಯ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ನಿರಂತರವಾಗಿ ನಡೆದುಕೊಂಡು ಬಂದಿದೆ. ಇದಕ್ಕೆ ಎರಡು ಪ್ರತ್ಯೇಕ ಘಟನೆಗಳು ಸಾಕ್ಷಿಯಾಗಿದ್ದು, ನಾಡಿಗೆ ಬಂದ ಚಿರತೆಯೊಂದನ್ನು ರೊಚ್ಚಿಗೆದ್ದ ಗ್ರಾಮಸ್ಥರು ಹೊಡೆದುರುಳಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದ್ದರೆ, ಚಿರತೆಯೊಂದು ದಾಳಿ ನಡೆಸಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕೋಲಾರದ ಟೇಕಲ್‌ನಲ್ಲಿ ನಡೆದಿದೆ.
ಹರಪನಹಳ್ಳಿ: ಸೆರೆ ಹಿಡಿವ ಕಾರ್ಯಚರಣೆ ವೇಳೆ, ಚಿರತೆ ದಾಳಿಯಿಂದ ರೊಚ್ಚಗೆದ್ದ ಗ್ರಾಮಸ್ಥರು ಚಿರತೆಯನ್ನೇ ಹೊಡೆದು ಕೊಂದ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಚಿರತೆ ದಾಳಿಯಿಂದ ನಂದಿಬೇವೂರು ಗ್ರಾಮದ ಸಿದ್ದೇಶ (35), ಹುಚ್ಚವ್ವಹಳ್ಳಿ ಮಲ್ಲೇಶ್ (34) ಶೇಕಾವಲಿ (34), ನಾಗೇಶಪ್ಪ (30) ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನಂದಿಬೇವೂರು ಗ್ರಾಮದ ಚಿಗಟೇರಿ ಬಸಪ್ಪ ಎಂಬುವವರ ಕನಕಾಂಬರ ಹೂವಿನ ತೋಟದಲ್ಲಿ ಕೂಲಿಕಾರರು ಹೂವನ್ನು ಬಿಡಿಸುವಾಗ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಇದರಿಂದ ಭಯಭೀತರಾದ ಗ್ರಾಮಸ್ಥರು ತಕ್ಷನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಈ ವೇಳೆ ಚಿರತೆ ಪೊದೆಯಲ್ಲಿ ಅವಿತುಕೊಂಡಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ತೋಟದ ಸುತ್ತ ಬಲೆ ಹಾಕಿದ್ದಾರೆ. ಇದಾದ ಸ್ವಲ್ಪ ಸಮಯದಲ್ಲಿ ತೋಟದ ಸುತ್ತ ಜಮಾಯಿಸಿದ ಗ್ರಾಮಸ್ಥರ ಮೇಲೆ ಚಿರತೆ ದಾಳಿ ನಡೆಸಿದೆ. ದಾಳಿಯಿಂದ ಹಲವಾರು ಜನ ಗಾಯಗೊಂಡ ಪರಿಣಾಮ ರೊಚ್ಚಿಗೆದ್ದ ಗ್ರಾಮಸ್ಥರು ದೊಣ್ಣೆ ಹಿಡಿದು ಚಿರತೆ ಮೇಲೆ ಪ್ರತಿದಾಳಿ ನಡೆಸಿದ್ದು ಚಿರತೆ ಮೃತಪಟ್ಟಿದೆ.
ಚಿರತೆ ಶವವನ್ನು ವಶಕ್ಕೆ ಪಡೆದ ವಲಯ ಅರಣ್ಯಾಧಿಕಾರಿ ಅಬ್ದುಲ್ ಬಷೀರ್, ಕಣವಿಹಳ್ಳಿ ಬಳಿಯ ಅರಣ್ಯ ಪ್ರವಾಸಿ ಮಂದಿರದ ಬಳಿ ಚಿರತೆ ಅಂತ್ಯಸಂಸ್ಕಾರ ನಡೆಸಿದ್ದಾರೆ.
ಸಾಮಾನ್ಯವಾಗಿ ಚಿರತೆಯು ಮನುಷ್ಯನ ಮೇಲೆ ಆಕ್ರಮಣ ಮಾಡುವುದಿಲ್ಲ. ಇದೊಂದು ಆಕಸ್ಮಿಕ ಘಟನೆ ಆಗಿರಬಹುದು. ವ್ಯಕ್ತಿ ಮರದ ಕೆಳಗಡೆ ಮಲಗಿರುವಾಗ ಅಥವಾ ಮೂತ್ರವಿಸರ್ಜನೆ ಮಾಡುವಾಗ ತನ್ನಂತೆಯೇ ಒಂದು ಪ್ರಾಣಿ ಎಂದು ತಿಳಿದು ಚಿರತೆ ಇಲ್ಲಿ ಆಕ್ರಮಣ ಮಾಡಿರುವ ಸಾಧ್ಯತೆ ಇದೆ. ಸಂಜೆ ಹೊತ್ತು ಕಾಡಿನಲ್ಲಿ ಓಡಾಡುವುದನ್ನು ಕೆಲದಿನಗಳ ಕಾಲ ಕಡಿಮೆ ಮಾಡಬೇಕು.
– ಸಂಜಯ ಗುಬ್ಬಿ, ವನ್ಯಜೀವಿ ತಜ್ಞ
ಕೂಲಿ ಕಾರ್ಮಿಕನ ಅರ್ಧ ದೇಹ ತಿಂದ ಚಿರತೆ!
ಟೇಕಲ್: ವಿಶ್ರಾಂತಿ ಪಡೆಯಲೆಂದು ಗಿಡದ ಕೆಳಗೆ ಮಲಗಿದ್ದ ಕೂಲಿ ಕಾರ್ಮಿಕನ ಮೇಲೆ ದಾಳಿ ನಡೆಸಿರುವ ಚಿರತೆಯೊಂದು ವ್ಯಕ್ತಿಯ ದೇಹದ ಅರ್ಧ ಭಾಗವನ್ನು ತಿಂದಿರುವ ಭೀಕರ ಘಟನೆ ಕೋಲಾರದ ವೀರಕಪುತ್ರ ಗ್ರಾಮದಲ್ಲಿ ನಡೆದಿದೆ.
ಟೇಕಲ್ ಹೋಬಳಿಯ ಬಂಡೂರು ಅಗ್ರಹಾರ ಗ್ರಾಮದ ವಾಸಿ ವೆಂಕಟೇಶಪ್ಪ(45) ಚಿರತೆ ಅಟ್ಟಹಾಸಕ್ಕೆ ಬಲಿಯಾದ ದುರ್ದೈವಿ. ಸುತ್ತಮುತ್ತಲ ಗ್ರಾಮಗಳಿಗೆ ಕೂಲಿಗಾಗಿ ತೆರಳುತ್ತಿದ್ದ ವೆಂಕಟೇಶಪ್ಪ, ಎಂದಿನಂತೆ ಕೂಲಿ ಕೆಲಸ ಮುಗಿಸಿ ಗ್ರಾಮಕ್ಕೆ ವಾಪಸ್ಸಾಗುವ ಸಂದರ್ಭ ವೀರಪುತ್ರ ಗ್ರಾಮದ ಬಳಿ ವಿಶ್ರಾಂತಿಗೆಂದು ಮಲಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಸ್ಥಳಕ್ಕೆ ಭೇಟಿ ನೀಡಿದ ಮಾಲೂರು ವಲಯ ಅರಣ್ಯಾಧಿಕಾರಿ ವಾಸುದೇವಮೂರ್ತಿ, ಜಿಲ್ಲಾ ವಲಯ ಅರಣ್ಯಾಧಿಕಾರಿ ರಾಮಲಿಂಗರೆಡ್ಡಿ ಮಾತನಾಡಿ, ಇಲಾಖೆಯಿಂದ ಸಿಗುವ 5 ಲಕ್ಷ ರೂ.ಪರಿಹಾರವನ್ನು ನೀಡುವ ಭರವಸೆ ನೀಡಿದರು.
ಅಧಿಕಾರಿಗಳ ಮಾತಿಗೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಮೃತನಿಗೆ ತಂದೆ-ತಾಯಿ ಸೇರಿದಂತೆ 7 ಮಂದಿ ಮಕ್ಕಳಿದ್ದು ಹೆಚ್ಚುವರಿ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದರು. ಗ್ರಾಮಸ್ಥರ ಮನವಿಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಸರ್ಕಾರದೊಂದಿಗೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ತಿಳಿಸಿದರು. ಈ ಸಂದರ್ಭ ಮಾಲೂರು ಶಾಸಕ ಮಂಜುನಾಥಗೌಡರು ಮೃತನ ಕುಟುಂಬಕ್ಕೆ 20 ಸಾವಿರ ಪರಿಹಾರ ನೀಡಿ ಸಾಂತ್ವನ ಹೇಳಿದರು.
ಚಿರತೆ ಹಾವಳಿ ತಪ್ಪಿಸಲು ಮನವಿ: ಟೇಕಲ್ ಹೋಬಳಿ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಿದ್ದು, ಕುರಿ, ಮೇಕೆ, ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಗಳು ಇದೀಗ ಮನುಷ್ಯರ ಮೇಲೆ ದಾಳಿ ನಡೆಸಿದ್ದರಿಂದ ಆತಂಕಗೊಂಡ ಗ್ರಾಮಸ್ಥರು, ಸೂಕ್ತ ಪರಿಹಾರ ನೀಡಿ ಚಿರತೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದರು.