Advertisement

ಮತ್ತೆ ಚೀತಾಗಳ ಸ್ವಚ್ಛಂದ ಓಡಾಟ

11:37 PM Sep 12, 2022 | Team Udayavani |

ಎಲ್ಲವೂ ಅಂದುಕೊಂಡಂತೆ ನಡೆದರೆ, “ವನ್ಯಜಗತ್ತಿನ ಅತಿದೊಡ್ಡ ಪ್ರಯೋಗ’ವೊಂದನ್ನು ಯಶಸ್ವಿಯಾಗಿ ಪೂರೈಸಿದ ಹೆಗ್ಗಳಿಕೆ ಭಾರತದ ಪಾಲಾಗಲಿದೆ. ದೇಶದ ಅರಣ್ಯಗಳಲ್ಲಿ ಮತ್ತೆ ಚೀತಾಗಳು ಸ್ವಚ್ಛಂದವಾಗಿ ಸಂಚರಿಸುವ ದಿನಗಳು ಬರಲಿವೆ.ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ “ಚೀತಾ ರೀಇಂಟ್ರೊಡಕ್ಷನ್‌ ಪ್ರಾಜೆಕ್ಟ್’ ಫ‌ಲ ನೀಡಲಾರಂಭಿಸಿದ್ದು, ಇದೇ 17ರಂದು ನಮೀಬಿಯಾದಿಂದ 8 ಚೀತಾಗಳು ಭಾರತ ಪ್ರವೇಶಿಸಲಿವೆ. ಮುಂದಿನ ತಿಂಗಳು 12 ಚೀತಾಗಳು ದ.ಆಫ್ರಿಕಾದಿಂದ ಆಗಮಿಸಲಿವೆ. ಚೀತಾಗಳ ಈ ಸುದೀರ್ಘ‌ ಪ್ರಯಾಣದ ವಿವರ ಇಲ್ಲಿದೆ.

Advertisement

ಎಲ್ಲಿಂದ, ಎಷ್ಟು?
ಜಗತ್ತಿನಲ್ಲಿರುವ ಒಟ್ಟು ಚೀತಾಗಳ ಪೈಕಿ ಮೂರನೇ ಒಂದರಷ್ಟು ಚೀತಾಗಳು ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಲ್ಲಿವೆ. ವಿಶ್ವದಲ್ಲಿರುವ ಒಟ್ಟು ಚೀತಾಗಳ ಸಂಖ್ಯೆಯಲ್ಲಿ ಅರ್ಧದಷ್ಟು ಈ ಎರಡು ದೇಶಗಳು ಮತ್ತು ಬೋಟ್ಸ್‌ವಾನಾದಲ್ಲಿವೆ. ಈಗ ದ.ಆಫ್ರಿಕಾ ಮತ್ತು ನಮೀಬಿಯಾದಿಂದ ಕನಿಷ್ಠ 16 ಚೀತಾಗಳು ಭಾರತಕ್ಕೆ ಬರಲಿವೆ. ಭಾರತಕ್ಕೆ ಬರಲಿರುವ ಹೆಚ್ಚಿನ ಚೀತಾಗಳನ್ನು ದ.ಆಫ್ರಿಕಾದ ರಕ್ಷಿತಾರಣ್ಯಗಳಿಂದ ಕರೆತರಲಾಗುತ್ತಿದೆ. ಅಲ್ಲಿ ಸುಮಾರು 50 ರಕ್ಷಿತಾರಣ್ಯಗಳಿದ್ದು, 500ರಷ್ಟು ವಯಸ್ಕ ಚೀತಾಗಳು ಅಲ್ಲಿವೆ.

ಚೀತಾಗಳನ್ನು ಹಿಡಿದಿದ್ದು ಹೇಗೆ?
ಅರಣ್ಯಗಳಲ್ಲಿರುವ ಕೆಲವು ಚೀತಾಗಳು ಸ್ವಲ್ಪ ಹೆಚ್ಚೇ ವ್ಯಗ್ರವಾಗಿರುವ ಕಾರಣ, ಮೊದಲಿಗೆ ರಕ್ಷಿತಾರಣ್ಯದ ಮೇಲ್ಭಾಗದಲ್ಲಿ ಹೆಲಿಕಾಪ್ಟರ್‌ ಮೂಲಕ ತೆರಳಿದ ಪಶುವೈದ್ಯ ತಜ್ಞರು, ಅರಿವಳಿಕೆ (ಪ್ರಾಣಿಗಳನ್ನು ಶಾಂತಗೊಳಿಸುವ ಚುಚ್ಚುಮದ್ದು)ಗಳನ್ನು ಫೈರ್‌ ಮಾಡಿದರು. ಅವುಗಳು ಶಾಂತವಾದೊಡನೆ ಸೆರೆಹಿಡಿದು ತರಲಾಯಿತು. ನಂತರ ಆ ಚೀತಾಗಳಿಗೆ ಮೈಕ್ರೋಚಿಪ್‌ ಅಳವಡಿಸಿ, ಸೋಂಕು ತಡೆಗೆ ಅಗತ್ಯವಿರುವ ಆ್ಯಂಟಿಬಯಾಟಿಕ್‌ ಹಾಗೂ ಇಂಜೆಕ್ಷನ್‌ ನೀಡಲಾಯಿತು, ಡ್ರಿಪ್‌ ಹಾಕಲಾಯಿತು. ಬಳಿಕ ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿಯನ್ನು ಸಂಗ್ರಹಿಸಲಾಯಿತು. ಈ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಚೀತಾಗಳನ್ನು ಬೋನಿನಲ್ಲಿ ಹಾಕಿ, ಕ್ವಾರಂಟೈನ್‌ ಕೇಂದ್ರಗಳಿಗೆ ರವಾನಿಸಲಾಯಿತು.

ಕ್ವಾರಂಟೈನ್‌ ಕೇಂದ್ರದಲ್ಲಿ ಲಸಿಕೆ
ಚೀತಾಗಳನ್ನು ಹಲವು ಮಾದರಿಯ ಪರೀಕ್ಷೆಗೆ ಒಳಪಡಿಸಿದ ಬಳಿಕ, ರೇಬೀಸ್‌, ಹಪೀìಸ್‌ ಸೇರಿದಂತೆ ವಿವಿಧ ಸೋಂಕುಗಳಿಂದ, ವೈರಸ್‌ಗಳಿಂದ ರಕ್ಷಿಸಲು ಕನಿಷ್ಠ 6 ಲಸಿಕೆಗಳನ್ನು ನೀಡಲಾಗಿದೆ. ಆ ಚೀತಾಗಳಿಗೆ ಯಾವುದೇ ಗಂಭೀರ ತೆರನಾದ ಕಾಯಿಲೆಗಳಿಲ್ಲ ಎಂಬುದನ್ನು ದೃಢಪಡಿಸುವ ಉದ್ದೇಶದಿಂದ ಅವುಗಳ ಮೇಲೆ ಸಂಪೂರ್ಣ ನಿಗಾ ಇಡಲಾಗುತ್ತಿತ್ತು.

ದೀರ್ಘ‌ ಪ್ರಯಾಣವೇ ದೊಡ್ಡ ಸವಾಲು!
ಕಾಡಿನಲ್ಲಿದ್ದ ಚೀತಾಗಳು ಮಾನವನನ್ನು ಸಮೀಪಿಸಿದಾಗ ಮತ್ತು ಬೋನಿನಲ್ಲಿ ಕೂಡಿಹಾಕಿದಾಗ ತೀವ್ರ ಒತ್ತಡಕ್ಕೆ ಸಿಲುಕುತ್ತವೆ. ಹೀಗಾಗಿ ಇವುಗಳನ್ನು ಅದೂ ಅಷ್ಟು ದೂರದವರೆಗೆ ಸಾಗಿಸುವುದೆಂದರೆ ದೊಡ್ಡ ಸವಾಲೇ ಸರಿ ಎನ್ನುತ್ತಾರೆ ತಜ್ಞರು.
– ಭಾರತಕ್ಕೆ ಬರಲಿರುವ ಚೀತಾಗಳು ಮೊದಲು ಸರಕು ವಿಮಾನದಲ್ಲಿ ಜೋಹಾನ್ಸ್‌ಬರ್ಗ್‌ನಿಂದ ದೆಹಲಿಗೆ ದೀರ್ಘ‌ ಪ್ರಯಾಣ ಕೈಗೊಂಡು, ದೆಹಲಿಯಿಂದ ರಸ್ತೆ ಅಥವಾ ಹೆಲಿಕಾಪ್ಟರ್‌ ಮೂಲಕ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬರಲಿವೆ.
– ಅರಿವಳಿಕೆ ಚುಚ್ಚುಮದ್ದನ್ನು ನೀಡಿ ಚೀತಾಗಳನ್ನು ನಿಶ್ಚಲಗೊಳಿಸಲಾಗುತ್ತದೆ. ನಂತರ ಲೋಹದ ಬೋನಿನೊಳಗೆ ಹಾಕಿ, ವಿಮಾನವೇರಿಸಲಾಗುತ್ತದೆ. ವಿಮಾನದಲ್ಲಿ ವನ್ಯಜೀವಿ ತಜ್ಞರು, ಪಶುವೈದ್ಯರು ಇರುತ್ತಾರೆ.
– ನಂತರ ಅನಸ್ತೇಷಿಯಾದಿಂದ ಹೊರತರುವ ಉದ್ದೇಶದಿಂದ ಆ್ಯಂಟಿಡೋಟ್‌ ನೀಡಿ ಚೀತಾಗಳನ್ನು ಎಚ್ಚರಿಸಲಾಗುತ್ತದೆ. ಜೊತೆಗೆ, ಅವು ಎಚ್ಚರವಾದೊಡನೆ ವ್ಯಗ್ರವಾಗಬಾರದು ಎಂಬ ಕಾರಣಕ್ಕೆ ಅಲ್ಪಪ್ರಮಾಣದ ಅರಿವಳಿಕೆ ನೀಡಿ, ಪ್ರಯಾಣದ ಅವಧಿಯಲ್ಲಿ ಶಾಂತವಾಗಿರುವಂತೆ ನೋಡಿಕೊಳ್ಳಲಾಗುತ್ತದೆ.

Advertisement

ವಿಮಾನ ಪ್ರಯಾಣದ ವೇಳೆ ಆಹಾರ?
ಇಲ್ಲ. ಪ್ರಯಾಣದ ಅವಧಿಯಲ್ಲಿ ಅವುಗಳಿಗೆ ಆಹಾರ ನೀಡುವುದಿಲ್ಲ. ಚೀತಾಗಳಿಗೆ ಪ್ರತಿ 3 ದಿನಗಳಿಗೊಮ್ಮೆ ಏಕಕಾಲಕ್ಕೆ 15 ಕೆಜಿ ಮಾಂಸ ನೀಡಲಾಗುತ್ತದೆ. ಆದರೆ, ದೀರ್ಘ‌ ಪ್ರಯಾಣಕ್ಕೆ ಮುನ್ನ ಅವುಗಳಿಗೆ ಆಹಾರ ಒದಗಿಸುವುದರಿಂದ ರಿಸ್ಕ್ ಹೆಚ್ಚು. ಅಲ್ಲದೇ ಅವುಗಳು ಏಕಾಏಕಿ ಅನಾರೋಗ್ಯಕ್ಕೆ ತುತ್ತಾಗಲೂಬಹುದು, ವಾಂತಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಭಾರತಕ್ಕೆ ಹೊರಟ ಚೀತಾಗಳಿಗೆ ಪ್ರಯಾಣ ಆರಂಭಕ್ಕೂ 2 ದಿನಗಳ ಮುಂಚೆಯೇ ಆಹಾರ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ.

ಭಾರತ ತಲುಪಿದ ಮೇಲೆ…
ಆರಂಭದಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನದ ಬೇಲಿ ಹಾಕಿರುವ ಕ್ಯಾಂಪ್‌ನೊಳಗೆ ಚೀತಾಗಳನ್ನು ಕ್ವಾರಂಟೈನ್‌ ಮಾಡಲಾಗುತ್ತದೆ. ಆಗ ಅವುಗಳು ಉದ್ಯಾನದ ಮಧ್ಯಭಾಗದಲ್ಲೇ ಉಳಿಯುವುದನ್ನು ಅಭ್ಯಾಸ ಮಾಡಿಕೊಳ್ಳುತ್ತವೆ. ಒಂದೆರಡು ತಿಂಗಳ ಕಾಲ ಅಲ್ಲೇ ಬಿಟ್ಟು, ನಂತರಅವುಗಳನ್ನು 1,15,000 ಹೆಕ್ಟೇರ್‌ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಾಗುತ್ತದೆ. ನಂತರ ಅವರು ಸರ್ವಸ್ವತಂತ್ರ.

ಸಂಕಷ್ಟಗಳನ್ನು ಎದುರಿಸಿ ಗೆಲ್ಲಬೇಕಿದೆ
– ಚೀತಾ ಬಹಳ ಸೂಕ್ಷ್ಮವಾದ ಪ್ರಾಣಿ. ಅವುಗಳಿಗೆ ಸಂಘರ್ಷ ಆಗಿಬರುವುದಿಲ್ಲ. ಹೀಗಾಗಿ ಸುಲಭವಾಗಿ ಅವುಗಳು ಪರಭಕ್ಷಕ ಪ್ರಾಣಿಗಳ ದಾಳಿಗೆ ಒಳಗಾಗಬಹುದು.
– ವಿಶೇಷವಾಗಿ ಕುನೋ ಉದ್ಯಾನದಲ್ಲಿರುವ ಚಿರತೆಗಳು ಚೀತಾಗಳ ಮರಿಗಳನ್ನು ಕೊಂದು ಹಾಕಿ, ಅವುಗಳ ಸಂಖ್ಯೆಯನ್ನು ತಗ್ಗಿಸಲು ಯತ್ನಿಸಬಹುದು
– ಭಾರತಕ್ಕೆ ಬರುವ ಚೀತಾಗಳು ಉದ್ಯಾನದಲ್ಲಿ ಸಿಂಹ, ಚಿರತೆ, ಕತ್ತೆಕಿರುಬಗಳು ಮತ್ತು ಕಾಡುನಾಯಿಗಳನ್ನು ಎದುರಿಸಬೇಕಾಗುತ್ತವೆ. ಕುನೋದಲ್ಲಿ ಮೊದಲು ಚೀತಾಗಳಿಗೆ ಮುಖಾಮುಖೀಯಾಗುವುದೇ ಜೇನುಕರಡಿಗಳು, ಕತ್ತೆಕಿರುಬಗಳು ಮತ್ತು ತೋಳಗಳು.

ಭಾರತದ ಯೋಜನೆಯೇನು?
ಕುನೋ ಪಾರ್ಕ್‌ ವಿಶಾಲವಾಗಿದೆ, ಚೀತಾಗಳಿಗೆ ಸಾಕಷ್ಟು ಬೇಟೆಯೂ ಲಭ್ಯವಿರುತ್ತದೆ ಮತ್ತು ಇಲ್ಲಿ ಮಾನವ ಜನಸಂಖ್ಯೆಯ ಒತ್ತಡವೂ ಕಡಿಮೆಯಿದೆ. ಇವೆಲ್ಲವೂ ಚೀತಾಗಳ ಉಳಿವಿಗೆ ಸಹಾಯಕವಾಗಲಿವೆ. ಮುಂದಿನ 5ರಿಂದ 6 ವರ್ಷಗಳಲ್ಲಿ, 50-60 ಚೀತಾಗಳನ್ನು ಆಮದು ಮಾಡಿಕೊಂಡು, ದೇಶದ ವಿವಿಧ ರಕ್ಷಿತಾರಣ್ಯಗಳಿಗೆ ಬಿಡುಗಡೆ ಮಾಡುವ ಯೋಜನೆಯನ್ನು ಭಾರತ ಸರ್ಕಾರ ಹಾಕಿಕೊಂಡಿದೆ. ಇದರ ಮೂಲಕ ಚೀತಾಗಳ ಸಂಖ್ಯೆಯನ್ನು ಹೆಚ್ಚಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.

ಜಾಗತಿಕ ಮಹತ್ವ
ಭಾರತದ ಈ ಯೋಜನೆಯು ಚೀತಾಗಳ ಸಂರಕ್ಷಣೆಗೆ ಮಾಡುತ್ತಿರುವ ಪ್ರಮುಖ ಪ್ರಯೋಗವಾಗಿದೆ. ಇರಾನ್‌ನಲ್ಲಿ ಈಗ ಉಳಿದಿರುವುದು ಕೇವಲ 12 ಏಷ್ಯಾಟಿಕ್‌ ಚೀತಾಗಳು ಮಾತ್ರ. ಚೀತಾಗಳನ್ನು ಅಳಿವಿನಂಚಿನಿಂದ ಪಾರು ಮಾಡಬೇಕೆಂದರೆ, ಭಾರತ ಕೈಗೊಂಡಿರುವಂಥ ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

1947- ದೇಶದಲ್ಲಿದ್ದ ಕೊನೆಯ ಚೀತಾ ಅಸುನೀಗಿದ ವರ್ಷ
1952 – ಚೀತಾ ಸಂತತಿಯನ್ನು ನಾಮಾವಶೇಷಗೊಂಡ ಪ್ರಾಣಿ ಸಂತತಿ ಎಂದು ಘೋಷಿಸಿದ್ದು
2009- ಚೀತಾ ವಾಪಸಾತಿ ಯೋಜನೆ ಘೋಷಿಸಿದ ವರ್ಷ
10,000 – 16-17ನೇ ಶತಮಾನದಲ್ಲಿ ಭಾರತದಲ್ಲಿದ್ದ ಚೀತಾಗಳು
748 ಚ.ಕಿ.ಮೀ.- ಕುನೋ ರಾಷ್ಟ್ರೀಯ ಉದ್ಯಾನವನದ ವಿಸ್ತೀರ್ಣ
8 – ಸೆ.17ರಂದು ಭಾರತಕ್ಕೆ ಬರುವ ಚೀತಾಗಳು
12- ಅಕ್ಟೋಬರ್‌ನಲ್ಲಿ ದ.ಆಫ್ರಿಕಾದಿಂದ ಬರಲಿರುವ ಚೀತಾಗಳು

Advertisement

Udayavani is now on Telegram. Click here to join our channel and stay updated with the latest news.

Next