Advertisement

ಚೀತಾ ಕರೆ ತಂದ ತಂಡದಲ್ಲಿ ಪುತ್ತೂರಿನ ಸನತ್‌!

10:44 AM Sep 18, 2022 | Team Udayavani |

ಪುತ್ತೂರು: ಒಂದು ವಾರ ದಿಂದ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ಕರೆತರುವ‌ ಚೀತಾಗಳದ್ದೇ ಸುದ್ದಿ. ಶನಿವಾರ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಅಂದೂ ಸಹ ಪ್ರಧಾನಿ ಜನ್ಮದಿನದ ಜತೆಗೆ ಎಲ್ಲೆಲ್ಲೂ ರಾರಾಜಿಸುತ್ತಿರುವುದು ಚೀತಾಗಳೇ. ಅದರ ಮಧ್ಯೆ ಸಂಭ್ರಮದ ಸಂಗತಿಯೆಂದರೆ ಆ ಚೀತಾ ಕರೆ ತಂದ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಿದ್ದರು ಎಂಬುದು !

Advertisement

ಜಂಬೋ ಜೆಟ್‌ ವಿಮಾನದ ಮೂಲಕ ಎಂಟು ಚೀತಾಗಳನ್ನು ಶನಿವಾರ ಭಾರತಕ್ಕೆ ತರಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಅಭಯಾರಣ್ಯಕ್ಕೆ ಚೀತಾಗಳನ್ನು ಬಿಟ್ಟರು.

ಹೀಗೆ ಚೀತಾಗಳನ್ನು ಕರೆತಂದ ತಂಡದ ಮೂವರು ಭಾರತೀಯರ ಪೈಕಿ ಓರ್ವರು ಪುತ್ತೂರಿನ ಡಾ| ಸನತ್‌ ಕೃಷ್ಣ ಮುಳಿಯ. ಕೇಂದ್ರ ಸರಕಾರದ ಪರಿಸರ ಇಲಾಖೆಯ ಅಧೀನದ ಹೊಸದಿಲ್ಲಿಯ ನ್ಯಾಶನಲ್‌ ಜಿಯೋಲಜಿಕಲ್‌ ಪಾರ್ಕ್‌ನಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ| ಸನತ್‌ ಕೃಷ್ಣ ಮುಳಿಯ ಪ್ರತಿಷ್ಠಿತ ಮುಳಿಯ ಕುಟುಂಬದ ಸದಸ್ಯರು. ಸ್ವರ್ಣ ಉದ್ಯಮಿಯಾಗಿದ್ದ ದಿ| ಕೇಶವ ಭಟ್‌ ಮತ್ತು ಉಷಾ ಭಟ್‌ ಮುಳಿಯ ಅವರ ಪುತ್ರ. ಪುತ್ತೂರಿನ ಹಾರಾಡಿಯಲ್ಲಿ ಮನೆ ಹೊಂದಿರುವವರು.

ಸನತ್‌ ಅವರು ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪೂರೈಸಿ, ಬೆಂಗಳೂರಿನಲ್ಲಿ ಬಿವಿಎಸ್‌ ಸಿ-ಎನ್‌ವಿ ಎಸ್‌ಸಿ ಪದವಿ ಪಡೆದವರು. ವನ್ಯಜೀವಿ ಹಾಗೂ ಅರಿವಳಿಕೆ ವಿಭಾಗದಲ್ಲಿ ಉನ್ನತ ಅಧ್ಯಯನ ಮಾಡಿ ಬಳಿಕ ಆಫ್ರಿಕಾದ ಭೂತ್ಸ್ವಾನ್ ದಲ್ಲಿ ಒಂದೂವರೆ ವರ್ಷ ಕರ್ತವ್ಯ ನಿರ್ವಹಿಸಿದರು. ಈ ಮಧ್ಯೆ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು ಹೊಸದಿಲ್ಲಿಗೆ ವಾಪಾಸಾಗಿ ಸೇವೆಗೆ ಸೇರಿಕೊಂಡರು. ಸನತ್‌ ಅವರ ಪತ್ನಿ ಪ್ರಿಯಾಂಕಾ ಕೂಡ ವನ್ಯಜೀವಿ ತಜ್ಞೆ.

ಆಫ್ರಿಕಾದಲ್ಲಿ ಕೆಲಸ ನಿರ್ವಹಿಸಿದ ಅನುಭವ
ಆಫ್ರಿಕಾದಲ್ಲಿ ಕಾರ್ಯ ನಿರ್ವಹಿಸಿದ ಸನತ್‌ ಅವರ ಅನುಭವ ಈ ಪ್ರಾಜೆಕ್ಟ್ ಚೀತಾ ತಂಡಕ್ಕೆ ಸೇರಲು ಅವಕಾಶ ಒದಗಿಸಿದೆ ಎನ್ನಲಾಗಿದೆ.

Advertisement

“ಪ್ರಾಜೆಕ್ಟ್ ಚೀತಾ’ ಹೆಸರಿನ ಈ ಯೋಜನೆಯಲ್ಲಿ ಎಂಟು ಚೀತಾಗಳಲ್ಲಿ ಐದು ಹೆಣ್ಣು, 2ರಿಂದ 5 ವರ್ಷ ವಯಸ್ಸಿನ ನಡುವೆ ಮತ್ತು ಮೂರು 4.5ರಿಂದ5.5 ವರ್ಷದೊಳಗಿನ ಗಂಡು ಚೀತಾಗಳಿವೆ. ಬೋಯಿಂಗ್‌ 747-400 ವಿಮಾನ ಶನಿವಾರ ಬೆಳಗ್ಗೆ 7:55ರ ಸುಮಾರಿಗೆ ಗ್ವಾಲಿಯರ್‌ನಲ್ಲಿ ಇಳಿದ ಅನಂತರ ಚೀತಾಗಳನ್ನು ವಾಯುಪಡೆಯ ಹೆಲಿಕಾಪ್ಟರ್‌ಗಳಲ್ಲಿ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯಲಾಯಿತು. ಚೀತಾ ತರುವ ತಂಡದಲ್ಲಿ ಅಧಿಕಾರಿಗಳು, ಪಶುವೈದ್ಯರು ಹಾಗೂ ವನ್ಯಜೀವಿ ತಜ್ಞರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next