ಗಂಗಾವತಿ: ಕಳೆದ ಒಂದು ವಾರದಿಂದ ಆನೆಗೊಂದಿ ಸಾಣಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಜನರನ್ನು ಭಯಭೀತರನ್ನಾಗಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಆನೆಗೊಂದಿ ಮೇಗೋಟ್ ವಾಲೀಕಿಲ್ಲಾ ಆದಿಶಕ್ತಿ ದೇಗುಲದ ಗುಡ್ಡದಲ್ಲಿ ಇರಿಸಲಾಗಿದ್ದ ಬೋನ್ ನಲ್ಲಿ 4 ವರ್ಷದ ಚಿರತೆ ಬಿದ್ದಿದೆ.
ಕಳೆದ ಒಂದು ವಾರದಿಂದ ತಾಲೂಕಿನ ಜಂಗ್ಲಿ ರಂಗಾಪೂರದಲ್ಲಿ ಮಹಿಳೆ ಮತ್ತು ವಾಲೀಕಿಲ್ಲಾ ದೇಗುಲದ ಬಳಿ ಹೈದ್ರಾಬಾದ್ ಮೂಲದ 10 ಬಾಲಕನನ್ನು ಚಿರತೆ ಗಾಯಗೊಳಿಸಿದ ಘಟನೆ ಜರುಗಿತ್ತು. ಸ್ಥಳಕ್ಕೆ ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಹರ್ಷಾಭಾನು ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಅಂಜನಾದ್ರಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇರಿಸಲು ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ:ಕಲಬುರಗಿಯಲ್ಲಿ ಮಳೆ ಪರಿಹಾರ ಕಾರ್ಯ ಚುರುಕು: ಕಾಳಜಿ ಕೇಂದ್ರದಲ್ಲಿ 7,603 ಜನರಿಗೆ ಆಶ್ರಯ
ಗುರುವಾರ ಬೆಳ್ಳಿಗ್ಗೆ ವಾಲೀಕಿಲ್ಲಾ ಗುಡ್ಡದ ಬಳಿ ಚಿರತೆ ಬೋನಿಗೆ ಬಿದ್ದಿದ್ದು ಮೇಲಾಧಿಕಾರಿಗಳ ಆದೇಶದಂತೆ ಚಿರತೆಯನ್ನು ವೈದ್ಯಕೀಯ ಪರೀಕ್ಷೆ ಮಾಡಿದ ನಂತರ ಬೇರೆ ಅರಣ್ಯ ಪ್ರದೇಶ ಅಥವಾ ಪ್ರಾಣಿ ಸಂಗ್ರಹಾಲಯಕ್ಕೆ ಕಳಿಸಲಾಗುತ್ತದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಹರ್ಷಾಭಾನು ಉದಯವಾಣಿ ಗೆ ತಿಳಿಸಿದ್ದಾರೆ.