Advertisement

ಬಾವಿಗೆ ಬಿದ್ದು ಚಿರತೆ ಸಾವು; ರಕ್ಷಣೆಗೆ ಅರಣ್ಯಾಧಿಕಾರಿಗಳು ವಿಫಲ?

10:07 PM Feb 11, 2018 | Team Udayavani |

ಕೋಟ: ಚಿರತೆಯೊಂದು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬಿಲ್ಲಾಡಿ ಗ್ರಾ.ಪಂ. ವ್ಯಾಪ್ತಿಯ ಶಿರೂರುಮೂಕೈ ಭಂಡಾರ್ಥಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ನಾಯಿ ಅಥವಾ ಯಾವುದೋ ಕಾಡು ಪ್ರಾಣಿಯನ್ನು ಅಟ್ಟಿಸಿಕೊಂಡು ಬಂದು ಬಾವಿಗೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ಈ ಘಟನೆ ನಡೆದಿದ್ದು ಸ್ಥಳೀಯರೋರ್ವರು ಬೆಳಗ್ಗೆ ಚಿರತೆ ನೀರಿನಲ್ಲಿ ಈಜಾಡುತ್ತಿರುವುದನ್ನು ಗಮನಿಸಿ ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

Advertisement

ರಕ್ಷಣೆಗೆ ಅರಣ್ಯಾಧಿಕಾರಿಗಳು ವಿಫಲ
ಸ್ಥಳೀಯ ಅರಣ್ಯ ವೀಕ್ಷಕರು ಮೊದಲಿಗೆ ಸ್ಥಳಕ್ಕಾಗಮಿಸುವಾಗ ಚಿರತೆ ನೀರಿನಲ್ಲಿ ಈಜಾಡುತ್ತಿತ್ತು ಆದರೆ ಅಧಿಕಾರಿಗಳಲ್ಲಿ ಯಾವುದೇ ರಕ್ಷಣಾ ಸಾಮಗ್ರಿಗಳು ಇರಲಿಲ್ಲ, ಅನಂತರ ಅವರು ಮೇಲಧಿಕಾರಿಗಳಿಗೆ ವಿಚಾರ ತಿಳಿಸಿದ್ದು ಅವರ ತಂಡ ಸ್ಥಳಕ್ಕಾಗಮಿಸುವಾಗ ಚಿರತೆ ನೀರಲ್ಲಿ ಮುಳುಗಿ ಮೃತಪಟ್ಟಿದೆ. ಅಧಿಕಾರಿಗಳ ಎದುರಲ್ಲೇ ಚಿರತೆ ಸಾವನ್ನಪ್ಪಿದ ಕುರಿತು ಸ್ಥಳದಲ್ಲಿ ಉಪಸ್ಥಿತರಿದ್ದ ನೂರಾರು ಮಂದಿ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ಕೊನೆಯ ಪಕ್ಷ ಅಧಿಕಾರಿಗಳು, ಸ್ಥಳೀಯರು ಯಾರಾದರೂ ಒಂದು  ಮರದ ತುಂಡನ್ನು ಬಾವಿಗೆ ಇಳಿಬಿಟ್ಟಿದ್ದರೂ ಚಿರತೆ ಬದುಕುವ ಸಾಧ್ಯತೆ ಇತ್ತು ಎಂದು ತಿಳಿಸಿದ್ದಾರೆ. ಚಿರತೆ ಸಾವನ್ನಪ್ಪುವ ಕೊನೆಯ ಕ್ಷಣದ ವೀಡಿಯೊವೊಂದನ್ನು ಸ್ಥಳೀಯರೋರ್ವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಅದು ಮನಕಲಕುವಂತಿದೆ. ಮುಳುಗು ತಜ್ಞ ಮಂಜುನಾಥ ನಾಯ್ಕ ಚಿರತೆಯ ಕಳೇಬರವನ್ನು ನೀರಿನಿಂದ ಮೇಲೆತ್ತಿದರು. ಅನಂತರ ಅರಣ್ಯಾಧಿಕಾರಿಗಳು ಶವಪರೀಕ್ಷೆ ಮುಂತಾದ ಕಾನೂನು ಪ್ರಕಿಯೆಯನ್ನು ನೆರವೇರಿಸಿದರು.

ಅಧಿಕಾರಿಗಳ ಸ್ಪಷ್ಟನೆ
ಕಿರಿಯ ಅಧಿಕಾರಿಗಳು ಮೊದಲಿಗೆ ಸ್ಥಳಕ್ಕೆ ಭೇಟಿ ನೀಡಿದ್ದು ಅವರಲ್ಲಿ ಯಾವುದೇ ರಕ್ಷಣಾ ಪರಿಕರ ಇರಲಿಲ್ಲ. ಅನಂತರ ನಮಗೆ ವಿಚಾರ ತಿಳಿಸಿದ್ದಾರೆ. ನಾವು ರಕ್ಷಣಾ ಪರಿಕರದೊಂದಿಗೆ ತೆರಳಲು ಸಿದ್ಧರಾದಾಗ ಚಿರತೆ ಸಾವನ್ನಪ್ಪಿದ ವಿಚಾರ ತಿಳಿಸಿದರು. ಮುಳುಗುತಜ್ಞರ ಸಹಾಯದಿಂದ ಕಳೇಬರವನ್ನು ಮೇಲಕ್ಕೆತ್ತಿದ್ದೇವೆ. ಮೃತ ಚಿರತೆಗೆ ಸುಮಾರು 3ವರ್ಷ ಪ್ರಾಯದಾಗಿದ್ದು  ಮುಂದಿನ ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದು ಅರಣ್ಯಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ಶಂಕರನಾರಾಯಣ ಅರಣ್ಯಾಧಿಕಾರಿಗಳಾದ ಸಂತೋಷ, ಹರೀಶ್‌, ವೀರಣ್ಣ, ರಾಕೇಶ ಮತ್ತು ಸಿಬಂದಿ ಹಾಗೂ ಬಿಲ್ಲಾಡಿ ಗ್ರಾ.ಪಂ. ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು. ಶವ ಪರೀಕ್ಷೆಯ ಸಂದರ್ಭ ವಲಯ ಅರಣ್ಯಾಧಿಕಾರಿ ಗೋಪಾಲ ಉಪಸ್ಥಿತರಿದ್ದರು.

ಬಿಲ್ಲಾಡಿ – ವಂಡಾರು ಭಾಗದಲ್ಲಿ ವ್ಯಾಪಕ ಚಿರತೆ ಹಾವಳಿ
ಬಿಲ್ಲಾಡಿ ಹಾಗೂ ವಂಡಾರು ಗ್ರಾಮಗಳಿಗೆ ಹಲವು ವರ್ಷಗಳಿಂದ ‌ಚಿರತೆ ಹಾಗೂ ಇನ್ನಿತರ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಇತ್ತೀಚೆಗೆ ಇಲ್ಲಿನ ನಿವಾಸಿಗಳಿಗೆ ಪ್ರತಿದಿನವೆಂಬಂತೆ ಚಿರತೆಯ ದರ್ಶನವಾಗುತ್ತಿದ್ದು ಈ ಭಾಗದ ಹಲವು ಜಾನುವಾರುಗಳು, ನಾಯಿ ಮುಂತಾದ ಸಾಕುಪ್ರಾಣಿಗಳು ಕಾಡುಪ್ರಾಣಿಗಳಿಗೆ ಆಹಾರವಾಗುತ್ತಿವೆ. ಆದ್ದರಿಂದ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ  ಸಮರ್ಪಕ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next