Advertisement

ಚಿರತೆ ದಾಳಿ: ಅರಣ್ಯ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

04:57 PM Oct 04, 2021 | Team Udayavani |

ಚಿಕ್ಕನಾಯಕನಹಳ್ಳಿ: ತಾಲೂಕಿನ ಹಾಲುಗೊಣ ಸಮೀಪದ ನಾಗೇನಹಳ್ಳಿ ತೋಟದ ಮನೆಯಲ್ಲಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಪೀಪಲ್‌ ಟ್ರೀ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement

ಆರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಚಿರತೆಗಳ ದಾಳಿ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ನಾಗೇನಹಳ್ಳಿ ಗ್ರಾಮದ ಗಂಗಾಧರ್‌ ತಮ್ಮ ತೋಟದ ಮನೆಯ ಮುಂಭಾಗ ನಿಂತುಕೊಂಡಿದ್ದ ವೇಳೆ ಚಿರತೆ ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದು, ಗಾಬರಿಗೊಂಡ ಗಂಗಾಧರ್‌ ಕಿರುಚಿಕೊಂಡಾಗ, ಚಿರತೆ ಓಡಿ ಹೋಗಿದೆ. ತಕ್ಷಣ ಕುಟುಂಬದ ಸದಸ್ಯರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇದನ್ನೂ ಓದಿ;- “ಗರುಡ ಗಮನ ವೃಷಭ ವಾಹನ”ಕ್ಕೆ ರಕ್ಷಿತ್ ಶೆಟ್ಟಿ ಸಾಥ್  

ಆತಂಕದಲ್ಲಿ ಜನ: ತಾಲೂಕಿನ ಗಡಿ ಭಾಗವಾಗಿರುವ ಹಾಲುಗೋಣ, ಮಲಗೊಂಡನಹಳ್ಳಿ ಕೆರೆಯಲ್ಲಿ ಹಾಗೂ ಸುತ್ತಮುತ್ತ ಇತ್ತೀಚಿನ ದಿನಗಳಲ್ಲಿ ಚಿರತೆಗಳ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಕೆಲ ದಿನಗಳ ಹಿಂದೆ ಮಲಗೊಂಡನಹಳ್ಳಿಯಲ್ಲಿ ಬಳಿ ಚಿರತೆ ಬೋನಿಗೆ ಬಿದ್ದಿತ್ತು. ಇನ್ನೂ ಕೆಲ ಚಿರತೆಗಳು ಸುತ್ತಮುತ್ತ ಪ್ರದೇಶಗಳಲ್ಲಿ ಇದ್ದು, ರೈತರು ತೋಟಗಳಿಗೆ ಹೋಗಲು ಭಯಭೀತರಾಗಿದ್ದಾರೆ.

Advertisement

ಅರಣ್ಯ ಇಲಾಖೆ ನಿರ್ಲಕ್ಷ್ಯ: ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ಬುಕ್ಕಪಟ್ಟಣ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆದಿತ್ತು. ಚಿಕ್ಕನಾಯಕನಹಳ್ಳಿ ವ್ಯಾಪ್ತಿಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಗಂಗಾಧರ್‌ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿದೆ. ನಾಗೇನಹಳ್ಳಿ ಸುತ್ತಮುತ್ತ ಚಿರತೆಗಳು ಹೆಚ್ಚಾಗುತ್ತಿದೆ ಎಂಬ ಮಾಹಿತಿ ಸಾರ್ವಜನಿಕರಿಂದ ಸಿಕ್ಕಿದ್ದರೂ ಸಹ, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳದೆ ಇರುವುದು ಇಂತಹ ದಾಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾಗೇನಹಳ್ಳಿ ಸುತ್ತಮುತ್ತ 3ರಿಂದ 4 ಚಿರತೆಗಳು ಇರುವ ಬಗ್ಗೆ ಅನುಮಾನವಿದೆ. ಇಲ್ಲಿನ ರೈತರಿಗೆ ಅರಣ್ಯ ಇಲಾಖೆಯಿಂದ ರಕ್ಷಣೆ ಸಿಗದಂತಾಗಿದೆ. ರೈತರು ಭಯದಿಂದ ಬದುಕುವಂತಾಗಿದೆ. ಅನೇಕ ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜವಿಲ್ಲ. ಒಂದು ಚಿರತೆ ಹಿಡಿದಿದ್ದೇ ದೊಡ್ಡ ಸಾಧನೆ ಎಂಬಂತೆ ಅರಣ್ಯ ಅಧಿಕಾರಿಗಳು ಸುಮ್ಮನಾಗಿದ್ದಾರೆ.”

ರವೀಶ್‌, ಗ್ರಾಪಂ ಮಾಜಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next