Advertisement

ಧಾರವಾಡ:  ಸಿಕ್ಕ ಹೆಜ್ಜೆ ಗುರುತು.. ಸಿಗದ ಚಿರತೆ

01:06 PM Sep 24, 2021 | Team Udayavani |

ಧಾರವಾಡ: ಕವಲಗೇರಿ ಗ್ರಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಕಳೆದ ಎರಡು ದಿನಗಳಿಂದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಸಾಗಿದ್ದು, ಚಿರತೆಯ ಹೆಜ್ಜೆ ಗುರುತು ಕಂಡಿದ್ದು ಚಿರತೆ ಮಾತ್ರ ಪತ್ತೆಯಾಗಿಲ್ಲ.

Advertisement

ಕವಲಗೇರಿ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಚಿರತೆ ಕಾಣಿಸಿಕೊಂಡ ಪರಿಣಾಮ ಬುಧವಾರ ತಡರಾತ್ರಿವರೆಗೂ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಇದಲ್ಲದೇ ಸ್ವಯಂ ಜಿಲ್ಲಾಧಿಕಾರಿ ನಿತೇಶ ಪಾಟೀಲ ಕೂಡ ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಿದ್ದರು. ಗುರುವಾರ ಬೆಳಿಗ್ಗೆಯಿಂದಲೇ ಮತ್ತೆ ಕಾರ್ಯಾಚರಣೆಗಿಳಿದ ಸಿಬ್ಬಂದಿ ಡ್ರೋಣ್‌ ಮೂಲಕ ಪತ್ತೆಗೆ ಮುಂದಾಯಿತು. ಆದರೂ ಸುಳಿವು ಸಿಕ್ಕಿಲ್ಲ. ಕೆಲವೆಡೆ ಚಿರತೆಯ ಹೆಜ್ಜೆ ಗುರುತು, ಮಲ(ಲದ್ದಿ) ಸಿಕ್ಕಿದ್ದು, ಅದರ ಮಾದರಿಯನ್ನೂ ಅರಣ್ಯ ಇಲಾಖೆ ಪಡೆದಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿಗಳು ಕವಲಗೇರಿಯಲ್ಲಿಯೇ ಬೀಡು ಬಿಟ್ಟಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ಹುಬ್ಬಳ್ಳಿಯಲ್ಲಿ ಬುಧವಾರ ಹಾಗೂ ಧಾರವಾಡದ ಕವಲಗೇರಿಯ ಕಬ್ಬಿನ ಗದ್ದೆಯಲ್ಲೂ ಗುರುವಾರ ಚಿರತೆಯ ಮಲದ (ಲದ್ದಿ) ಮಾದರಿ ಸಿಕ್ಕಿದೆ. ಇದೂ ಒಂದೇ ಚಿರತೆಯದ್ದಾ ಅಥವಾ ಬೇರೆ ಬೇರೆ ಚಿರತೆಯದ್ದಾ ಎಂಬುದರ ಬಗ್ಗೆ ನಾವು ಖಾತ್ರಿಪಡಿಸಿಕೊಳ್ಳಬೇಕಿದೆ. ಅದಕ್ಕಾಗಿ ಸಿಕ್ಕಿರುವ ಮಲದ ಮಾದರಿಯನ್ನು ಹೈದರಾಬಾದ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಚಿರತೆ ಸಿಗುವವರೆಗೂ ಹುಬ್ಬಳ್ಳಿಯಲ್ಲಿ ಹಾಗೂ ಕವಲಗೇರಿಯಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್‌ ಕ್ಷೀರಸಾಗರ  ಸ್ಪಷ್ಟಪಡಿಸಿದ್ದಾರೆ.

ಡಿಸಿ ಭೇಟಿ, ಪರಿಶೀಲನೆ: ಚಿರತೆ ಕಂಡು ಬಂದಿರುವ ತಾಲೂಕಿನ ಕವಲಗೇರಿ ಗ್ರಾಮಕ್ಕೆ ಡಿಸಿ ನಿತೇಶ ಪಾಟೀಲ ಭೇಟಿ ನೀಡಿ, ಕಾರ್ಯಾಚರಣೆ ಪರಿಶೀಲಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳಿಂದ ಕೂಬಿಂಗ್‌ ಕಾರ್ಯ ಕುರಿತು ಮಾಹಿತಿ ಪಡೆದ ನಂತರ ಮಾತನಾಡಿದ ಅವರು, ಚಿರತೆ ಪತ್ತೆ ಮಾಡಿ, ಸೆರೆ ಹಿಡಿಯುವ ಕಾರ್ಯ ತೀವ್ರಗೊಳಿಸಲಾಗುವುದು. ಗ್ರಾಮಸ್ಥರು ಸಹಕಾರ ನೀಡಬೇಕು. ಜಿಲ್ಲಾಡಳಿತದಿಂದ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದೆಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಎಸಿ ಡಾ|ಗೋಪಾಲಕೃಷ್ಣ ಬಿ., ಪ್ರೊಬೇಷನರಿ ಐಎಎಸ್‌ ಅಧಿಕಾರಿ ಮಾಧವಗಿತ್ತೆ, ಉಪ ಅರಣ್ಯ ಸಂರಕ್ಷಣಾ ಧಿಕಾರಿ ಯಶಪಾಲ್‌ ಕ್ಷೀರಸಾಗರ, ತಹಶೀಲ್ದಾರ್‌ ಡಾ|ಸಂತೋಷ ಬಿರಾದರ, ಅಮ್ಮಿನಭಾವಿ ಕಂದಾಯ ನಿರೀಕ್ಷಕ ರಮೇಶ ಬಂಡಿ, ಗ್ರಾಮಲೆಕ್ಕಾ ಧಿಕಾರಿ ಚೇತನ, ಕವಲಗೇರಿ ಗ್ರಾಪಂ ಸದಸ್ಯ ಮುತ್ತು ಇಂಚಲ ಸೇರಿದಂತೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next