ಹುಬ್ಬಳ್ಳಿ: ನೃಪತುಂಗ ಬೆಟ್ಟ ಪ್ರದೇಶಕ್ಕೆ ಚಿರತೆ ಬಂದಿದೆ ಎಂಬ ಸುದ್ದಿ ನಿಜವಾಗಿದೆ. ಶನಿವಾರ ರಾತ್ರಿ ರಾಜನಗರದ ಕೇಂದ್ರೀಯ ವಿದ್ಯಾಲಯ ನಂ. 1ರ ಪ್ರಾಂಗಣದಲ್ಲಿ ಪ್ರತ್ಯಕ್ಷವಾಗಿದ್ದು, ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.
ಶನಿವಾರ ರಾತ್ರಿ 8:30 ಗಂಟೆ ಸುಮಾರಿಗೆ ಚಿರತೆಯು ವಿದ್ಯಾಲಯದ ಭದ್ರತಾ ಸಿಬ್ಬಂದಿಗೆ ಮೊದಲು ಕಾಣಿಸಿಕೊಂಡಿದೆ. ಅವರು ಪ್ರಾಂಶುಪಾಲರಿಗೆ ತಿಳಿಸಿದಾಗ ಅವರು ಸಹ ಅದನ್ನು ನೋಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿ ಚಿರತೆ ಸೆರೆ ಹಿಡಿಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೋನ್ ಸಹ ತರಲಾಗಿದೆ ಎಂದು ಅರಣ್ಯಾಧಿಕಾರಿ “ಉದಯವಾಣಿ’ಗೆ ತಿಳಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸುಳಿವು ಪತ್ತೆಗಾಗಿ ಬೆಟ್ಟದಲ್ಲಿ ಎರಡು ಸಿಸಿ ಕ್ಯಾಮರಾ ಅಳವಡಿಸಿದ್ದರು. ಆದರೆ ಅದರಲ್ಲಿ ಸೆರೆಯಾದ ದೃಶ್ಯಗಳಲ್ಲಿ ನೂರಾರು ನವಿಲುಗಳು ಓಡಾಡಿರುವುದು ಮಾತ್ರ ಕಂಡುಬಂದಿತ್ತು. ಚಿರತೆ ಇರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಚಿರತೆ ಸೆರೆ ಹಿಡಿಯುವ ಸಲುವಾಗಿ ಬೆಟ್ಟದ ಬಳಿ ಎರಡು ಬೋನ್ ಇಡಲಾಗಿತ್ತು. ಅದರಲ್ಲಿ ಒಂದು ಬೋನ್‌ನಲ್ಲಿಟ್ಟಿದ್ದ ಚಿಕನ್ ತಿನ್ನಲು ಹೋಗಿ ನಾಯಿ ಸಿಕ್ಕಿಬಿದ್ದಿತ್ತು. ಚಿರತೆಯು ನಾಯಿ, ದನ ಕೊಂದ ಬಗ್ಗೆ ಯಾವುದೇ ಕುರುಹು ಸಹ ದೊರೆತಿರಲಿಲ್ಲ.
ಅರಣ್ಯ ಇಲಾಖೆಯವರು ಬೆಟ್ಟದ ಸುತ್ತಲಿನ ಪ್ರದೇಶದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸಿದ್ದರು. ಜೊತೆಗೆ ಚಿರತೆ ಕಂಡುಬಂದಲ್ಲಿ ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮೊಬೈಲ್ ಸಂಖ್ಯೆಗಳುಳ್ಳ ಸಂದೇಶಗಳನ್ನು ವಾಟ್ಸ್‌ಅಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಜನನಿಬಿಡ ಪ್ರದೇಶದಲ್ಲಿ ಹಲವು ದಶಕಗಳ ನಂತರ ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ತೀವ್ರ ಆತಂಕ, ಭಯ ಹುಟ್ಟಿಸಿದೆ. ಈ ಚಿರತೆ ಅಂಚಟಗೇರಿ ಬಳಿ ಕಾಣಿಸಿಕೊಂಡಿಧ್ದೋ ಅಥವಾ ಬೇರೆಯದೋ ಎಂಬುದು ಸ್ಪಷ್ಟವಾಗಬೇಕಿದೆ.