Advertisement
ಮರಕ್ಕೆ ಅಮ್ಮನ ಸೀರೆಯನ್ನು ಕಟ್ಟಿ ಜೋಕಾಲಿ ಮಾಡಿಕೊಂಡು ತೂಗುತ್ತಿದ್ದೆವು. ಇವನ್ನೆಲ್ಲ ಆಡಿ ಮನೆಗೆ ಐದು-ಆರು ಗಂಟೆಗೆ ಹಿಂದಿರುಗುತ್ತಿದ್ದೆವು. ಅಪ್ಪ-ಅಮ್ಮ-ಅಜ್ಜಿ ಎಲ್ಲರೂ ಸಹ ಮನೆಗೆ ಬಂದ ತತ್‌ಕ್ಷಣ “ಇದೇನು ಇಷ್ಟು ಬಟ್ಟೆ ಮಣ್ಣು ಮಾಡಿಕೊಂಡು ಬಂದಿದ್ದೀಯಾ’ ಎಂದು ಬೈಯುತ್ತಿದ್ದರು. ಆದರೂ ಈ ಆಟಗಳಿಂದ ಏನೋ ಒಂಥರಾ ಸಂತೋಷ ಸಿಗುತ್ತಿತ್ತು. ಆದರೆ, ಈಗಿನ ಚಿಕ್ಕ ಚಿಕ್ಕ ಹಳ್ಳಿ ಮಕ್ಕಳು ಹೊರಗಡೆ ಹೋಗುವುದೇ ಕಮ್ಮಿ. ಕರೆಂಟ್ ಇದ್ದರೆ ಟಿ. ವಿ. ನೋಡುತ್ತಾರೆ. ಕರೆಂಟ್ ಇಲ್ಲ ಎಂದರೆ ಮೊಬೈಲ್‌ನಲ್ಲಿ ಗೇಮ್ಸ್ ಆಡ್ತಾರೆ. ಕೆಲವು ಸಲ ಕರೆಂಟ್ ಇದ್ರೂ ಸಹ ಕೈಯಲ್ಲೊಂದು ಮೊಬೈಲ್ ಇರುತ್ತೆ. ಟಿ.ವಿ. ಇದ್ರೂ ಅದರ ಪಾಡಿಗೆ ಅದು ಚಾಲೂ ಇರುತ್ತದೆ. ಮಕ್ಕಳು ಇವರ ಪಾಡಿಗೆ ಇವ್ರು ಮೊಬೈಲ್‌ನಲ್ಲಿ ಗೇಮ್ಸ್ ಆಡ್ತಾನೇ ಇರುತ್ತಾರೆ. “ಹೊರಗಡೆ ಹೋಗುವ ಬನ್ನಿ’ ಎಂದರೆ, “ಇಲ್ಲ ಸ್ವಲ್ಪ ಕೆಲಸ ಇದೆ’ ಎಂದು ಹೇಳ್ತಾರೆ. ಈ ಆಟಗಳ ಹೆಸರನ್ನೆಲ್ಲಾ ಹೇಳಿ ಆಟ ಆಡುವ ಬನ್ನಿ ಎಂದು ಹೇಳಿದರೆ, “ನಾನು ಬರುವುದಿಲ್ಲಪ್ಪಾ… ಅಪ್ಪ ಅಮ್ಮ ಬೈತಾರೆ ಬಟ್ಟೆ ಮಣ್ಣಾಗುತ್ತದೆ’ ಎಂದು ಹೇಳಿ ದೊಡ್ಡ ದೊಡ್ಡ ಮೊಬೈಲ್ ಹಿಡಿದು ಗೇಮ್ಸ್ ಆಡ್ತಾ ಇರ್ತಾರೆ. “ರಜೆ ಬಂತು, ಸ್ವಲ್ಪ ದಿನ ನೆಂಟರ ಮನೆಯಲ್ಲಿ ಹೋಗಿ ಇರ್ತೀಯಾ’ ಎಂದರೆ, “ಇಲ್ಲಪ್ಪಾ ಅಲ್ಲಿ ಆಟ ಆಡುವುದಕ್ಕೆ ಯಾರೂ ಮೊಬೈಲ್ ಕೊಡುವುದಿಲ್ಲ’ ಎಂದು ಹೋಗುವುದೇ ಇಲ್ಲ. ಅಪ್ಪಿತಪ್ಪಿ ಹೊರಟರೂ ಸಹ ಅಪ್ಪ-ಅಮ್ಮ ಜೊತೆಗೆ ಇರಲೇಬೇಕು. ಕಾರಣ, ಮಗು ಕೇಳಿದಾಗಲೆಲ್ಲ ಮೊಬೈಲ್ ಕೊಟ್ಟು ಕೊಟ್ಟು ಮಕ್ಕಳನ್ನು ಮುದ್ದಾಗಿ ಸಾಕಿರುವುದು. ಆಗ ಮಕ್ಕಳು ಅಪ್ಪ ತೋಟದ ಕೆಲಸ ಮಾಡಿ ಮನೆಗೆ ಬಂದ ತಕ್ಷಣ, “ಅಪ್ಪಾ ಹೊರಗಡೆ ಹೋಗಿ ಆಟ ಆಡಿ ಬರುತ್ತೇನೆ’ ಎಂದು ಕೇಳುತ್ತಿದ್ದರು. ಈಗಿನ ಮಗು “ಅಪ್ಪಾ ಮೊಬೈಲ್ ಎಲ್ಲಿಟ್ಟಿದ್ದೀರಾ, ಸ್ವಲ್ಪ ಕೊಡಿ ಗೇಮ್ಸ್ ಆಡಿ ಕೊಡುತ್ತೇನೆ’ ಎಂದು ಕೇಳುತ್ತದೆ.
ದ್ವಿತೀಯ ಬಿ. ಎ., ಎಂಜಿಎಂ ಕಾಲೇಜು, ಉಡುಪಿ