ದೊಡ್ಡಬಳ್ಳಾಪುರ: ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀಡಲಾದ ಚೆಕ್ ಅನ್ನು ತಿದ್ದಿರುವ ಆರೋಪ ಎದುರಿಸುತ್ತಿರುವ ಚಂದ್ರಶೇಖರ್ ತಮ್ಮ ಮೇಲಿನ ಆರೋಪ ಅಲ್ಲಗೆಳೆದಿದ್ದಾರೆ. ನಾನು ಯಾವುದೇ ಚೆಕ್ ತಿದ್ದಿಲ್ಲ. ಆರೋಪದಲ್ಲಿ ಹುರುಳಿಲ್ಲ ಎಂದು ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದ್ದೇನೆ ಎಂದು ಎಂ.ಸಿ.ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ವ್ಯವಹಾರದ ಕುರಿತಂತೆ ನೀಡಲಾದ ಚೆಕ್ ಹಣ ಲಪಟಾಯಿಸಲು ಆಂಜಿನಪ್ಪನವರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿದ್ದಾರೆ.
ಆಂಜಿನಪ್ಪನವರು ಹೇಳಿದ ರೀತಿ 5 ಲಕ್ಷ ಮೌಲ್ಯದ ಎರಡು ಚೆಕ್ಕನ್ನು ಕೊಟ್ಟಿದ್ದರು. ಅದನ್ನು ನಾನು 5 ಲಕ್ಷದ ಪಕ್ಕದಲ್ಲಿ 6 ಸೇರಿಸಿ 65 ಲಕ್ಷ ಎಂದು ತಿದ್ದಿರುವುದಾಗಿ ದೂರು ನೀಡಿರುತ್ತಾರೆ. ಆದರೇ ನಾನು ಚೆಕ್ ಹಾಕಿರುವುದು ಏ.6ರಂದು. ಆಂಜಿನಪ್ಪ ಆರೋಪ ಮಾಡಿರುವುದು ಏ.3ರಂದು. ಸದರಿ ಚೆಕ್ಕಿನ ವಿಷಯವು ನೆಗೋಷಿಯಬಲ್ ಇನ್ಸ್‌ಟ್ರಾಮೆಂಟ್ ಆ್ಯಕ್ಟ್‌ನ ಅಡಿಯಲ್ಲಿ ಬರುತ್ತದೆ. ನಾನು ತಿದ್ದುವ ಹಾಗಿದ್ದರೇ ಚೆಕ್‌ನಲ್ಲಿ ಇಂಗ್ಲಿಷ್‌ನ ಪದಗಳಲ್ಲಿ ಬರೆದಿರುವ ಅಕ್ಷರಗಳನ್ನು ಯಾಕೆ ತಿದ್ದಿಲ್ಲ ಮತ್ತು ಇವರಿಗೆ ಏ.3ರಲ್ಲಿ ಚೆಕ್ ಮಾಹಿತಿ ತಿಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ನಾನು ದಲ್ಲಾಳಿಯಲ್ಲ: ನಾನು ಈ ಪ್ರಕರಣದಲ್ಲಿ ಮಧ್ಯವರ್ತಿಯಲ್ಲ. ದೊಡ್ಡಬಳ್ಳಾಪುರ ತಾಲೂಕು ದರ್ಗಾಪುರ ಗ್ರಾಮದ ಸರ್ವೆ ನಂಬರ್ 32 ರ ಜಮೀನಿಗೆ 2015 ರಲ್ಲಿ, ಅಗ್ರಿಮೆಂಟ್ ಹೋಲ್ಡರ್ ಆಗಿದ್ದೇನೆ. ಜಮೀನಿಗೆ ಸಂಬಂಧಿಸಿದಂತೆ ಆಂಜಿನಪ್ಪನವರು ಒಂದು ಕೋಟಿ ರೂ.ಗೆ ಪಡೆದು ಏ.6 ರಂದು ಆಂಜಿನಪ್ಪ ಮತ್ತು ಅವರ ಮಗ ಲೋಕೇಶ್ ಅವರುಗಳು 65 ಲಕ್ಷ ರೂ.ಗಳಿಗೆ ಹೊಸ ಚೆಕ್ ಅನ್ನು ಕೊಟ್ಟಿದ್ದರು. ಈ ಚೆಕ್ ದೊಡ್ಡಬಳ್ಳಾಪುರ ಶಾಖೆಯಲ್ಲೂ ಡ್ರಾ ಮಾಡಲು ಹೋದಾಗ ಆಂಜಿನಪ್ಪ ಖಾತೆಯಲ್ಲಿ ಹಣವಿಲ್ಲ. ಯಲಹಂಕ ಶಾಖೆಗೆ ಭೇಟಿ ನೀಡಿ ಎಂದಿದ್ದಾರೆ. ಅದರಂತೆ ಯಲಹಂಕ ಬ್ಯಾಂಕ್ ಆಫ್ ಬರೋಡಗೆ ಭೇಟಿ ನೀಡಿ ಡ್ರಾ ಮಾಡಲು ಹೋಗಿದ್ದೆ. ಅಲ್ಲಿಯೂ ಖಾತೆಯಲ್ಲಿ ಹಣವಿಲ್ಲ ಎಂದಿದ್ದಾರೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಯಾವುದೇ ಹಿಂಬರಹ ನೀಡದೇ ಸತ್ತಾಯಿಸಿದ್ದಾರೆ ಎಂದು ದೂರಿದರು.
ನನಗೆ ಹಣವನ್ನು ಕೊಡುವುದಾಗಿ ನಂಬಿಸಿ ಜಮೀನನ್ನು ಕೊಂಡುಕೊಂಡು ಯಾವುದೇ ಹಣ ಕೊಡದ ಕಾರಣ ಅಂತಿಮವಾಗಿ ಕೋರ್ಟ್ ಆದೇಶದ ಮೇರೆಗೆ ಆಂಜಿನಪ್ಪ, ಲೋಕೇಶ್, ಬ್ಯಾಂಕ್ ಆಫ್ ಬರೋಡಾ ದೊಡ್ಡಬಳ್ಳಾಪುರ ಶಾಖೆಯ ಹಾಗೂ ಯಲಹಂಕ ಬ್ಯಾಂಕ್ ಆಫ್ ಬರೋಡಾ ಶಾಖೆಯ ವ್ಯವಸ್ಥಾಪಕರ ವಿರುದ್ಧ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಇದನ್ನು ಮರೆ ಮಾಚಿ ಚೆಕ್ ತಿದ್ದಿರುವೆ ಎಂದು ದೂರು ನೀಡಿ ನನ್ನ ಮಾನಹಾನಿ ಮಾಡಿದ್ದು, ಈ ಬಗ್ಗೆಯೂ ಕಾನೂನು ಕ್ರಮ ಜರುಗಿಸಲು ದೂರು ನೀಡುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರೇಮ್ ಕುಮಾರ್ ಇದ್ದರು. ಒಟ್ಟಿನಲ್ಲಿ ಆರೋಪ-ಪ್ರತ್ಯಾರೋಪ ಏನೇ ಇರಲಿ ಸೂಕ್ತ ತನಿಖೆಯಿಂದ ಸತ್ಯ ಹೊರಬೇಕಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ.