Advertisement

ವಾಹನ ತಪಾಸಣೆ ಕೇಂದ್ರ ಗುಂಡ್ಮಿ ಟೋಲ್‌ ಗೇಟ್‌ ಗೆ ಸ್ಥಳಾಂತರ

09:20 AM Apr 07, 2018 | Team Udayavani |

ತೆಕ್ಕಟ್ಟೆ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ತೆಕ್ಕಟ್ಟೆ ರಾ.ಹೆ. 66ರ ಪ್ರಮುಖ ಭಾಗದಲ್ಲಿ ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಕೇಂದ್ರ ತೆರೆಯಲಾಗಿತ್ತು. ಇದನ್ನು ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ತರಾತುರಿಯಲ್ಲಿ ಗುಂಡ್ಮಿ ಟೋಲ್‌ ಗೇಟ್‌ ಗೆ ಎ. 6ರಂದು ಸ್ಥಳಾಂತರಿಸಲಾಗಿದೆ. ವಾಹನ ತಪಾಸಣೆ ಕೇಂದ್ರವು ಮಾ. 27ರಂದು ಪ್ರಾರಂಭಗೊಂಡಿತ್ತು. ತಪಾಸಣೆಯ ಸಂದರ್ಭದಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್‌ ಜಾಮ್‌ ಹಾಗೂ ನಿರಂತರವಾಗಿ ಅಪಘಾತಗಳು ಸಂಭವಿಸಿವೆ. ಇಲ್ಲಿ ರಸ್ತೆ ವಿಸ್ತರಣೆಯೂ ಪ್ರಗತಿಯಲ್ಲಿದ್ದು, ಸಂಚಾರದ ಬಗ್ಗೆ ಗೊಂದಲ ಉಂಟಾಗುತ್ತಿದೆ. ತಪಾಸಣೆ ಕೇಂದ್ರದಿಂದ ಸಮಸ್ಯೆ ಉಂಟಾಗುತ್ತಿರುವುದರ ಬಗ್ಗೆ ಸಾರ್ವಜನಿಕರು ಹಲವು ದಿನಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಮಾಧ್ಯಮಗಳಲ್ಲೂ ಇಲ್ಲಿ ಆಗುತ್ತಿರುವ ಸಮಸ್ಯೆ- ಅಪಘಾತಗಳ ಬಗ್ಗೆ ವರದಿಗಳು ಪ್ರಕಟಗೊಂಡಿದ್ದವು.

Advertisement

ವಾಹನ ತಪಾಸಣೆ ಕೇಂದ್ರದಿಂದ ಸಂಭವಿಸಿದ ಅಪಘಾತಗಳು:
– ರಾ.ಹೆ. 66ರಲ್ಲಿ ವಾಹನ ತಪಾಸಣೆಯ ಸಂದರ್ಭದಲ್ಲಿ ನಿಂತ ಕಾರಿಗೆ ಚಲಿಸುತ್ತಿದ್ದ ಲಾರಿಯು ಢಿಕ್ಕಿಯಾಗಿ ಜಖಂಗೊಂಡ ಘಟನೆ ಎ. 2ರಂದು ಸಂಭವಿಸಿತ್ತು.

– ತೆಕ್ಕಟ್ಟೆ ಜಂಕ್ಷನ್‌ನಲ್ಲಿ ವಾಹನ ತಪಾಸಣೆಯ ಸಂದರ್ಭದಲ್ಲಿ ಸರಣಿ ಆಪಘಾತ ಸಂಭವಿಸಿ ನಾಲ್ಕು ವಾಹನಗಳು ಜಖಂಗೊಂಡ ಘಟನೆ ಎ. 4ರಂದು ಸಂಭವಿಸಿತ್ತು.

– ಎ. 5ರಂದು ಚಲಿಸುತ್ತಿದ್ದ ಲಾರಿ ನಿಂತ ಹುಂಡೈ ಐ 20 ಕಾರಿಗೆ ಢಿಕ್ಕಿಯಾಗಿ ಜಖಂಗೊಂಡಿದೆ.

ಓರ್ವನ ಮೇಲೆ ಪ್ರಕರಣ ದಾಖಲು
ಎ. 5ರಂದು ತೆಕ್ಕಟ್ಟೆ ರಾ.ಹೆ. 66ರಲ್ಲಿ ಟ್ರಾಫಿಕ್‌ ಜಾಮ್‌ ಆಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡ ಸತೀಶ್‌ ಪ್ರಭು ಎನ್ನುವವರು ತನ್ನ ವಾಹನವನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಕರ್ತವ್ಯ ನಿರತ ಶಸ್ತ್ರಸಜ್ಜಿತ ಸಿ.ಆರ್‌.ಪಿ.ಎಫ್‌. ನಾಲ್ವರು ಯೋಧರು ಹಾಗೂ ಪೊಲೀಸ್‌ ಸಿಬಂದಿಯಲ್ಲಿ ಮಾತುಕತೆಗೆ ಮುಂದಾದಾಗ ತತ್‌ಕ್ಷಣವೇ ಕೋಟ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಿದ ಘಟನೆ ಕೂಡ ಸಂಭವಿಸಿದೆ.

Advertisement

ಸಿ.ಆರ್‌.ಪಿ.ಎಫ್‌.ನ ಶಸ್ತ್ರಸಜ್ಜಿತ ನಾಲ್ವರು ಯೋಧರ ಸಹಿತ ಪೊಲೀಸ್‌ ಸಿಬಂದಿಗೆ ವಾಹನ ತಪಾಸಣೆಗೈಯಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಆದೇಶಿಸಿದ ಹಿನ್ನೆಲೆಯಲ್ಲಿ ತಪಾಸಣೆ ಕೇಂದ್ರವನ್ನು ಗುಂಡ್ಮಿ ಟೋಲ್‌ ಗೇಟ್‌ ಗೆ ಸ್ಥಳಾಂತರಿಸಲಾಗಿದೆ.
– ಸಂತೋಷ್‌ ಕಾಯ್ಕಿಣಿ, ಠಾಣಾಧಿಕಾರಿಗಳು, ಕೋಟ ಪೊಲೀಸ್‌ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next