ಬೆಂಗಳೂರು: ವಿವಿಧ ಆಮಿಷವೊಡ್ಡಿ ಸರ್ಕಾರೇತರ ಸಂಸ್ಥೆಗಳು, ವೃದ್ಧರು, ಅಂಗವಿಕಲರು ಹಾಗೂ ರೈತರಿಗೆ ವಂಚಿಸುತ್ತಿದ್ದ ಅಂತಾರಾಜ್ಯ ವಂಚಕನನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಪೊಲೀಸರು ಬಂಧಿಸಿದ್ದಾರೆ.
ಕಮ್ಮಸಂದ್ರ ನಿವಾಸಿ ಪ್ರತಾಪ್ ಸಿಂಹ (39) ಬಂಧಿತ. ಆರೋಪಿ ನಗರದಲ್ಲಿ ಸುಮಾರು 18ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆ(ಎನ್‌ಜಿಓ)ಗಳಿಗೆ 100ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗ್ಳನ್ನು, ಖಾಸಗಿ ಕಂಪನಿಗಳು ನೀಡುವ ಸಿಎಸ್‌ಆರ್ ಫಂಡ್ ಮತ್ತು ಪೆಟ್ರೋ ಕಂಪನಿಗಳಿಂದ 50 ಲಕ್ಷ ರೂ.ವರೆಗೆ ಸಹಾಯ ಧನ ಕೊಡಿಸು ವುದಾಗಿ ನಂಬಿಸಿ ವಂಚಿಸುತ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಸ್‌ಎಸ್‌ಎಲ್‌ಸಿ ಓದಿರುವ ಪ್ರತಾಪ್ ಸಿಂಹ ಕನ್ನಡ, ಇಂಗ್ಲಿಷ್, ಹಿಂದಿ ಸೇರಿ ನಾಲ್ಕೈದು ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾನೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ, ಈ ಹಿಂದೆ ಪೀಣ್ಯದಲ್ಲಿ ಅಂಧರು, ವೃದ್ಧರ ಮತ್ತು ಅಂಗವಿಕರರನ್ನು ಪೋಷಿಸುವ 18 ಎನ್‌ಜಿಓ ಕಂಪನಿಗಳಿಗೆ ಅತೀ ಕಡಿಮೆ ಮೌಲ್ಯದಲ್ಲಿ ಲ್ಯಾಪ್‌ಟಾಪ್ ಗಳನ್ನು ಕೊಡಿಸುತ್ತೇನೆ. ಅದಕ್ಕೆ ಮುಂಗಡವಾಗಿ 2.53 ಲಕ್ಷ ರೂ. ಪಡೆದುಕೊಂಡು ವಂಚಿಸಿದ್ದಾನೆ. ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಗೆಯೇ ಹಲಸೂರಿನಲ್ಲಿ ವೃದ್ಧರೊಬ್ಬರಿಗೆ ವಾಯುವಿಹಾರ ಸಂದರ್ಭದಲ್ಲಿ ಪರಿಚಯಿಸಿಕೊಂಡು ಅವರಿಗೂ ಲ್ಯಾಪ್‌ಟಾಪ್ ಕೊಡಿಸುವುದಾಗಿ ವಂಚಿಸಿದ್ದಾನೆ. ಈ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ, ನಗರದ ಕೆಲ ಸಾರ್ವಜನಿಕರಿಗೆ ಪ್ರತಿಷ್ಠಿತ ಕಂಪನಿಯ ಲ್ಯಾಪ್‌ಟಾಪ್‌ಗ್ಳನ್ನು ನೇರವಾಗಿ ಕಂಪನಿ ಹಾಗೂ ಕಾರ್ಖಾನೆ ಗಳಿಂದ ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ಮುಂಗಡ ಹಣ ಪಡೆದುಕೊಂಡು, ತನ್ನ ಸ್ವಂತ ಖರ್ಚಿಗೆ ಬಳಸಿ ಕೊಂಡಿದ್ದಾನೆ. ಹೀಗಾಗಿ ಹೆಚ್ಚಿನ ತನಿಖೆ ನಡೆಸಿದ ಸಿಸಿಬಿ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ಆರೋಪಿ ಯನ್ನು ಬಂಧಿಸಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ರೈತರಿಗೆ ವಂಚನೆ: ಮಂಡ್ಯ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ವಾಸಿಸುವ ರೈತರನ್ನು ತಾನೂ ಅಂತಾರಾಜ್ಯ ವ್ಯಾಪಾರಿ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ಜಮೀನು ಅಭಿವೃದ್ಧಿ ಪಡಿಸುತ್ತೇನೆ, ಸರ್ಕಾರದ ಯೋಜ ನೆಗಳ ಮೂಲಕ ಸಬ್ಸಿಡಿ ಕೊಡಿಸುತ್ತೇನೆ, ತಾವು ಬೆಳೆದ ಎಳನೀರು, ತೆಂಗಿನ ಕಾಯಿಗಳನ್ನು ಹೊರರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಿಸುತ್ತೇನೆ ಎಂದು ನಂಬಿಸುತ್ತಿದ್ದ. ಅದಕ್ಕೆ ಮುಂಗಡ ಹಣ ಪಡೆಯುತ್ತಿದ್ದ. ಬಳಿಕ ದೆಹಲಿ, ಲಕ್ನೋ, ಆಗ್ರಾ, ಹಿಮಾಚಲ ಪ್ರದೇಶಗಳಲ್ಲಿ ವಾಸಿಸುವ ವ್ಯಾಪಾರಿಗಳನ್ನು ನಂಬಿಸಿ ಎಳನೀರು ವ್ಯವಹಾರಕ್ಕೆ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತೇನೆಂದು ನಂಬಿಸಿದ್ದಾನೆ. ಅವರಂದಲೂ ಲಕ್ಷಾಂತರ ರೂ. ಪಡೆದು ವಂಚಿಸಿದ್ದಾನೆ ಎಂದು ಹೇಳಿದರು.
ದೇಶಾದ್ಯಂತ ಚೆಕ್ ಬೌನ್ಸ್ ಕೇಸ್: ಇದೇ ರೀತಿ ಸುಮಾರು 8ರಿಂದ 9 ವರ್ಷಗಳಿಂದ ಸಾರ್ವಜನಿಕರನ್ನು ನಂಬಿಸಿ ಅಂದಾಜು 50 ಲಕ್ಷ ರೂ. ಪಡೆದು ವಂಚಿಸಿದ್ದು, ಮೂರು ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಈತನ ವಿರುದ್ಧ ಬೆಂಗಳೂರು, ಹೊರ ರಾಜ್ಯಗಳಲ್ಲಿ ಹತ್ತಾರು ಚೆಕ್‌ಬೌನ್ಸ್ ಕೇಸ್‌ಗಳನ್ನು ದಾಖಲಿಸಲಾಗಿತ್ತು ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.
ದೆಹಲಿಯಲ್ಲಿ ರಾಜಕೀಯ ನಾಯಕ!: ಕೆಲ ವರ್ಷಗಳ ಹಿಂದೆ ದೆಹಲಿಗೆ ಹೋಗಿದ್ದ ಆರೋಪಿ ಅಲ್ಲಿಯೇ ಒಂದು ವರ್ಷ ವಾಸವಾಗಿದ್ದ. ಈ ಸಂದರ್ಭದಲ್ಲಿ ಯುವತಿಯೊಬ್ಬಳಿಗೆ ತಾನು ಕರ್ನಾಟಕ ಹಾಗೂ ದೆಹಲಿಯ ವಿವಿಧ ರಾಜಕೀಯ ಮುಖಂಡರ ಆಪ್ತನಾಗಿದ್ದು, ಸ್ಥಳೀಯವಾಗಿ ರಾಜಕೀಯ ಮುಖಂಡನಾಗಿದ್ದಾನೆಂದು ಸುಳ್ಳು ಹೇಳಿದ್ದಾನೆ. ಅದನ್ನು ನಂಬಿದ ಆಕೆ ಜತೆ ಆತ್ಮೀಯವಾಗಿ ಕೆಲ ತಿಂಗಳು ಕಾಲ ಕಳೆದಿದ್ದಾನೆ. ಬಳಿಕ ಆಕೆಯ ವಿಶ್ವಾಸಗಳಿಸಿ, ಆಕೆಯಂದಲೂ 6 ಲಕ್ಷ ರೂ. ವಸೂಲಿ ಮಾಡಿ ಪರಾರಿಯಾಗಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.