ಬೆಳ್ತಂಗಡಿ: ಬಿಸಿಯೂಟ ಯೋಜನೆಯಲ್ಲಿ ದುಡಿಯುತ್ತಿರುವ ನೌಕರರಿಗೆ ಪಿಂಚಣಿ ನೀಡದೆ ಸರಕಾರ ವಂಚಿಸುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ದೂರಿದರು.
ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಶಾಸಕರ ಕಚೇರಿ ಚಲೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಸಕ ಹರೀಶ್ ಪೂಂಜ ಅವರಿಗೆ ನಿಜವಾಗಿಯೂ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಬಿಸಿಯೂಟ ನೌಕರರನ್ನು ಕೈ ಬಿಡುವ ರಾಜ್ಯ ಸರಕಾರದ ತೀರ್ಮಾನವನ್ನು ವಿರೋಧಿಸಲಿ ಎಂದರು.
ಸಿಐಟಿಯು ತಾಲೂಕು ಅಧ್ಯಕ್ಷ, ನ್ಯಾಯವಾದಿ ಶಿವಕುಮಾರ್ ಎಸ್. ಎಂ.ಮಾತನಾಡಿ, ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರಿ ಯಾವುದೇ ಸವಲತ್ತುಗಳನ್ನು ನೀಡದೆ ಕೇವಲ ಗೌರವಧನ ನೀಡುವುದು ಯಾವ ಸೀಮೆಯ ಅಚ್ಛೇ ದಿನ್ ಎಂದು ಪ್ರಶ್ನಿಸಿದರು.
ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಅಧ್ಯಕ್ಷೆ ಲಲಿತಾ ಮದ್ದಡ್ಕ ಮಾತನಾಡಿದರು. ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ವಸಂತ ನಡ ವಂದಿಸಿದರು.
ಸಿಐಟಿಯು ಉಪಾಧ್ಯಕ್ಷೆ ಸುಕನ್ಯಾ ಹರಿದಾಸ್, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ವನಿತಾ ಮರೋಡಿ, ಹೇಮಾವತಿ ತುರ್ಕಳಿಕೆ, ಶಶಿಕಲಾ ಬಳೆಂಜ, ಯಶೋದಾ ಮಡಂತ್ಯಾರು, ಸಂಪದ ಮಡಂತ್ಯಾರು, ಸುಶೀಲಾ ಕಾರಿಂಜ, ತಿಮ್ಮಕ್ಕ ಪೆರಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.