ಒಂದು ಕೊಕ್ಕರೆ, ಕೊಳಗಳಲ್ಲಿ ಮೀನನ್ನು ಹಿಡಿದು ತಿನ್ನುತ್ತಿತ್ತು. ಆದರೆ ವಯಸ್ಸಾದ ಮೇಲೆ, ಅದರ ಮೈಯಲ್ಲಿ ಶಕ್ತಿ ಉಡುಗಿ, ಮೀನನ್ನು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಏನು ಮಾಡಬೇಕೆಂದು ತೋರದೆ ಚಿಂತಿಸುತ್ತಾ ಕೊಳದ ಬಳಿ ಕೂತಿದ್ದಾಗ, ಅದನ್ನು ಏಡಿಯೊಂದು ನೋಡಿತು. “ನೀನ್ಯಾಕೆ ಅಷ್ಟೊಂದು ಚಿಂತಿಸುತ್ತಿದ್ದೀಯಾ?’ ಎಂದು ಏಡಿ ಕೊಕ್ಕರೆಯನ್ನು ಕೇಳಿತು. “ಎಷ್ಟೋ ವರ್ಷಗಳಿಂದ ಈ ಕೊಳದಲ್ಲಿ ಮೀನನ್ನು ಹಿಡಿದು ಹಿಡಿದು ತಿನ್ನುತ್ತಿದ್ದೆ. ಇನ್ನು ಮುಂದೆ ನಾನು ಉಪವಾಸ ಸಾಯಬೇಕೋ ಏನೋ…’ ಎಂದು ದುಃಖ ಪಟ್ಟುಕೊಂಡು ನುಡಿಯಿತು ಕೊಕ್ಕರೆ. “ಅದೇಕೆ ಹಸಿವಿನಿಂದ ಸಾಯಬೇಕು?’ ಎಂದು ಏಡಿ ಕೇಳಿತು. “ಸ್ವಲ್ಪ ಹೊತ್ತಿನ ಹಿಂದೆ ಕೆಲವು ಬೆಸ್ತರು ಇದೇ ದಾರಿಯಲ್ಲಿ ನಡೆದುಹೋದರು. ಅವರು ಆಡಿದ ಮಾತುಗಳು ನನ್ನ ಕಿವಿಗೆ ಬಿದ್ದವು. ಅವರು ನಾಳೆ ಬಂದು ಬಲೆ ಹಾಕಿ ಈ ಕೊಳದಲ್ಲಿರುವ ಎಲ್ಲಾ ಮೀನುಗಳನ್ನೂ ಹಿಡಿದುಕೊಂಡು ಹೋಗುತ್ತಾರಂತೆ. ಆಗ ನನಗೇನು ಉಳಿಯುತ್ತದೆ? ಓ ದೇವರೆ, ನಾನೇನು ಮಾಡಲಿ?’ ಎಂದು ಕೊಕ್ಕರೆ ನಿಟ್ಟುಸಿರುಬಿಟ್ಟಿತು.
ಈ ದುಃಖದ ಸುದ್ದಿಯನ್ನು ಏಡಿ ಮೀನುಗಳಿಗೆ ತಿಳಿಸಿತು. ಅವೆಲ್ಲವೂ ಭಯದಿಂದ ತತ್ತರಿಸಿದವು. ನಮ್ಮನ್ನು ಕಾಪಾಡು, ಎಂದು ಅವು ಕೊಕ್ಕರೆಯನ್ನು ಬೇಡಿಕೊಂಡವು. “ನಾನೊಂದು ಹಕ್ಕಿ, ಅಷ್ಟೆ. ಮನುಷ್ಯರ ಎದುರು ನನ್ನದೇನೂ ನಡೆಯುವುದಿಲ್ಲ. ಆದರೂ ನಿಮಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ. ಇಲ್ಲಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ಕೊಳ ಇದೆ. ನಾನು ನಿಮ್ಮನ್ನು ಅಲ್ಲಿಗೆ ಒಯ್ಯುತ್ತೇನೆ’ ಎಂದಿತು ಹಕ್ಕಿ.
ಪ್ರತಿಯೊಂದು ಮೀನಿಗೂ ಆ ಮತ್ತೂಂದು ಕೊಳಕ್ಕೆ ತಾನು ಮೊದಲು ಹೋಗಬೇಕು ಎಂಬ ಆತುರ. ಆದರೆ, ಕೊಕ್ಕರೆಗೆ ಅವೆಲ್ಲವನ್ನೂ ಒಂದೇ ಬಾರಿ ಕರೆದೊಯ್ಯುವುದು ಸಾಧ್ಯವಿರಲಿಲ್ಲ. ಅದು ಒಂದು ಬಾರಿಗೆ ಒಂದೇ ಮೀನನ್ನು ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡು ದೂರದ ಕಲ್ಲು ಬಂಡೆಯ ಮರೆಗೆ ಹೋಗಿ ತಿಂದುಬಿಡುತ್ತಿತ್ತು. ಮತ್ತೆ ಮರಳಿ ಮತ್ತೂಂದು ಮೀನನ್ನು ಒಯ್ಯತ್ತಿತ್ತು. ಸತ್ತ ಮೀನುಗಳೇನೂ ಸಾಕ್ಷಿ ಹೇಳುವುದ ಕ್ಕಾಗುವುದಿಲ್ಲ ಅಲ್ಲವೇ? ಬದುಕಿರುವ ಮೀನುಗಳಿಗೆ ಪಾಪ, ಸತ್ಯ ಸಂಗತಿ ಏನು ಗೊತ್ತು? ಆ ಮೀನುಗಳಿಗೆ, ಕೊಕ್ಕರೆ ತಮ್ಮನ್ನು ಕಾಪಾಡುತ್ತಿರುವಂತೆ ಕಾಣಿಸಿತು.
ಪ್ರತಿಯೊಂದು ಮೀನೂ ಕೊಕ್ಕರೆಗಾಗಿ ಆತಂಕದಿಂದ ಕಾಯುತ್ತಿತ್ತು. ಹಲವಾರು ಮಿನುಗಳನ್ನು ತಿಂದ ಮೇಲೆ ಕೊಕ್ಕರೆಗೆ ಏಡಿಯನ್ನೇ ತಿನ್ನಬೇಕೆಂಬ ಆಸೆಯಾಯಿತು. ತನ್ನ ಜೊತೆ ಮಾತಾಡಿದ ಏಡಿಯನ್ನೇ ಕರೆದುಕೊಂಡು ದೂರದ ಬಂಡೆಗೆ ಅದನ್ನೂ ಕರೆದೊಯ್ದಿತು. ಏಡಿಗೆ ಅಲ್ಲಿ ಕಾಣಿಸಿದ್ದೇನು? ಬರೀ ಮೀನಿನ ಮೂಳೆಗಳು! ಕೊಕ್ಕರೆಯ ಮೋಸ ಏಡಿಗೆ ತಿಳಿದುಹೋಯಿತು. ಏಡಿ, ಕೊಕ್ಕರೆಯ ಕತ್ತನ್ನು ಕಚ್ಚಿ ಹಿಡಿದು ಎರಡು ತುಂಡು ಮಾಡಿ ಬಿಟ್ಟಿತು.