Advertisement

ಉತ್ತರ ಸಿಗದ ಪ್ರಶ್ನೆಗಳ ಬೆನ್ನಟ್ಟುತ್ತಾ …

10:36 AM Feb 04, 2018 | |

ಆ ಮನೆಯಲ್ಲಿ ಐದು ಜನ ಸಿಕ್ಕಿಬಿದ್ದಿದ್ದಾರೆ. ಬಾಗಿಲು ತೆಗೆಯುವುದಕ್ಕಾಗುತ್ತಿಲ್ಲ. ಹೊರಗೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೊರಹೋದರೂ ಜೋರು ಮಳೆ. ಆ ಮನೆಯಲ್ಲಿರುವವರಿಗೂ, ಹೊರಗಿನವರಿಗೂ ಸಂಪರ್ಕವೇ ಇಲ್ಲ. ಅಲ್ಲೇನಾಗುತ್ತಿದೆ ಅಂತ ಗೊತ್ತಾಗಬೇಕಾದರೆ, ಅಲ್ಲಿರುವ ಸಿಸಿಟಿವಿ ಕ್ಯಾಮೆರಾ ಮಾತ್ರ. ಅದರ ಮೂಲಕ ಅಲ್ಲೇನಾಗುತ್ತಿದೆ ಅಂತ ಹೊರಗಿರುವ ಪೊಲೀಸ್‌ ಅಧಿಕಾರಿಗೆ ಕಾಣಿಸುತ್ತದೆ.

Advertisement

ಆದರೆ, ಅವರೇನು ಮಾತಾಡುತ್ತಿದ್ದಾರೆ ಅಂತ ಕೇಳುವುದಿಲ್ಲ. ಅವನು ಮಾತಾಡುವುದು, ಕೋಣೆಯಲ್ಲಿರುವ ಸ್ಪೀಕರ್‌ ಮೂಲಕ ಒಳಗಿರುವವರಿಗೆ ಕೇಳುತ್ತದೆ. ಆದರೆ, ಹೊರಗಿರುವ ಅವನನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಿರುವಾಗಲೇ ಕೆಲವು ಸೆಕೆಂಡ್‌ಗಳ ಕಾಲ ಕರೆಂಟ್‌ ಹೋಗುತ್ತದೆ. ಕರೆಂಟ್‌ ವಾಪಸ್ಸಾಗುತ್ತಿದ್ದಂತೆ ಒಬ್ಬರು ಸತ್ತು ಬಿದ್ದಿರುತ್ತಾರೆ. ಅದಾಗಿ ಇನ್ನೂ ಸ್ವಲ್ಪ ಹೊತ್ತಿಗೆ ಮತ್ತೆ ಕರೆಂಟ್‌ ಮಾಯ.

ಒಂದೆರೆಡು ನಿಮಿಷಗಳಲ್ಲಿ ಇನ್ನೊಂದು ಹೆಣ … ಇಷ್ಟು ಸಾಕು ಸೀಟ್‌ಗೆ ಒರಗಿ ಕುಳಿತಿರುವವರು ಎದ್ದು ಸೀಟು ತುದಿ ಬರುವುದಕ್ಕೆ. ಹೀಗಿರುವಾಗಲೇ ಪ್ರೇಕ್ಷಕರನ್ನು ನೂರೆಂಟು ಪ್ರಶ್ನೆಗಳು ಆವರಿಸಿಕೊಳ್ಳುತ್ತದೆ. ಇಷ್ಟಕ್ಕೂ ಒಳಗಿರುವವರನ್ನು ಸಾಯಿಸುತ್ತಿರುವವರು ಯಾರು? ಅವರಲ್ಲೇ ಯಾರಾದರೂ ಒಬ್ಬರು ಕೊಲೆ ಮಾಡುತ್ತಿದ್ದಾರಾ? ಅಥವಾ ಅವರಷ್ಟೇ ಅಲ್ಲದೆ ಆ ಮನೆಯಲ್ಲಿ ಇನ್ನಾರಾದರೂ ಇದ್ದಾರಾ?

ಅಥವಾ ಇದೆಲ್ಲಾ ದೆವ್ವದ ಚೇಷ್ಟೆಯಾ? ಅಥವಾ ಆ ಪೊಲೀಸ್‌ ಅಧಿಕಾರಿ ಹೊರಗಿದ್ದುಕೊಂಡೇ ಒಳಗಿರುವವರನ್ನು ಆಟ ಆಡಿಸುತ್ತಿದ್ದಾನಾ? … ಪ್ರಶ್ನೆಗಳು ಒಂದರ ಹಿಂದೊಂದು ಬರುತ್ತದೆ. ಹೀಗೆ ಹೆಜ್ಜೆ ಹೆಜ್ಜೆಗೂ ಕುತೂಹಲ ಕೆರಳಿಸುವ “ಜವ’, ಒಂದು ಹಂತದಲ್ಲಿ ನಿರಾಸೆ ಮೂಡಿಸುತ್ತಾ ಹೋಗುತ್ತದೆ. ಅದಕ್ಕೆ ಕಾರಣ ಚಿತ್ರಕಥೆ ಮತ್ತು ನಿರೂಪಣೆ. ಒಂದೊಳ್ಳೆಯ ಕಥೆ ಹೊಳೆಯುವುದು ದೊಡ್ಡದಲ್ಲ.

ಅದನ್ನು ಬೆಳೆಸಿ ಚಿತ್ರಕಥೆ ಮಾಡಿ, ಚಿತ್ರ ಮಾಡುವುದು ಅಷ್ಟು ಸುಲಭವಲ್ಲ. ಅಭಯ್‌ ಚಂದ್ರ ಎಡವಿರುವುದು ಅದೇ ವಿಷಯದಲ್ಲಿ. ಕಥೆ ಕೇಳುತ್ತಿದ್ದರೆ ಎಂಥವರಿಗೂ ಕುತೂಹಲ ಕಾಡದೆ ಇರದು. ಆದರೆ, ಅದನ್ನು ತೆರೆಯ ಮೇಲೆ ತರುವುದಿದೆಯಲ್ಲಾ ಅದು ನಿಜವಾದ ಸವಾಲು. ಸವಾಲು ಸ್ವೀಕರಿಸುವ ಪ್ರಯತ್ನವನ್ನು ಅಭಯ್‌ ಮಾಡಿದ್ದಾರಾದರೂ, ಅದನ್ನು ಎದುರಿಸುವುದಕ್ಕೆ ಬಹಳ ಕಷ್ಟಪಟ್ಟಿದ್ದಾರೆ ಎಂದರೆ ತಪ್ಪಿಲ್ಲ.

Advertisement

ಕೇಳುವುದಕ್ಕೆ ಚೆನ್ನಾಗಿರುವ ಒಂದು ಕಥೆಯನ್ನೇ, ಅಷ್ಟೇ ಸಮರ್ಥವಾಗಿ ತೋರಿಸುವುದಕ್ಕೆ ಅವರಿಗೆ ಸಾಧ್ಯವಾಗಿಲ್ಲ. ಇಲ್ಲಿ ಹೆಜ್ಜೆಹೆಜ್ಜೆಗೂ ಲಾಜಿಕ್‌ನ ಸಮಸ್ಯೆ ಇದೆ. ಗೊಂದಲಗಳಂತೂ ವಿಪರೀತವಾಗಿದೆ. ಇವೆಲ್ಲಾ ದಾಟಿ ಹೋದರೆ, ಮೇಲೆ ಕೇಳಲಾಗಿರುವ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳಾದರೂ ಸಿಗುತ್ತದಾ ಎಂದರೆ ಅದೂ ಇಲ್ಲ.

ತಪ್ಪು ಮಾಡಿದವರು ಮತ್ತು ಬೇರೆಯವರ ಕಷ್ಟದಲ್ಲಿ ಸ್ಪಂದಿಸದಿರುವವರನ್ನು ಹೇಗೆ ಜವರಾಯ ಅಟಕಾಯಿಸಿಕೊಳ್ಳುತ್ತಾನೆ  ಎನ್ನುವುದು ಚಿತ್ರದ ಕಾನ್ಸೆಪುr. ಇದನ್ನು ಹೇಳುವುದಕ್ಕೆ ಏಳು ಪಾತ್ರಗಳು ಮತ್ತು ಒಂಟಿ ಮನೆಯನ್ನು ಬಳಸಿಕೊಂಡಿದ್ದಾರೆ ಅಭಯ್‌ ಚಂದ್ರ. ಚಿತ್ರದ ಮೊದಲಾರ್ಧ ಆಸಕ್ತಿಕರವಾಗಿದೆ. ಆದರೆ, ಬರಬರುತ್ತಾ ಪ್ರೇಕ್ಷಕರ ಮನಸ್ಸಲ್ಲಿ ಚಿತ್ರವು ಹಳಿ ತಪ್ಪುತ್ತಾ ಹೋಗುತ್ತದೆ.

ಕೊನೆಗೆ ಒಂದಿಷ್ಟು ನಿರಾಸೆ, ಇನ್ನೊಂದಿಷ್ಟು ಗೊಂದಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉತ್ತರ ಸಿಗದ ಪ್ರಶ್ನೆಗಳೊಂದಿಗೆ ಚಿತ್ರ ಮುಗಿಯುತ್ತದೆ. ಇರುವ ಕೆಲವೇ ಪಾತ್ರಗಳಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂದು ಹೇಳುವುದು ತುಸು ಕಷ್ಟವೇ. ಇನ್ನು ತಾಂತ್ರಿಕವಾಗಿ ಹೇಳುವುದಾದರೆ, ವಿನಯ್‌ ಚಂದ್ರ ಅವರ ಹಿನ್ನೆಲೆ ಸಂಗೀತ ಮತ್ತು ನಂದಕುಮಾರ್‌ ಅವರ ಛಾಯಾಗ್ರಹಣ ಗಮನಸೆಳೆಯುತ್ತದೆ.

ಚಿತ್ರ: ಜವ
ನಿರ್ದೇಶನ: ಅಭಯ್‌ ಚಂದ್ರ
ನಿರ್ಮಾಣ: ವಚನ್‌ ಶೆಟ್ಟಿ, ವೀರೇಂದ್ರ ವಿದ್ಯಾವ್ರತ್‌
ತಾರಾಗಣ: ಸಾಯಿಕುಮಾರ್‌, ದಿಲೀಪ್‌ ರಾಜ್‌, ಭವಾನಿ ಪ್ರಕಾಶ್‌, ನಾಗಿಣಿ ಭರಣ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next