Advertisement

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

01:00 AM Jun 15, 2024 | Team Udayavani |

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಒಂದು ತಿಂಗಳ ಹಿಂದೆ ವಾರವೊಂದರಲ್ಲಿ ನಾಲ್ಕು ಬಾರಿ ಕಾಣಿಸಿಕೊಂಡಿದ್ದ ಒಂಟಿ ಸಲಗ ಈಗ ಕಳೆದ ಎರಡು ದಿನಗಳಿಂದ ಮತ್ತೆ ವಾಹನ ಸವಾರರಿಗೆ ಪ್ರತ್ಯಕ್ಷವಾಗುತ್ತಿದೆ.

Advertisement

ಬುಧವಾರ ರಾತ್ರಿ ಬಸ್‌ ಸಂಚಾರಕ್ಕೆ ತಡೆಯೊಡ್ಡಿದ್ದ ಕಾಡಾನೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ರಸ್ತೆ ಬದಿ ಮತ್ತೆ ಕಾಣಸಿಕ್ಕಿದೆ. ಈ ಹಿಂದೆ ರಸ್ತೆಯ ಅಂಚಿನಲ್ಲಿ ಪ್ರತ್ಯಕ್ಷವಾಗುತ್ತಿದ್ದ ಸಲಗ ಶುಕ್ರವಾರ ಘಾಟಿಯ ಮೂರನೇ ತಿರುವಿನ ರಸ್ತೆ ಬದಿ ಇರುವ ಅರಣ್ಯ ಇಲಾಖೆಯ ಔಷಧ ಸಸ್ಯಗಳ ಸಂರಕ್ಷಣ ವನದ ಗೇಟಿನ ಮುಂಭಾಗವೇ ವಿಹಾರ ಆರಂಭಿಸಿತ್ತು.

ಆನೆ ಸುಮಾರು ಒಂದು ತಾಸಿಗಿಂತ ಅಧಿಕ ಹೊತ್ತು ಅದೇ ಸ್ಥಳದಲ್ಲಿ ವಿರಮಿಸಿತ್ತು. ಆನೆ ಗೇಟ್‌ ಮುರಿದು ಬರುವ ಸಾಧ್ಯತೆ ಇದ್ದ ಕಾರಣ ವಾಹನ ಸವಾರರು ಭೀತಿಗೊಳಗಾದರು. ಅರಣ್ಯ ಇಲಾಖೆ ಸಿಬಂದಿ ಆಗಮಿಸಿ ಆನೆಯನ್ನು ಅರಣ್ಯದತ್ತ ಅಟ್ಟಬೇಕಾಯಿತು.

ಬುಧವಾರ ರಾತ್ರಿ ಘಾಟಿಯ ಏಳು ಹಾಗೂ ಎಂಟನೇ ತಿರುವಿನ ಮಧ್ಯೆ ಕಾಡಾನೆ ಸರಕಾರಿ ಬಸ್‌ಗೆ ಅಡ್ಡ ನಿಂತ ಕಾರಣ ಅರ್ಧ ತಾಸಿಗಿಂತ ಅಧಿಕ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಶುಕ್ರವಾರ ಇಲ್ಲಿಂದ ಸುಮಾರು 4 ಕಿ.ಮೀ. ಕೆಳಭಾಗದಲ್ಲಿ ಕಾಡಾನೆ ಕಂಡು ಬಂದಿದೆ.

ಎರಡು ತಿಂಗಳಿನಿಂದ ಘಾಟಿಯಲ್ಲಿ ಹಗಲು-ರಾತ್ರಿ ಕಾಡಾನೆ ಸಂಚಾರ ನಡೆಸುತ್ತಿರುವುದು ಸಾಮಾನ್ಯ ವೆಂಬಂತಾಗಿದೆ. ಇದುವರೆಗೂ ಈ ಕಾಡಾನೆ ಯಾವುದೇ ವಾಹನಕ್ಕೆ ತೊಂದರೆ ಕೊಟ್ಟಿಲ್ಲ. ತನ್ನ ಪಾಡಿಗೆ ಆಹಾರ ಸೇವಿಸಿ ತೆರಳುತ್ತಿದೆ.

Advertisement

ಆದರೆ ಮದವೇರಿ ಮಧ್ಯರಾತ್ರಿ ಸಂಚರಿಸುವ ವಾಹನಗಳ ಮೇಲೆ ದಾಳಿ ಮಾಡಿದರೆ ಎಂಬ ಭಯ ಸವಾರರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next