ಮುಂಬಯಿ: ಚಾರ್ಕೋಪ್ ಕನ್ನಡಿಗರ ಬಳಗದ ವಾರ್ಷಿಕ ವಿಹಾರಕೂಟವು ಇತ್ತೀಚೆಗೆ ಮಡ್ ಐಲ್ಯಾಂಡ್‌ನಲ್ಲಿ ವೈವಿಧ್ಯ ಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಕೃಷ್ಣ ಶೆಟ್ಟಿ ಮತ್ತು ಕೃಷ್ಣ ಅಮೀನ್, ಕಾರ್ಯದರ್ಶಿ ವಸಂತಿ ಸಾಲ್ಯಾನ್, ಕೋಶಾಧಿಕಾರಿ ಗೌರಿ ಪಣಿಯಾಡಿ ನೇತೃತ್ವದಲ್ಲಿ ವಿಹಾರಕೂಟವು ನೆರವೇರಿತು.
ಎರಡು ಬಸ್‌ಗಳ ಮುಖಾಂತರ ಸುಮಾರು 120ಕ್ಕೂ ಅಧಿಕ ಸದಸ್ಯ ಬಾಂಧವರು ವಿಹಾರ ಕೂಟದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆಯ ಉಪಾಹಾರವನ್ನು ಆಯೋಜಿಸಲಾಗಿತ್ತು. ಬಳಗದ ಅಧ್ಯಕ್ಷ ಮಂಜುನಾಥ ಬನ್ನೂರು ಹಾಗೂ ಅತಿಥಿಯಾಗಿ ಪತ್ತನಾಜೆ ತುಳುಚಿತ್ರ ನಿರ್ಮಾಪಕ, ಕಲಾಜಗತ್ತು ವಿಜಯಕುಮಾರ್ ಶೆಟ್ಟಿ ಅವರು ಆಗಮಿಸಿದ್ದರು.
ಕೋಶಾಧಿಕಾರಿ ಗೌರಿ ಪಣಿಯಾಡಿ, ಜತೆ ಕಾರ್ಯದರ್ಶಿ ವಾಸಂತಿ ಸಾಲ್ಯಾನ್ ಅವರ ಮುಂದಾಳತ್ವದಲ್ಲಿ ಉಪಾಧ್ಯಕ್ಷರಾದ ಕೃಷ್ಣ ಶೆಟ್ಟಿ ಮತ್ತು ಕೃಷ್ಣ ಅಮೀನ್ ಹಾಗೂ ಕಾರ್ಯದರ್ಶಿ ರಘುನಾಥ ಶೆಟ್ಟಿ ಅವರ ಮೇಲ್ವಿಚಾರಣೆಯಲ್ಲಿ ವಿವಿಧ ಸಾಂಸ್ಕೃತಿಕ ಆಟೋಟ ಸ್ಪರ್ಧೆಗಳು ನಡೆದವು. ಬಳಗದ ಹಿರಿಯ ಮತ್ತು ಕಿರಿಯ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ದಂಪತಿಗಳಿಗಾಗಿ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಭೋಜನದ ಅನಂತರ ವಿವಿಧ ವಿನೋದಾವಳಿ ನಡೆದು ಎಲ್ಲರನ್ನು ರಂಜಿಸಿತು. ಅಧ್ಯಕ್ಷ ಮಂಜುನಾಥ ಬನ್ನೂರು ಅಧ್ಯಕ್ಷತೆಯಲ್ಲಿ ನಡೆದಸಭಾ ಕಾರ್ಯಕ್ರಮದಲ್ಲಿ ಕಲಾಜಗತ್ತು ವಿಜಯ ಕುಮಾರ್ ಶೆಟ್ಟಿ ತಮ್ಮ ನೂತನ ಚಿತ್ರ ಪತ್ತನಾಜೆಯ
ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಅದರ ಧ್ವನಿ
ಸುರುಳಿಯನ್ನು ಬಳಗದ ಸದಸ್ಯರಿಗೆಧರ್ಮಾರ್ಥ ನೀಡುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಕೊನೆಯಲ್ಲಿ ಸಮೂಹ ನೃತ್ಯ ನಡೆಯಿತು. ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಕರುಣಾಕರ ಕನ್ನರ್‌ಪಾಡಿ, ಮಹೇಂದ್ರ ಕಾಂಚನ್, ಶಾಂತಾ ಭಟ್, ಪದ್ಮಾವತಿ ಶೆಟ್ಟಿ, ತನುಜಾ ಭಟ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.